[ಕೊಲೆ ಪ್ರಕರಣ] ಪ್ರತ್ಯಕ್ಷದರ್ಶಿ ಸಾಕ್ಷಿಗಳಲ್ಲಿ ವಿರೋಧಾಭಾಸ; ಮೂವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ವಜಾ

ಕ್ರಿಮಿನಲ್‌ ಪ್ರಕರಣಗಳ ನ್ಯಾಯದಾನದ ವೇಳೆ ಪ್ರಕರಣದ ಸಾಕ್ಷಿಗೆ ಸಂಬಂಧಿಸಿದಂತೆ ಎರಡು ವಿಭಿನ್ನ ದೃಷ್ಟಿಕೋನ ಕಂಡುಬಂದಾಗ ಯಾವ ದೃಷ್ಟಿಕೋನವು ಆರೋಪಿಗೆ ಅನುಕೂಲಕರವಾಗಿರುತ್ತದೆಯೋ ಅದನ್ನು ಪರಿಗಣಿಸಬೇಕಾಗುತ್ತದೆ ಎಂದ ಪೀಠ.
Justices K Somashekar and Rajesh Rai K
Justices K Somashekar and Rajesh Rai K

"ಪ್ರತ್ಯಕ್ಷದರ್ಶಿ ಸಾಕ್ಷಿಗಳ ವಿಚಾರದಲ್ಲಿ ವಿರೋಧಾಭಾಸಗಳಿದ್ದು, ಅವರ ಸಾಕ್ಷಿಗಳನ್ನು ಬೇರೆ ಸಂಗತಿಗಳ ಜೊತೆ ದೃಢೀಕರಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ" ಎಂದಿರುವ ಕರ್ನಾಟಕ ಹೈಕೋರ್ಟ್‌ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮೂವರನ್ನು ಇತ್ತೀಚೆಗೆ ಖುಲಾಸೆಗೊಳಿಸಿದೆ.

ಕೊಡಗಿನ ವಿರಾಜಪೇಟೆಯ ಪುಷ್ಪೇಶ್‌ ಮತ್ತು ಕೆ ಆರ್‌ ರದೀಶ್‌ ಮತ್ತು ಪಿರಿಯಾಪಟ್ಟಣದ ಪಿ ವಿ ವಿನಯ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಕೆ ರಾಜೇಶ್‌ ರೈ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ. ಅಲ್ಲದೇ ಶಸ್ತ್ರಾಸ್ತ್ರ ಕಾಯಿದೆ ಅಡಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೇ ವೇಳೆ ಹೈಕೋರ್ಟ್‌ ವಜಾ ಮಾಡಿದೆ.

ಕ್ರಿಮಿನಲ್‌ ಪ್ರಕರಣಗಳ ನ್ಯಾಯದಾನದ ವೇಳೆ ಪ್ರಕರಣದ ಸಾಕ್ಷಿಗೆ ಸಂಬಂಧಿಸಿದಂತೆ ಎರಡು ದೃಷ್ಟಿಕೋನ ಕಂಡುಬಂದಾಗ, ಒಂದು ಆರೋಪಿಯ ಅಪರಾಧದೆಡೆಗೆ ಬೆರಳು ಮಾಡಿ ಮತ್ತೊಂದು ಅವರ ಮುಗ್ಧತೆಯನ್ನು ತೋರಿದರೆ, ಯಾವ ದೃಷ್ಟಿಕೋನವು ಆರೋಪಿಗೆ ಅನುಕೂಲಕರವಾಗಿರುತ್ತದೆಯೋ ಅದನ್ನು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

“ಪುಷ್ಪೇಶ್‌ ಮತ್ತು ವಿನಯ ಹಾಗೂ ಸಂಪತ್‌ ಮತ್ತು ರಮೇಶ್‌ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರು ಮತ್ತು ಎಫ್‌ಐಆರ್‌ನಲ್ಲಿನ ವ್ಯತ್ಯಾಸಗಳ ಕುರಿತು ತನಿಖೆ ಅಥವಾ ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಷನ್‌ ವಿವರಿಸಿಲ್ಲ. ತನಿಖಾಧಿಕಾರಿಯು ಮೂವರು ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದು, ನಾಲ್ಕನೇ ಆರೋಪಿ ಸಂಪತ್‌ ಕುಮಾರ್‌ ಅವರ ಹೆಸರನ್ನು ಕೈಬಿಟ್ಟಿದ್ದರು. ದೂರನ್ನು ತಮ್ಮ ವಕೀಲ ಸುನೀಲ್‌ ಎಂಬವವರು ಬರೆದಿದ್ದು, ಅದನ್ನು ಪರಿಶೀಲಿಸಿಲ್ಲ ಎನ್ನುವ ಮೂಲಕ ಪ್ರಾಸಿಕ್ಯೂಷನ್‌ ಪರ ಸಾಕ್ಷಿಯಾಗಿರುವ ದೂರುದಾರರು ಪ್ರತಿಕೂಲ ಸಾಕ್ಷ್ಯವಾಗಿದ್ದಾರೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಮೇಲ್ಮನವಿದಾರರ ಪರ ವಕೀಲರು “ನೆರೆಹೊರೆಯವರಾದ ಇಬ್ಬರು ಪ್ರತ್ಯಕ್ಷದರ್ಶಿಗಳನ್ನು ಪ್ರಾಸಿಕ್ಯೂಷನ್‌ ಆಧರಿಸಿದೆ. ಆದರೆ, ಅವರ ಸಾಕ್ಷ್ಯವನ್ನು ಪರಿಶೀಲಿಸಲಾಗಿಲ್ಲ ಮತ್ತು ಆ ಸಾಕ್ಷ್ಯಗಳು ಅಸಂಗತವಾಗಿವೆ. ಕೊಲೆ ನಡೆಯುವಾಗ ಪ್ರತ್ಯಕ್ಷದರ್ಶಿಗಳು ಕೃತ್ಯ ತಡೆಯುವುದಕ್ಕಾಗಲಿ ಅಥವಾ ಆ ಸಂದರ್ಭದಲ್ಲಿ ಕಿರುಚಾಡಿ ಗಮನಸೆಳೆಯುವುದಾಗಲಿ ಮಾಡಿಲ್ಲ. ಅಲ್ಲದೇ, ಪೊಲೀಸರಿಗೆ ಮಾಹಿತಿಯನ್ನೂ ನೀಡಿಲ್ಲ. ಕೊಲೆಗೆ ಬಳಸಲಾದ ಶಸ್ತ್ರಾಸ್ತ್ರಗಳನ್ನು ಗುರುತಿಸಲೂ ಆ ಸಾಕ್ಷಿಗಳು ವಿಫಲವಾಗಿದ್ದಾರೆ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ದ್ವೇಷದ ಹಿನ್ನೆಲೆಯಲ್ಲಿ 2014ರ ಏಪ್ರಿಲ್‌ 17ರಂದು ಮನೆಗೆ ತೆರಳುತ್ತಿದ್ದ ನೌಶೀರ್‌ನನ್ನು ಕಾರಿನಲ್ಲಿ ತೆರಳಿದ್ದ ಕೊಡಗಿನ ವಿರಾಜಪೇಟೆಯ ಪುಷ್ಪೇಶ್‌ ಮತ್ತು ಕೆ ಆರ್‌ ರದೀಶ್‌ ಮತ್ತು ಪಿರಿಯಾಪಟ್ಟಣದ ಪಿ ವಿ ವಿನಯ ಅವರು ರಾಮನ್‌ ಎಂಬವರ ಮನೆಯ ಬಳಿ ಕೊಚ್ಚಿ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ನೌಶೀರ್‌ ಓಡಾಟದ ಬಗ್ಗೆ ಪುಷ್ಪೇಶ್‌ ಮತ್ತು ವಿನಯ ಅವರಿಗೆ ರದೀಶ್‌ ಮಾಹಿತಿ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಈ ನೆಲೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 302, 109, 120(ಬಿ), 341 ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಕೊಡಗಿನ ವಿಚಾರಣಾಧೀನ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈಗ ಇದನ್ನು ಹೈಕೋರ್ಟ್‌ ವಜಾ ಮಾಡಿದೆ.

ಮೇಲ್ಮನವಿದಾರ ಪರವಾಗಿ ಹಿರಿಯ ವಕೀಲರಾದ ಮೂರ್ತಿ ಡಿ. ನಾಯಕ್‌, ಎಂ ಅರುಣ ಶ್ಯಾಮ್‌, ವಕೀಲರಾದ ಗೌತಮ್‌ ಎಸ್‌. ಭಾರದ್ವಾಜ್‌, ಸುಯೋಗ್‌ ಹೇರೆಲೆ, ದಿನೇಶ್‌ ಕುಮಾರ್‌ ಕೆ.ರಾವ್‌ ಹಾಗೂ ಪ್ರಾಸಿಕ್ಯೂಷನ್‌ ಪರವಾಗಿ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾದ ವಿಜಯಕುಮಾರ್‌ ಮಜಗೆ ವಾದಿಸಿದ್ದರು.

Attachment
PDF
K R Pushpesh and others Vs State of Karnataka and others.pdf
Preview

Related Stories

No stories found.
Kannada Bar & Bench
kannada.barandbench.com