

ವಾಯು ಶುದ್ಧೀಕರಣ ಯಂತ್ರಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿಮೆ ಮಾಡುವಂತೆ ನ್ಯಾಯಾಂಗ ನಿರ್ದೇಶಿಸುವುದು ಅಸಾಂವಿಧಾನಿಕ ಮತ್ತು ಅಧಿಕಾರ ಪ್ರತ್ಯೇಕತೆಯ ಸಿದ್ಧಾಂತದ ಉಲ್ಲಂಘನೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ನಲ್ಲಿ ಪ್ರಬಲವಾಗಿ ವಾದಿಸಿದೆ.
ಸಂವಿಧಾನದ 279 ಎ ವಿಧಿ ಪ್ರಕಾರ ಜಿಎಸ್‌ಟಿ ದರಗಳ ಬಗ್ಗೆ ನಿರ್ಧರಿಸುವ ಅಧಿಕಾರವುಳ್ಳ ಏಕೈಕ ಸಂಸ್ಥೆ ಜಿಎಸ್‌ಟಿ ಮಂಡಳಿ ಮಾತ್ರ. ತೆರಿಗೆ ದರಗಳ ನಿರ್ಧಾರ ಎಂಬುದು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಕಾರಾತ್ಮಕ ಒಕ್ಕೂಟ ತತ್ವದ ಸಂಕೀರ್ಣ ಪ್ರಕ್ರಿಯೆಯ ಫಲಿತಾಂಶವಾಗಿದ್ದು ವಿವಿಧ ಹಣಕಾಸು ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸುವ ಜೊತೆಗೆ ಪರಸ್ಪರ ಒಪ್ಪಂದ ಅಗತ್ಯವಿರುತ್ತದೆ ಎಂದು ಅದು ಹೇಳಿದೆ.
ಪ್ರಕರಣದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸುವುದು ಸಂವಿಧಾನಾತ್ಮಕವಾಗಿ ನಿರ್ದಿಷ್ಟಗೊಳಿಸಲಾದ ಈ ಪ್ರಕ್ರಿಯೆಯನ್ನು ಬದಿಗೆ ಸರಿಸುತ್ತದೆ ಎಂದು ಸರ್ಕಾರ ವಾದಿಸಿದೆ.
ಜಿಎಸ್‌ಟಿ ದರಗಳನ್ನು ತಿದ್ದುಪಡಿ ಮಾಡುವಂತೆ, ಜಿಎಸ್‌ಟಿ ಕೌನ್ಸಿಲ್ ಸಭೆ ಕರೆದಿಡುವಂತೆ ಅಥವಾ ಕೌನ್ಸಿಲ್ ನಿರ್ದಿಷ್ಟ ಫಲಿತಾಂಶವನ್ನು ಪರಿಗಣಿಸಬೇಕು ಅಥವಾ ಅಂಗೀಕರಿಸಬೇಕು ಎಂದು ಈ ಗೌರವಾನ್ವಿತ ನ್ಯಾಯಾಲಯ ನಿರ್ದೇಶನ ನೀಡಿದರೆ ಅದರಿಂದ ನ್ಯಾಯಾಲಯವೇ ಜಿಎಸ್‌ಟಿ ಮಂಡಳಿ ಸ್ಥಾನದಲ್ಲಿ ಕುಳಿತುಕೊಂಡು ಸಂವಿಧಾನ ವಿವೇಚನೆಯಿಂದ ಸಂಪೂರ್ಣವಾಗಿ ಜಿಎಸ್‌ಟಿ ಮಂಡಳಿಗೆ ನೀಡಿರುವ ಕಾರ್ಯವನ್ನು ನಿರ್ವಹಿಸಿದಂತಾಗುತ್ತದೆ. ಅಧಿಕಾರ ಪ್ರತ್ಯೇಕತೆಯ ಸಿದ್ಧಾಂತವನ್ನು ಉಲ್ಲಂಘಿಸಿ ಜಿಎಸ್‌ಟಿ ಮಂಡಳಿಗೆ ಸಂವಿಧಾನವು ನೀಡಿರುವ ವಿಶಿಷ್ಟ ಮತ್ತು ಸ್ಪಷ್ಟ ಪಾತ್ರ ಅರ್ಥಹೀನವಾಗುತ್ತದೆ ಎಂದು ಸರ್ಕಾರ ವಿವರಿಸಿದೆ. ಅಲ್ಲದೆ ಸಾಧನಕ್ಕೆ ವಿಧಿಸಿರುವ ಜಿಎಸ್‌ಟಿ ಮರುವರ್ಗೀಕರಣಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ನೆವದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂತಲೂ ಕೇಂದ್ರ ದೂರಿದೆ.
ರಾಷ್ಟ್ರ ರಾಜಧಾನಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಮಾಲಿನ್ಯ ವಿಕೋಪಕ್ಕೆ ಹೋಗಿರುವ ಬೆನ್ನಲ್ಲಿಯೇ ಗಾಳಿ ಶುದ್ಧೀಕರಿಸುವ ಏರ್ ಪ್ಯೂರಿಫೈಯರ್ ಯಂತ್ರಗಳನ್ನು 'ವೈದ್ಯಕೀಯ ಸಾಧನ' ಎಂದು ಘೋಷಿಸಿ, ಅದಕ್ಕೆ 18% ಜಿಎಸ್‌ಟಿ ಬದಲು 5% ಜಿಎಸ್‌ಟಿ ವಿಧಿಸುವಂತೆ ಕೋರಿ ವಕೀಲ ಕಪಿಲ್ ಮದನ್ ಅವರು ಸಲ್ಲಿಸಿದ್ದ ಪಿಐಎಲ್‌ಗೆ ಪ್ರತಿಕ್ರಿಯೆಯಾಗಿ ಸರ್ಕಾರ ಈ ವಾದಗಳನ್ನು ಮುಂದಿಟ್ಟಿತು.
ಡಿಸೆಂಬರ್ 24ರಂದು ನಡೆದ ವಿಚಾರಣೆ ವೇಳೆ ನ್ಯಾಯಾಲಯ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ದುಸ್ಥಿತಿಯಲ್ಲಿರುವುದನ್ನು ಮನಗಂಡು, ಜಿಎಸ್‌ಟಿ ಮಂಡಳಿ ಸಾಧ್ಯವಾದಷ್ಟು ಬೇಗ ಸಭೆ ನಡೆಸಬೇಕು ಎಂದು ನಿರ್ದೇಶಿಸಿತ್ತು. ಜಿಎಸ್‌ಟಿಯನ್ನು ಕಡಿಮೆ ಮಾಡುವ ಅಥವಾ ರದ್ದುಪಡಿಸುವ ಬಗ್ಗೆ ಜಿಎಸ್‌ಟಿ ಮಂಡಳಿ ಶೀಘ್ರದಲ್ಲೇ ಪರಿಗಣಿಸಬೇಕು ಎಂದು ಹೇಳಿತ್ತು.
ಇದಕ್ಕೆ ಡಿಸೆಂಬರ್ 26ರಂದು ವಿರೋಧ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ ಏರ್ ಪ್ಯೂರಿಫೈಯರ್ ಸಾಧನಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸುವಂತೆ ಜಿಎಸ್‌ಟಿ ಮಂಡಳಿಗೆ ಆದೇಶಿಸಿದರೆ ಅದು ಅಂತಹ ಇನ್ನಷ್ಟು ಪ್ರಕರಣಗಳು ಹೆಚ್ಚಳವಾಗಲು ಕಾರಣವಾಗುತ್ತದೆ ಎಂದಿತ್ತು. ನಾಳೆ (ಜನವರಿ 9) ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.