ಲಂಚ ನೀಡದೆ ಯಾವುದೇ ಕಡತ ಮುಂದೆ ಹೋಗುವುದಿಲ್ಲ: ಸರ್ಕಾರಿ ಕಚೇರಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಹೈಕೋರ್ಟ್‌ ಆಕ್ರೋಶ

ಅರ್ಜಿದಾರ ಮತ್ತು ದೂರುದಾರರ ನಡುವಿನ ಸಂಭಾಷಣೆಯು ಲಂಚಕ್ಕೆ ಬೇಡಿಕೆ ಇಟ್ಟಿರುವುದನ್ನು ಬಹಿರಂಗಪಡಿಸಿದೆ ಎಂದು ಎಸಿಬಿ ವಕೀಲರು ವಾದಿಸಿದ್ದರು.
Justice K Natarajan and Karnataka HC
Justice K Natarajan and Karnataka HC

“ಸರ್ಕಾರಿ ಕಚೇರಿಗಳಲ್ಲಿ ಲಂಚ ಪಡೆಯುವುದು ವ್ಯಾಪಕವಾಗಿದ್ದು, ಲಂಚ ನೀಡದೆ ಯಾವುದೇ ಕಡತ ಮುಂದೆ ಹೋಗುವುದಿಲ್ಲ” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಅಸಮಾಧಾನ ಸೂಚಿಸಿದೆ.

ಭೂಮಿ ಮಂಜೂರಾತಿ ಪ್ರಕರಣದಲ್ಲಿ ಸಕಾರಾತ್ಮಕ ಆದೇಶ ಮಾಡಲು ಒಂದು ಕೋಟಿ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್‌ ಕೆ ಟಿ ರಾಜು ಅವರಿಗೆ ಜಾಮೀನು ನಿರಾಕರಿಸಿರುವ ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮೇಲಿನಂತೆ ಆದೇಶದಲ್ಲಿ ಹೇಳಿದೆ.

“ಇತ್ತೀಚೆಗೆ ಸರ್ಕಾರಿ ಕಚೇರಿಗಳಲಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಲಂಚ ನೀಡದೇ ಯಾವುದೇ ಕಡತ ಮುಂದೆ ಹೋಗುವುದಿಲ್ಲ. ಹೀಗಾಗಿ, ಈ ಹಂತದಲ್ಲಿ ಅರ್ಜಿದಾರರು ಜಾಮೀನಿಗೆ ಅರ್ಹವಾಗಿಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಅರ್ಜಿದಾರ ಮತ್ತು ದೂರುದಾರರ ನಡುವಿನ ಸಂಭಾಷಣೆಯು ಲಂಚಕ್ಕೆ ಬೇಡಿಕೆ ಇಟ್ಟಿರುವುದನ್ನು ಬಹಿರಂಗಪಡಿಸಿದೆ ಎಂದು ಎಸಿಬಿ ವಕೀಲರು ವಾದಿಸಿದ್ದರು.

ಒಂದು ಕೋಟಿ ರೂಪಾಯಿಗೆ ಲಂಚದ ಬೇಡಿಕೆ ಇಟ್ಟು, ಆನಂತರ ಲಂಚದ ಮೊತ್ತವನ್ನು 60 ಲಕ್ಷ ರೂಪಾಯಿ ತಗ್ಗಿಸಿ, ಐದು ಲಕ್ಷ ರೂಪಾಯಿ ಮುಂಗಡವಾಗಿ ಲಂಚದ ಹಣ ಪಡೆಯುವಾಗ ರಾಜು ಅವರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದರು.

ಕೆಂಗೇರಿ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳ ಹೆಸರಿನಲ್ಲಿದ್ದ 33 ಗುಂಟೆ ಭೂಮಿಯನ್ನು ಯಾವುದೇ ತೆರನಾದ ಸ್ವಾಧೀನ ಪ್ರಕ್ರಿಯೆ ಪಾಲಿಸದೇ ರಸ್ತೆ ನಿರ್ಮಿಸಲು ಬಿಡಿಎ ಬಳಸಿಕೊಂಡಿತ್ತು. ಮೂಲ ಖಾತೆದಾರರಿಂದ ಪವರ್‌ ಆಫ್‌ ಅಟಾರ್ನಿ ಪಡೆದಿದ್ದ ವ್ಯಕ್ತಿಯು ವಶಪಡಿಸಿಕೊಂಡ ಭೂಮಿಗೆ ಪರ್ಯಾಯವಾಗಿ ನಿವೇಶನ ಕೋರಿ ಬಿಡಿಎಗೆ ಮನವಿ ಸಲ್ಲಿಸಿದ್ದರು. ನಿವೇಶನ ಪಡೆಯಲು ಬಿಡಿಎ ಕಚೇರಿಯಲ್ಲಿ ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಓಡಾಡುತ್ತಿದ್ದರು. 2021ರ ನವೆಂಬರ್‌ 2ರಂದು ಬಿಡಿಎ ಅಧಿಕಾರಿಗಳು ಕಡತವನ್ನು ಹೆಚ್ಚುವರಿ ಭೂಸ್ವಾಧೀನ ಅಧಿಕಾರಿಗೆ ಕಳುಹಿಸಿದ್ದು, ಅವರು ಸರ್ವೇಯವರಿಗೆ ಕಳುಹಿಸಿದ್ದರು. ಅಂತಿಮವಾಗಿ ಕಡತವು 2022ರ ಜನವರಿ 3ರಂದು ರಾಜು ಅವರ ಬಳಿಗೆ ಬಂದಿತ್ತು. ಇದು ಜೂನ್‌ 7ರಂದು ರಾಜು ಬಂಧನವಾಗುವವರೆಗೆ ಅವರ ಬಳಿ ಇತ್ತು.

Related Stories

No stories found.
Kannada Bar & Bench
kannada.barandbench.com