

ದೈಹಿಕ ಶಿಕ್ಷೆಯು ಮಗುವಿನ ಸ್ವಾತಂತ್ರ್ಯ ಮತ್ತು ಘನತೆಯ ದುರ್ಬಳಕೆಯ ಜೊತೆಗೆ ಅವರ ಮೇಲಿನ ದಾಳಿ ಎಂದು ಗುರುವಾರ ಮದ್ರಾಸ್ ಹೈಕೋರ್ಟ್ ಹೇಳಿದೆ. ಶಾಲೆಗೆ ತಡವಾಗಿ ಬಂದಿದ್ದಕ್ಕೆ ಕುಕ್ಕರುಗಾಲಿನಲ್ಲಿ ನಡೆಯುವ ಶಿಕ್ಷೆಯನ್ನು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗೆ ವಿಧಿಸಿದ್ದರಿಂದ ಮಗು ಸಾವನ್ನಪ್ಪಿದ್ದ ಪ್ರಕರಣದ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಾಲಯ ಮೇಲಿನಂತೆ ಹೇಳಿದೆ (ಎಸ್ ಜೈ ಸಿಂಗ್ ವರ್ಸಸ್ ರಾಜ್ಯ ಮತ್ತು ಇತರರು).
ಶಿಕ್ಷೆ ಎನ್ನುವುದು ಮಗುವಿನ ಶಿಕ್ಷಣ ಹಕ್ಕಿನಲ್ಲಿ ಮಧ್ಯಪ್ರವೇಶಿಸಿದಂತಾಗುತ್ತದೆ ಎಂದು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಹೇಳಿದ್ದು, “ದೈಹಿಕ ಶಿಕ್ಷೆಯ ಭಯದಿಂದ ಮಕ್ಕಳು ಶಾಲೆಗೆ ಹೋಗುವುದಕ್ಕೆ ನಿರಾಸಕ್ತಿ ತೋರುವ ಸಾಧ್ಯತೆ ಅಥವಾ ಶಾಲೆಯನ್ನು ತೊರೆಯುವ ಸಾಧ್ಯತೆ ಇರುತ್ತದೆ” ಎಂದು ಹೇಳಿದ್ದಾರೆ.
“…ದೈಹಿಕ ಶಿಕ್ಷೆಯು ಮಗುವಿನ ಸ್ವಾತಂತ್ರ್ಯ ಮತ್ತು ಘನತೆಯ ದುರ್ಬಳಕೆಯ ಜೊತೆಗೆ ಅವರ ಮೇಲಿನ ದಾಳಿಯಾಗಿದೆ. ಶಿಕ್ಷೆಯು ಮಗುವಿನ ಶಿಕ್ಷಣ ಹಕ್ಕಿನಲ್ಲೂ ಮಧ್ಯಪ್ರವೇಶಿಸಿದಂತಾಗುತ್ತದೆ. ದೈಹಿಕ ಶಿಕ್ಷೆಯ ಭಯದಿಂದ ಮಕ್ಕಳು ಶಾಲೆಗೆ ಹೋಗುವುದಕ್ಕೆ ನಿರಾಸಕ್ತಿ ತೋರುವ ಸಾಧ್ಯತೆ ಅಥವಾ ಶಾಲೆಯನ್ನು ತೊರೆಯುವ ಸಾಧ್ಯತೆ ಇರುತ್ತದೆ” ಎಂದು ಆದೇಶದಲ್ಲಿ ಹೇಳಲಾಗಿದೆ.
ಸದರಿ ಪ್ರಕರಣವು ನಮ್ಮ ಆತ್ಮಸಾಕ್ಷಿಯನ್ನು ಕಲಕಿದೆ. “ದೇಶದಲ್ಲಿ ಮಕ್ಕಳ ಮೇಲೆ ಇನ್ನೂ ದೈಹಿಕ ಶಿಕ್ಷೆಯಂಥ ಅಮಾನವೀಯ ಸಂಸ್ಕೃತಿ ಇದೆ” ಎಂದು ನ್ಯಾಯಮೂರ್ತಿ ವೆಂಕಟೇಶ್ ಹೇಳಿದ್ದಾರೆ.
ಅರ್ಥಗರ್ಭಿತ ಶಿಕ್ಷಣಕ್ಕಾಗಿ 'ಪೋಷಕರ ಒಕ್ಕೂಟ ಮತ್ತು ಇತರರು ವರ್ಸಸ್ ಭಾರತ ಸರ್ಕಾರ ಮತ್ತು ಇತರರು' ಪ್ರಕರಣದಲ್ಲಿ ದೆಹಲಿ ಶಾಲೆ ಶಿಕ್ಷಣ ನಿಯಮಗಳು 1973ರಲ್ಲಿನ ದೈಹಿಕ ಶಿಕ್ಷೆ ನೀಡುವುದಕ್ಕೆ ಅನುಮತಿಸುವ ನಿಯಮವನ್ನು ರದ್ದುಗೊಳಿಸಿ ತೀರ್ಪು ನೀಡಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ನ್ಯಾ. ವೆಂಕಟೇಶ್ ಸಹಮತ ವ್ಯಕ್ತಪಡಿಸಿದ್ದಾರೆ.