ದೇಶ ತಜ್ಞವೈದ್ಯರ ಕೊರತೆ ಎದುರಿಸುತ್ತಿದ್ದರೂ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಕೋರ್ಸ್ ಸೀಟು ಖಾಲಿ ಇವೆ: ಸುಪ್ರೀಂ
ದೇಶದಲ್ಲಿ ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಭರ್ತಿಯಾಗುವಂತೆ ನೋಡಿಕೊಳ್ಳುವಲ್ಲಿ ಉಂಟಾಗಿರುವ ವೈಫಲ್ಯದ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಬೇಸರ ವ್ಯಕ್ತಪಡಿಸಿದೆ [ಕೆವಿನ್ ಜಾಯ್ ಮನತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ವಿಶೇಷ ತಜ್ಞ( ಸೂಪರ್ ಸ್ಪೆಷಾಲಿಟಿ) ವೈದ್ಯರ ಕೊರತೆಯಿಂದ ಬಳಲುತ್ತಿರುವ ದೇಶಕ್ಕೆ ಇದು ಸೂಕ್ತವಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ಹೇಳಿದೆ.
“ಅಮೂಲ್ಯವಾದ 1,003 ಸೂಪರ್ ಸ್ಪೆಷಾಲಿಟಿ ಸೀಟುಗಳು ವ್ಯರ್ಥವಾಗುತ್ತಿವೆ ಎಂಬ ವಿಷಾದದ ಚಿತ್ರಣವನ್ನು ಅರ್ಜಿ ನೀಡುತ್ತಿದೆ. ಆ ಸೀಟುಗಳಿಗೆ ಯಾರಿಗೂ ಅವಕಾಶ ಮಾಡಿಕೊಡುತ್ತಿಲ್ಲ. ಒಂದು ಕಡೆ, ಸೂಪರ್ ಸ್ಪೆಷಾಲಿಟಿ ವೈದ್ಯರ ಕೊರತೆ ಸದಾ ಇರುವುದನ್ನು ಕಂಡಿದ್ದೇವೆ. ಮತ್ತೊಂದೆಡೆ ಈ ಅಮೂಲ್ಯ ಸೀಟುಗಳು ಭರ್ತಿಯಾಗದೇ ಉಳಿದಿವೆ" ಎಂದು ಏಪ್ರಿಲ್ 13ರಂದು ನೀಡಿದ ಆದೇಶದಲ್ಲಿ ನ್ಯಾಯಾಲಯ ಉಲ್ಲೇಖಿಸಿದೆ.
ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿ ಎಂದು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಐಶ್ವರ್ಯಾ ಭಾಟಿ ಅವರಿಗೆ ನ್ಯಾಯಾಲಯ ಸೂಚಿಸಿತು.
ಅರ್ಜಿದಾರ ವಿದ್ಯಾರ್ಥಿಗಳು ಆರಂಭದಲ್ಲಿ ಮಂಜೂರು ಮಾಡಿದ ಸೀಟುಗಳನ್ನು ಮರಳಿಸಲು ಅನುಮತಿಸಲಾಗಿತ್ತು. ನಂತರ ಆ ಸೀಟುಗಳನ್ನು ಭರ್ತಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಲ್ಕ ಮರುಪಾವತಿಯೊಂದಿಗೆ ತಮ್ಮ ಮೂಲ ದಾಖಲೆಗಳನ್ನು ಹಿಂದಿರುಗಿಸುವಂತೆ ನಿರ್ದೇಶಿಸಲು ಕೋರಿ ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಮೂಲ ದಾಖಲೆ ಮರಳಿಸಲು ಅನುಮತಿ ನೀಡಿದ್ದ ನ್ಯಾಯಾಲಯ ಶುಲ್ಕ ಮರುಪಾವತಿ ಕುರಿತಾದ ಆದೇಶವನ್ನು ಮುಂದೂಡಿತ್ತು.
ಪೀಠಕ್ಕೆ ಪ್ರತಿಕ್ರಿಯೆ ನೀಡಿದ ಎಎಸ್‌ಜಿ ಭಾಟಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.
ಮುಂದಿನ ಶೈಕ್ಷಣಿಕ ಸಾಲಿಗೆ ಜುಲೈ 2023ರಲ್ಲಿ ಪ್ರವೇಶಾತಿ ಆರಂಭವಾಗುವುದರಿಂದ ಸಮಿತಿಯು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಎಎಸ್‌ಜಿ ಅವರಿಗೆ ಸೂಚಿಸಿದ ನ್ಯಾಯಾಲಯ ಜುಲೈ 4, 2023ರಂದು ಮುಂದಿನ ವಿಚಾರಣೆ ನಡೆಯಲಿದೆ. ಅಷ್ಟರೊಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೂಚಿಸಿತು.