ಖಾಸಗಿಯವರ ಜಮೀನು ಸ್ವಾಧೀನಪಡಿಸಿಕೊಳ್ಳುವಂತೆ ನ್ಯಾಯಾಲಯವು ಭೂ ಸ್ವಾಧೀನ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಸ್ಪಷ್ಟಪಡಿಸಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಐವರು ರೈತರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್ ದೇವದಾಸ್ ಮತ್ತು ಕೆ ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠವು ಈ ಸ್ಪಷ್ಟನೆ ನೀಡಿದೆ.
ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿರುವ ತಮ್ಮ ಜಮೀನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ರೈತರು ಈ ಹಿಂದೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠವು ರೈತರ ಮನವಿ ಸಂಬಂಧ ಸೂಕ್ತ ಕ್ರಮ ಜರುಗಿಸಬೇಕು. ಈ ಕುರಿತು ನಾಲ್ಕು ವಾರದಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಮತ್ತು ಕಾರ್ಯಕಾರಿ ಎಂಜಿನಿಯರ್‌ಗೆ ನಿರ್ದೇಶಿಸಿತ್ತು. ಸರ್ಕಾರಿ ಪ್ರಾಧಿಕಾರಗಳು ಹೈಕೋರ್ಟ್‌ನ ಆದೇಶ ಪಾಲಿಸಿಲ್ಲ ಎಂದು ಆಕ್ಷೇಪಿಸಿ ರೈತರು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಜಮೀನು ಸ್ವಾಧೀನ ಪಡಿಸಿಕೊಳ್ಳುವಂತೆ ನ್ಯಾಯಾಲಯಗಳು ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ಮಾಡಿದೆ. ಪ್ರಸಕ್ತ ಪ್ರಕರಣದಲ್ಲಿ, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಹಾಗೂ ಕಾರ್ಯಕಾರಿ ಎಂಜಿನಿಯರ್‌ಗೆ ಹೈಕೊರ್ಟ್ ಏಕ ಸದಸ್ಯ ಪೀಠ ನಿರ್ದೇಶಿಸಿದೆ. ಆದರೆ, ಅವರು ಭೂ ಸ್ವಾಧೀನ ಪ್ರಾಧಿಕಾರದ ಅಧಿಕಾರಿಗಳಲ್ಲ ಎಂದು ತಿಳಿಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ಏಕ ಸದಸ್ಯ ಪೀಠದ ಆದೇಶದ ಸ್ಪಷ್ಟೀಕರಣಕ್ಕೆ ಅಥವಾ ತಿದ್ದುಪಡಿಗೆ ಕೋರಲಾಗುವುದು. ಅದಕ್ಕೆ ಅನುಮತಿ ನೀಡುವಂತೆ ಕೋರಿದರು.ಆ ಮನವಿ ಪುರಸ್ಕರಿಸಿದ ವಿಭಾಗೀಯ ಪೀಠವು ಅರ್ಜಿದಾರರು ಏಕ ಸದಸ್ಯ ಪೀಠದ ಮುಂದೆ ಹೋಗಿ, ಆ ನ್ಯಾಯಾಲಯದ ಹಿಂದಿನ ಆದೇಶದ ಸ್ಪಷ್ಟೀಕರಣಕ್ಕೆ ಅಥವಾ ತಿದ್ದುಪಡಿಗೆ ಕೋರಬಹುದು ಎಂದು ತಿಳಿಸಿ ಅರ್ಜಿ ಇತ್ಯರ್ಥಡಿಸಿದೆ.