ಸಂತ್ರಸ್ತರ ವಯಸ್ಸು ಸಾಬೀತಾಗದೇ ಹೋದರೆ ಪೋಕ್ಸೊ ಅಡಿ ಶಿಕ್ಷೆಯಾಗದು: ಪಾಟ್ನಾ ಹೈಕೋರ್ಟ್

ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಸಂತ್ರಸ್ತರ ಹೇಳಿಕೆಯನ್ನು ವಸ್ತುನಿಷ್ಠ ಸಾಕ್ಷ್ಯವಾಗಿ ಪರಿಗಣಿಸಲಾಗದು ಎಂದು ನ್ಯಾಯಮೂರ್ತಿ ಅಲೋಕ್ ಕುಮಾರ್ ಪಾಂಡೆ ಹೇಳಿದರು.
POCSO ACT
POCSO ACT
Published on

ಸಂತ್ರಸ್ತರ ವಯಸ್ಸು ಸಾಬೀತಾಗದೇ ಹೋದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ) ಅಡಿ ಶಿಕ್ಷೆಯಾಗದು ಎಂದು ಪಾಟ್ನಾ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ದೀಪಕ್‌ ಕುಮಾರ್‌ ಮತ್ತು ಸರ್ಕಾರದ ನಡುವಣ ಪ್ರಕರಣ].

ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಸಂತ್ರಸ್ತರ ಹೇಳಿಕೆಯನ್ನು ವಸ್ತುನಿಷ್ಠ ಸಾಕ್ಷ್ಯವಾಗಿ ಪರಿಗಣಿಸಲಾಗದು ಎಂದು ನ್ಯಾಯಮೂರ್ತಿ ಅಲೋಕ್ ಕುಮಾರ್ ಪಾಂಡೆ ಅವರಿದ್ದ ಏಕಸದಸ್ಯ ಪೀಠ ಹೇಳಿತು.

ಆದ್ದರಿಂದ ಸಂತ್ರಸ್ತೆಯ ವಯಸ್ಸನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಯಾವುದೇ ಯತ್ನ ಮಾಡಿಲ್ಲ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತು.

"ಸ್ಪಷ್ಟವಾಗಿ, ಜರ್ನೈಲ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಡಿಸಿದ ತಾರ್ಕಿಕತೆಯ ಬೆಳಕಿನಲ್ಲಿ ಕಾಯಿದೆಯ ಅಡಿಯಲ್ಲಿ ಸೂಚಿಸಲಾದ ಕಾರ್ಯವಿಧಾನವನ್ನು ಪ್ರಾಸಿಕ್ಯೂಷನ್‌ ಪಾಲಿಸಿಲ್ಲ. ಘಟನೆ ನಡೆದ ದಿನಾಂಕಕ್ಕೆ ಹೋಲಿಸಿದರೆ ಸಂತ್ರಸ್ತೆ ಅಪ್ರಾಪ್ತೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಯಾವುದೇ ಯತ್ನ ನಡೆಸಿಲ್ಲ" ಎಂದಿತು.  

ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂಬ ಮೇಲ್ಮನವಿದಾರನ ವಾದದಲ್ಲಿ ಹುರುಳಿರುವುದನ್ನು ಕಂಡುಕೊಂಡ ಪೀಠ ವಿಚಾರಣಾ ನ್ಯಾಯಾಲಯದ ಶಿಕ್ಷೆ ಆದೇಶವನ್ನು ರದ್ದುಗೊಳಿಸಿತು.

ಸುಮಾರು 14 ವರ್ಷ ವಯಸ್ಸಿನ ಸಂತ್ರಸ್ತೆಯನ್ನು ಮದುವೆಯ ಉದ್ದೇಶದಿಂದ ಮೇಲ್ಮನವಿದಾರ ಅಪಹರಿಸಿದ್ದರು ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿತ್ತು. ಆದರೆ ʼಸಾಕ್ಷ್ಯ ನುಡಿಯುವ ವೇಳೆ ಸಂತ್ರಸ್ತೆ ಖುದ್ದು ತನ್ನ ವಯಸ್ಸನ್ನು 20 ವರ್ಷ ಎಂದು ಹೇಳಿಕೊಂಡಿದ್ದಾಳೆ. ವಿಚಾರಣಾ ನ್ಯಾಯಾಲಯ ಸಂತ್ರಸ್ತೆಯ ವಯಸ್ಸನ್ನು ಖಚಿತಪಡಿಸಿಲ್ಲ ತೀರ್ಪಿನಲ್ಲಿ ಆಕೆಯ ವಯಸ್ಸಿನ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲʼ ಎಂಬುದು ಮೇಲ್ಮನವಿದಾರನ ವಾದವಾಗಿತ್ತು.

Kannada Bar & Bench
kannada.barandbench.com