Jail
Jail

ಜೀವಾವಧಿ ಶಿಕ್ಷೆಗೆ ಗುರಿಯಾದಾತ 20 ವರ್ಷ ಜೈಲು ಪೂರೈಸಿದ ನಂತರ ಬಿಡುಗಡೆ ಹೊಂದುವ ಕಾನೂನಾತ್ಮಕ ಹಕ್ಕಿಲ್ಲ: ಹೈಕೋರ್ಟ್‌

“ಕ್ಷಮಾದಾನ ಅಥವಾ ಅವಧಿಗೂ ಮುನ್ನ ಅಪರಾಧಿಯನ್ನು ಬಿಡುಗಡೆ ಮಾಡುವ ಪ್ರಶ್ನೆಯು ಶಾಸನಬದ್ಧ ನಿಬಂಧನೆ ಮತ್ತು ನೀತಿಯಡಿ ಸೂಕ್ತ ಸರ್ಕಾರಕ್ಕೆ ಮಾತ್ರ ಇದೆ” ಎಂದಿರುವ ಹೈಕೋರ್ಟ್‌.
Published on

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯು 20 ವರ್ಷ ಜೈಲು ಶಿಕ್ಷೆ ಪೂರೈಸಿದ ಬಳಿಕ ಸ್ವಯಂಚಾಲಿತವಾಗಿ ಬಿಡುಗಡೆ ಮಾಡುವ ಯಾವುದೇ ತೆರನಾದ ಕಾನೂನಾತ್ಮಕ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಮೈಸೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಬೆಂಗಳೂರಿನ ಕೋರಮಂಗಲದ ಕಿಶನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

Justice Suraj Govindraj
Justice Suraj Govindraj

“ಕ್ಷಮಾದಾನ ಅಥವಾ ಅವಧಿಗೂ ಮುನ್ನ ಅಪರಾಧಿಯನ್ನು ಬಿಡುಗಡೆ ಮಾಡುವ ಪ್ರಶ್ನೆಯು ಶಾಸನಬದ್ಧ ನಿಬಂಧನೆ ಮತ್ತು ನೀತಿಯಡಿ ಸೂಕ್ತ ಸರ್ಕಾರಕ್ಕೆ ಮಾತ್ರ ಇದೆ” ಎಂದು ನ್ಯಾಯಾಲಯ ಹೇಳಿದೆ.

“ಅಪರಾಧಿಯು 20 ವರ್ಷ ಶಿಕ್ಷೆ ಪೂರೈಸಿದ ಬಳಿಕ ಜೀವಾವಧಿ ಶಿಕ್ಷೆಗೆ ಗುರಿಯಾದವನನ್ನು ಬಿಡುಗಡೆ ಮಾಡಬಹುದು ಐಪಿಸಿ ಸೆಕ್ಷನ್‌ 57 ಹೇಳುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಕಾನೂನಿನ ಅಡಿ ಪರಿವರ್ತನೆ ಅಥವಾ ಕ್ಷಮಾದಾನ ಸಿಗದ ಹೊರತು ಜೈಲು ಶಿಕ್ಷೆಯನ್ನು ಸೀಮಿತಗೊಳಿಸುವ ನಿರ್ದಿಷ್ಟ ನ್ಯಾಯಾಂಗ ನಿರ್ದೇಶನದ ಗೈರಿನ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಬದುಕಿರುವವರೆಗಿನ ಶಿಕ್ಷೆ ಎಂದು ಪರಿಗಣಿಸಬೇಕಾಗುತ್ತದೆ” ಎಂದೂ ಪೀಠ ಹೇಳಿದೆ.

ಅಪರಾಧಿ ಕಿಶನ್‌ ಜೈಲಿನಲ್ಲಿ 20 ವರ್ಷ ಕಳೆದಿರುವುದರಿಂದ ಸರ್ಕಾರಕ್ಕೆ ಕ್ಷಮಾದಾನ ಕೋರಿಕೆ ಸಲ್ಲಿಸಲು ಅರ್ಹರಾಗಿದ್ದಾರೆ. ರಾಜ್ಯ ಸರ್ಕಾರ ಕ್ಷಮಾದಾನ ನೀತಿ ಮತ್ತು ಸೂಕ್ತ ಶಾಸನಬದ್ಧ ನಿಬಂಧನೆಗಳ ಅಡಿ ಕ್ಷಮಾದಾನ ಕೋರಬಹುದಾಗಿದೆ. ಇಂಥ ಅರ್ಜಿಯನ್ನು ಸಲ್ಲಿಸಿದರೆ ಸೂಕ್ತ ಸರ್ಕಾರ/ಶಿಕ್ಷೆ ಪರಿಶೀಲನಾ ಮಂಡಳಿಯು ಪ್ರಕರಣದ ಆಧಾರದ ಮೇಲೆ ಅಪರಾಧಿಯು ಶಿಕ್ಷೆ ಅನುಭವಿಸಿರುವ ಅವಧಿ, ಅರ್ಜಿದಾರನ ನಡತೆ, ಅಪರಾಧದ ಸ್ವರೂಪ, ಸಂತ್ರಸ್ತರ ಹಿತಾಸಕ್ತಿ ಮತ್ತು ಅನ್ವಯಿಸುವ ನೀತಿಯನ್ನು ಪರಿಗಣಿಸಿ ನಿರ್ಧರಿಸಬಹುದು” ಎಂದು ಹೇಳಿದೆ.

ಪ್ರಕರಣದ ಹಿನ್ನೆಲೆ: ಇಬ್ಬರು ಮಕ್ಕಳನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಅರ್ಜಿದಾರ ಕಿಶನ್‌ ಸೇರಿ ಮೂವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಈ ಪ್ರಕರಣದ ಮೇಲ್ಮನವಿ ಪ್ರಕ್ರಿಯೆಯು 2013ರಲ್ಲಿ ಪೂರ್ಣಗೊಂಡಿದ್ದು, ಹೈಕೋರ್ಟ್‌ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು. ಐಪಿಸಿ ಸೆಕ್ಷನ್‌ 57ರ ಅಡಿ 14 ವರ್ಷ ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ಶಿಕ್ಷೆಯ ಅವಧಿಯಲ್ಲಿ ಯಾವುದೇ ಕಡಿತ ಇರುವುದಿಲ್ಲ ಎಂಬ ಸ್ಪಷ್ಟ ನಿರ್ದೇಶನವನ್ನೂ ನ್ಯಾಯಾಲಯ ನೀಡಿತ್ತು. 2025ರ ಜನವರಿ 15ರಂದು 20 ವರ್ಷ ಶಿಕ್ಷೆ ಪೂರೈಸಿದ್ದ ಕಿಶನ್‌, ಐಪಿಸಿ ಸೆಕ್ಷನ್‌ 57ರ ಅಡಿ ಕ್ಷಮಾದಾನಕ್ಕೆ ಅರ್ಹವಾಗಿರುವುದರಿಂದ ಬಿಡುಗಡೆ ಮಾಡುವಂತೆ ಕೋರಿದ್ದರು.

Attachment
PDF
Kishan Vs State of Karnataka
Preview
Kannada Bar & Bench
kannada.barandbench.com