ಬೀದಿ ನಾಯಿಗಳ ನಿಯಂತ್ರಣ: ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್‌ ಅತೃಪ್ತಿ

ಹಕ್ಕುಗಳನ್ನು ಪ್ರತಿಪಾದಿಸುವವರು, ಕರ್ತವ್ಯಗಳನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಹಕ್ಕು ಮತ್ತು ಕರ್ತವ್ಯಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ಮೌಖಿಕವಾಗಿ ಹೇಳಿದ ನ್ಯಾಯಾಲಯ.
Dogs
Dogs

ಬೀದಿ ನಾಯಿಗಳ ಸಂತಾನಹರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಣಿಗಳ ಜನನ ನಿಯಂತ್ರಣ (ನಾಯಿ) ನಿಯಮಗಳ ಜಾರಿಗೆ ಮೀನಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಮೂರು ವಾರಗಳಲ್ಲಿ ಸಮರ್ಪಕ ಉತ್ತರ ಕೊಡದಿದ್ದರೆ, ಸೂಕ್ತ ಆದೇಶ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ತುಮಕೂರಿನ ವಕೀಲ ಎಲ್ ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಈ ವೇಳೆ ಅರ್ಜಿಗೆ ಉತ್ತರಿಸಲು ಸರ್ಕಾರದ ಪರ ವಕೀಲರು ಕಾಲಾವಕಾಶ ಕೋರಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು ಈ ವರ್ಷದ ಜನವರಿಯಲ್ಲಿ ಉತ್ತರಿಸುವುದಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಕೊನೆಯ ಬಾರಿಗೆ ಕಾಲಾವಕಾಶ ಕೇಳಿದ್ದರು. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರದ ಈ ನಡೆ ಒಪ್ಪಲಾಗದು. ಮೂರು ವಾರಗಳಲ್ಲಿ ಉತ್ತರಿಸಬೇಕು. ಮತ್ತೆ ಕಾಲಾವಕಾಶ ನೀಡುವುದಿಲ್ಲ ಎಂದು ಸರ್ಕಾರಕ್ಕೆ ತಾಕೀತು ಮಾಡಿ ವಿಚಾರಣೆಯನ್ನು ನವೆಂಬರ್‌ 15ಕ್ಕೆ ಮುಂದೂಡಿತು.

ಉದ್ದೇಶ ಸರಿ; ರೀತಿಯೂ ಸರಿ ಇರಬೇಕು: ಬೀದಿ ನಾಯಿಗಳಿಗೆ ಆಹಾರ ಪೂರೈಸುವುದು ಒಳ್ಳೆಯ ಕಾರ್ಯ. ಆದರೆ, ಅದರ ರೀತಿಯೂ ಸರಿ ಇರಬೇಕು. ನಿಗದಿತ ಸ್ಥಳದಲ್ಲಿ ಅದನ್ನು ಮಾಡಿದರೆ ಉತ್ತಮ. ಇಲ್ಲದಿದ್ದರೆ ದಾರಿಯಲ್ಲಿ ನಡೆದು ಹೋಗುವವರು, ಆಯಾ ಪ್ರದೇಶದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತದೆ. ವಿಧಾನಸೌಧದ ಗೇಟಿನ ಮುಂಭಾಗವೇ ಕೆಲವರು ಬೆಳಗಿನ ಜಾವ ಪ್ರಾಣಿಗಳಿಗೆ ಆಹಾರ ತಂದು ಹಾಕುತ್ತಾರೆ. ಪ್ರಾಣಿಗಳ ಬಗ್ಗೆ ಅನುಕಂಪ ತೋರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅವ್ಯವಸ್ಥೆ ಸೃಷ್ಟಿಯಾಗಬಾರದು ಎಂಬುದಷ್ಟೇ ನಮ್ಮ ಕಳಕಳಿ ಎಂದು ನ್ಯಾಯಾಲಯ ಕಿವಿಮಾತು ಹೇಳಿತು.

ಮುಂದುವರೆದು, ಅನೇಕ ಕಡೆ ಬೆಳಗಿನ ಅವಧಿಯಲ್ಲಿ ಶಾಲೆಗೆ ಹೋಗುವ ಮಕ್ಕಳಿಗೂ ಇದರಿಂದ ತೊಂದರೆ ಆಗುವುದನ್ನು ತಳ್ಳಿ ಹಾಕುವಂತಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಬೀದಿ ನಾಯಿಗಳು ಸೇರಿದಂತೆ ಇತರೆ ಪ್ರಾಣಿ-ಪಕ್ಷಿಗಳ ಬಗ್ಗೆ ಕಾಳಜಿ ತೋರುವವರು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳನ್ನು ಪಾಲಿಸಬೇಕು. ಇಂತಹ ವಿಚಾರಗಳಲ್ಲಿ ನಾಗರಿಕರು ಸರ್ಕಾರದೊಂದಿಗೆ ಸಹಕರಿಸಬೇಕು. ಹಕ್ಕುಗಳನ್ನು ಪ್ರತಿಪಾದಿಸುವವರು, ಕರ್ತವ್ಯಗಳನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಹಕ್ಕು ಮತ್ತು ಕರ್ತವ್ಯಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ಪೀಠ ಮೌಖಿಕವಾಗಿ ಹೇಳಿತು.

Related Stories

No stories found.
Kannada Bar & Bench
kannada.barandbench.com