ಭ್ರಷ್ಟಾಚಾರ: ಬಿಎಸ್‌ವೈ ಸೇರಿ 9 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿ, ನ್ಯಾಯಾಲಯಕ್ಕೆ ಸಲ್ಲಿಸಿದ ಲೋಕಾಯುಕ್ತ ಪೊಲೀಸ್

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿ ಎಸ್‌ ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರು ಅಧಿಕಾರ ದುರ್ಬಳಕೆ ಮಾಡಿಕೊಂಡು ಕೋಟ್ಯಂತರ ರೂಪಾಯಿ ಲಂಚವನ್ನು ನಗದಿನ ರೂಪದಲ್ಲಿ ಮತ್ತು ಶೆಲ್‌ ಕಂಪೆನಿಗಳ ಮೂಲಕ ಪಡೆದಿರುವ ಆರೋಪ.
Karnataka Lokayukta, B S Yediyurappa, B Y Vijayendra, Minister S T Somashekhar
Karnataka Lokayukta, B S Yediyurappa, B Y Vijayendra, Minister S T Somashekhar

ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಅವರ ಪುತ್ರ ಬಿ ವೈ ವಿಜಯೇಂದ್ರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಾಜಿ ಅಧ್ಯಕ್ಷ, ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಸೇರಿದಂತೆ ಒಂಭತ್ತು ಮಂದಿಯ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ಎಫ್‌ಐಆರ್‌ ದಾಖಲಿಸಿ, ಅದನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಲೋಕಾಯುಕ್ತದ ನಗರ ವಿಭಾಗದ ಪೊಲೀಸ್‌ ಇನ್‌ಸ್ಪೆಕ್ಟರ್‌ ಟಿ ಎಂ ಗಂಗಾಧರ್‌ ಅವರು ಸಿಆರ್‌ಪಿಸಿ ಸೆಕ್ಷನ್‌ 154 ಅಡಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ 2020ರ ನವೆಂಬರ್‌ 11 ಮತ್ತು ಅದರ ಹಿಂದಿನ ದಿನಗಳಲ್ಲಿ ಅಪರಾಧ ಕೃತ್ಯ ನಡೆದಿದೆ ಎಂದು ವಿವರಿಸಲಾಗಿದೆ.

Also Read
ಭ್ರಷ್ಟಾಚಾರ ಪ್ರಕರಣ: ಬಿಎಸ್‌ವೈ, ಕುಟುಂಬ ಸದಸ್ಯರು, ಸಚಿವ ಸೋಮಶೇಖರ್‌ ವಿರುದ್ಧ ತನಿಖೆಗೆ ವಿಶೇಷ ನ್ಯಾಯಾಲಯದ ಆದೇಶ

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿ ಎಸ್‌ ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನಸ್ಟ್ರಕ್ಷನ್‌ ಕಂಪೆನಿಯಿಂದ ಕೋಟ್ಯಂತರ ರೂಪಾಯಿಗಳನ್ನು ನಗದು ಮತ್ತು ಶೆಲ್‌ ಕಂಪೆನಿಗಳ ಮೂಲಕ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತರಿಗೆ ಈಚೆಗೆ ಆದೇಶಿಸಿತ್ತು.

ಇದಕ್ಕೂ ಮೊದಲು ರಾಜ್ಯಪಾಲರಿಂದ ಅಗತ್ಯ ಪೂರ್ವನುಮತಿ ಪಡೆದಿಲ್ಲ ಎಂದು ಯಡಿಯೂರಪ್ಪ ಮತ್ತು ಇತರರ ವಿರುದ್ದದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿತ್ತು. ಈ ಆದೇಶವನ್ನು ಹೈಕೋರ್ಟ್ ಬದಿಗೆ ಸರಿಸಿತ್ತು. ಅಲ್ಲದೇ, ಯಡಿಯೂರಪ್ಪ ಮತ್ತು ಇತರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಖಾಸಗಿ ದೂರನ್ನು ಮರುಪರಿಗಣಿಸಲು ಹೈಕೋರ್ಟ್‌ ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ಪ್ರಕರಣ ದಾಖಲಿಸಲು ಆದೇಶಿಸಿತ್ತು.

Kannada Bar & Bench
kannada.barandbench.com