ಪುಷ್ಟೀಕರಿಸದ, ಕೇವಲ ಹಿತಾಸಕ್ತ ಸಾಕ್ಷಿಗಳ ಸಾಕ್ಷ್ಯ ಆಧರಿಸಿ ಶಿಕ್ಷೆ ನೀಡುವುದು ಸಮರ್ಥನೀಯವಲ್ಲ: ಸುಪ್ರೀಂ

ಸಾಕ್ಷಿಗಳ ಸಾಕ್ಷ್ಯವು ಭಾಗಶಃ ವಿಶ್ವಾಸಾರ್ಹ ಮತ್ತು ಭಾಗಶಃ ವಿಶ್ವಾಸಾರ್ಹವಲ್ಲದ ಪ್ರಕರಣಗಳಲ್ಲಿ, ನ್ಯಾಯಾಲಯ ಜಾಗರೂಕರಾಗಿರಬೇಕಿದ್ದು ವಿಶ್ವಾಸಾರ್ಹ ಸಾಕ್ಷ್ಯದಿಂದ ಹೆಚ್ಚಿನ ದೃಢೀಕರಣ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು.
Supreme Court of India
Supreme Court of India

ಪುಷ್ಟೀಕರಿಸಬಹುದಾದ ಸಾಕಷ್ಟು ಅಂಶಗಳಿಲ್ಲದ ಹಿತಾಸಕ್ತ ಸಾಕ್ಷಿಗಳ ಮೌಖಿಕ ಸಾಕ್ಷ್ಯ ಆಧರಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸುವುದು ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ [ನಂದಲಾಲ್‌ ಮತ್ತು ಛತ್ತೀಸ್‌ಗಢ ಸರ್ಕಾರ ನಡುವಣ ಪ್ರಕರಣ].

ಕೊಲೆಯ ಅಪರಾಧಕ್ಕಾಗಿ ಮೂವರು ಅಪೀಲುದಾರರು ಮತ್ತಿತರ ಆರೋಪಿಗಳಿಗೆ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದ್ದ ಛತ್ತೀಸ್‌ಗಢ ಹೈಕೋರ್ಟ್‌ ತೀರ್ಪನ್ನು ಬದಿಗೆ ಸರಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್ ಹಾಗೂ ಸಂಜಯ್ ಕರೋಲ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಎಫ್‌ಐಆರ್ ದಾಖಲಿಸುವಲ್ಲಿ ಉಂಟಾಗಿರುವ ವಿಳಂಬ, ಸಮಕಾಲೀನ ದಾಖಲೆಗಳಲ್ಲಿ ಆರೋಪಿಗಳ ಹೆಸರು ಉಲ್ಲೇಖಿಸದಿರುವುದು ಇವುಗಳನ್ನು ಗಮನಿಸಿದಾಗ ಆರೋಪಿಗಳನ್ನು ಪ್ರಕರಣದಲ್ಲಿ ಸುಳ್ಳೇ ಸಿಲುಕಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಪೀಠ ವಿವರಿಸಿತು.

ಅಕ್ರಮವಾಗಿ ಇತರರೊಂದಿಗೆ ಸೇರಿದ ಮೇಲ್ಮನವಿದಾರರು ಮಾರಕಾಯುಧಗಳೊಂದಿಗೆ ಮೃತರ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣರಾದರು ಎಂದು ಆರೋಪಿಸಲಾಗಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯದ ಮುಂದೆ ಮೇಲ್ಮನವಿದಾರರು ತಮ್ಮ ಹೆಸರನ್ನು ವಿಲೀನ ಪಂಚನಾಮೆ, ಪಂಚನಾಮೆ ಮತ್ತು ಸ್ಥಳ ಪಂಚನಾಮೆಯಂತಹ ಯಾವುದೇ ದಾಖಲೆಗಳಲ್ಲಿ ಉಲ್ಲೇಖಿಸಿಲ್ಲ ಬದಲಿಗೆ ಬೇರೆ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಅಲ್ಲದೆ ಎಫ್‌ಐಆರ್ ದಾಖಲಿಸುವಲ್ಲಿನ ಅತಿಯಾದ ವಿಳಂಬವನ್ನು ಪ್ರಾಸಿಕ್ಯೂಷನ್ ವಿವರಿಸಿಲ್ಲ ಎಂದು ವಾದಿಸಿದ್ದರು.

ಹಿತಾಸಕ್ತ ಸಾಕ್ಷಿಗಳನ್ನೇ ಸಂಪೂರ್ಣವಾಗಿ ಆಧರಿಸಿ ಶಿಕ್ಷೆ ವಿಧಿಸಲಾಗಿದ್ದು ಅವರ ಸಾಕ್ಷ್ಯ ವಿಶ್ವಾಸಾರ್ಹವಲ್ಲ ಹೀಗಾಗಿ ಅಂತಹ ಸಾಕ್ಷಿಗಳನ್ನು ದೃಢೀಕರಿಸದೆ ಶಿಕ್ಷೆ ವಿಧಿಸುವುದು ಸಮರ್ಥನೀಯವಲ್ಲ ಎಂಬುದು ಮೇಲ್ಮನವಿದಾರರ ವಾದವಾಗಿತ್ತು.

ಇದಕ್ಕೆ ವ್ಯತಿರಿಕ್ತ ವಾದ ಮಂಡಿಸಿದ್ದ ಪ್ರಾಸಿಕ್ಯೂಷನ್‌ ಎಲ್ಲಾ ಮೂವರು ಪ್ರತ್ಯಕ್ಷದರ್ಶಿಗಳು ಮೇಲ್ಮನವಿದಾರರ ವಿರುದ್ಧ ಸಾಕ್ಷ್ಯ ನುಡಿದಿದ್ದಾರೆ ಎಂದಿತು.

ಸಾಕ್ಷಿಗಳು ಹಿತಾಸಕ್ತ ಸಾಕ್ಷಿಗಳಾಗಿರುವುದರಿಂದ ಅವರ ಸಾಕ್ಷ್ಯವನ್ನು ನಂಬಲರ್ಹ, ವಿಶ್ವಾಸಾರ್ಹ ಮತ್ತು ತರ್ಕಬದ್ಧವೆಂದು ಕಂಡುಬಂದಾಗ ಮಾತ್ರ ಅವರು ನೀಡಿದ ಸಾಕ್ಷ್ಯ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಸಹ ಹೇಳಲಾಗಿದೆ. 

ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಲಾಗಿದೆ ಎಂಬ ವಾದವನ್ನು ಪ್ರಾಸಿಕ್ಯೂಷನ್ ತಳ್ಳಿಹಾಕಿತು, ಶಂಕೆಗೆ ಆಸ್ಪದವಿಲ್ಲದಂತೆ ಪ್ರಕರಣವನ್ನು ನಿರೂಪಿಸಲಾಗಿದೆ ಎಂದು ವಾದಿಸಿತ್ತು.

ಪ್ರಕರಣ ಪರಿಶೀಲಿಸುವಾಗ, ಸಾಕ್ಷಿಗಳ ಸಾಕ್ಷ್ಯವು ಭಾಗಶಃ ವಿಶ್ವಾಸಾರ್ಹ ಮತ್ತು ಭಾಗಶಃ ವಿಶ್ವಾಸಾರ್ಹವಲ್ಲದ ಪ್ರಕರಣಗಳಲ್ಲಿ, ನ್ಯಾಯಾಲಯ ಜಾಗರೂಕವಾಗಿರಬೇಕಿದ್ದು, ಕಾಳನ್ನು ಜೊಳ್ಳಿನಿಂದ ಬೇರ್ಪಡಿಸುವಂತೆ ವಿಶ್ವಾಸಾರ್ಹ ಸಾಕ್ಷ್ಯದಿಂದ ಹೆಚ್ಚಿನ ದೃಢೀಕರಣ ಪಡೆಯಬೇಕು ಎಂದು ಪೀಠ ಹೇಳಿತು.

ಪ್ರಕರಣದಲ್ಲಿ ಸಮರ್ಥನೀಯ ಪುಷ್ಟೀಕರಣ ಇಲ್ಲದಿರುವುದನ್ನು ಪರಿಗಣಿಸಿದ, ನ್ಯಾಯಾಲಯ,  ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ ಮೇಲ್ಮನವಿದಾರರನ್ನು ಖುಲಾಸೆಗೊಳಿಸಿತು.

Kannada Bar & Bench
kannada.barandbench.com