ಜೀ ದಾವೆ: ʼಆಪ್ ಕಿ ಅದಾಲತ್ʼ ಸಂಚಿಕೆ ಪ್ರಸಾರ ಮಾಡುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಇಂಡಿಯಾ ಟಿವಿ

ಶಿವಸೇನಾ ನೇತಾರ ಬಾಳಾ ಠಾಕ್ರೆ ಅವರನ್ನು ಸಂದರ್ಶಿಸಿದ್ದ ಆಪ್ ಕಿ ಅದಾಲತ್ ಸಂಚಿಕೆಯನ್ನು ಪ್ರಸಾರ ಮಾಡಿ ಕೃತಿಸ್ವಾಮ್ಯ ಉಲ್ಲಂಘಿಸಿದ್ದಕ್ಕಾಗಿ ರಜತ್ ಶರ್ಮಾ ಮತ್ತು ಇಂಡಿಯಾ ಟಿವಿ ವಿರುದ್ಧ ಝೀ ವಾಹಿನಿ ಮೊಕದ್ದಮೆ ಹೂಡಿತ್ತು.
Zee Media, Rajat Sharma
Zee Media, Rajat SharmaFacebook

ಜನಪ್ರಿಯ ಕಾರ್ಯಕ್ರಮ 'ಆಪ್ ಕಿ ಅದಾಲತ್'ಗೆ ಸಂಬಂಧಿಸಿದ 1992- 97ರ ನಡುವಿನ ಸಂಚಿಕೆಗಳನ್ನು ಪ್ರಸಾರ ಮಾಡುವುದಿಲ್ಲ ಎಂದು ಪತ್ರಕರ್ತ ರಜತ್ ಶರ್ಮಾ ಅವರಿಂದ ಮತ್ತು ಸುದ್ದಿ ವಾಹಿನಿ ಇಂಡಿಯಾ ಟಿವಿಯಿಂದ ದೆಹಲಿ ಹೈಕೋರ್ಟ್‌ಗೆ ಮುಚ್ಚಳಿಕೆ ಸಲ್ಲಿಸಲಾಗಿದೆ [ಝೀ ಮೀಡಿಯಾ ಕಾರ್ಪೊರೇಶನ್ ಲಿಮಿಟೆಡ್ ಮತ್ತು ರಜತ್‌ ಶರ್ಮಾ ಇನ್ನಿತರರ ನಡುವಣ ಪ್ರಕರಣ].

ಬೇರೆ ಸುದ್ದಿಗಳ ಪ್ರಸಾರದ ವೇಳೆ ಒಂದೊಮ್ಮೆ ಈ ಸಂದರ್ಶನಗಳನ್ನು ಪ್ರಸ್ತಾಪಿಸಿದರೂ ಮತ್ತು ಕಾರ್ಯಕ್ರಮಗಳ ಕೆಲ ಕಿರು ತುಣುಕುಗಳನ್ನು ಪ್ರಸಾರ ಮಾಡಿದರೂ  ಝೀ ಸೂಚಿಸಿದರೆ ಅವುಗಳನ್ನು ಸಹ ತೆಗೆದು ಹಾಕಲಾಗುವುದು ಎಂದು ಶರ್ಮಾ ಮತ್ತು ಇಂಡಿಯಾ ಟಿವಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೀಪ್ ಸೇಥಿ  ಸ್ಪಷ್ಟಪಡಿಸಿದರು. ಆಗ ಈ ನಿಟ್ಟಿನಲ್ಲಿ ಒಂದು ಚಿಕ್ಕ ಅಫಿಡವಿಟ್‌ ಸಲ್ಲಿಸುವಂತೆ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಸೂಚಿಸಿತು.

Also Read
ಕೂಚಿಪೂಡಿ ಶೈಲಿಗೆ ಕೃತಿಸ್ವಾಮ್ಯ? ಆಕ್ಷೇಪಾರ್ಹ ವಿಚಾರ ತೆಗೆದುಹಾಕುವಂತೆ ಫೇಸ್‌ಬುಕ್‌ಗೆ ಸೂಚಿಸಿದ ಕೇರಳ ನ್ಯಾಯಾಲಯ

ಹಕ್ಕುಸ್ವಾಮ್ಯ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶರ್ಮಾ ಮತ್ತು ಇಂಡಿಯಾ ಟಿವಿ ವಿರುದ್ಧ ಸುದ್ದಿ ವಾಹಿನಿಗಳಾದ ಜೀ ನ್ಯೂಸ್ ಮತ್ತು ಜೀ ಹಿಂದೂಸ್ತಾನ್ ವಾಹಿನಿಗಳ ಒಡೆತನ ಹೊಂದಿರುವ ಜೀ ಮೀಡಿಯಾ ಮೊಕದ್ದಮೆ ಹೂಡಿತ್ತು.

ಶಿವಸೇನೆಯ ಮಾಜಿ ಮುಖ್ಯಸ್ಥ ಬಾಳ್ ಠಾಕ್ರೆ ಅವರೊಂದಿಗಿನ ಸಂದರ್ಶನದ ಲಿಂಕ್ ತೆಗೆದುಹಾಕಲಾಗುವುದು ಎಂದು ಇಂಡಿಯಾ ಟಿವಿ ಮತ್ತು ಶರ್ಮಾ ಅವರು ಸ್ಪಷ್ಟ ಭರವಸೆ ನೀಡಿದ್ದರೂ ಯೂಟ್ಯೂಬ್‌ನಂತಹ ಡಿಜಿಟಲ್‌ ವೇದಿಕೆಗಳಲ್ಲಿ ಅದು ಗೋಚರಿಸುತ್ತಿದೆ ಎಂದು ಜೀ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಶರ್ಮಾ ಮತ್ತು ಅವರ ವಾಹಿನಿಯ ವಕೀಲರು ಸಂಬಂಧಪಟ್ಟ ಎಲ್ಲ ಲಿಂಕ್‌ಗಳನ್ನೂ ತೆಗೆದು ಹಾಕಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಕೆಲಕಾಲ ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ಸೆ. 28ಕ್ಕೆ ಪ್ರಕರಣ ಪಟ್ಟಿ ಮಾಡಲಾಗುವುದು ಎಂದು ತಿಳಿಸಿತು. 

Related Stories

No stories found.
Kannada Bar & Bench
kannada.barandbench.com