ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ನ್ಯಾಯಾಲಯ; ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು

ಸಾಕ್ಷಿಯಾಗಿ ವಿಚಾರಣೆ ನಡೆಸುವ ಸಮಯದಲ್ಲಿ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಷ್‌ ತನಗೆ ತಿಳಿದಿರುವ ನಿಜ ಸಂಗತಿ, ಸಂದರ್ಭ-ಸನ್ನಿವೇಶವನ್ನು ನ್ಯಾಯಾಲಯದ ಮುಂದೆ ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂದು ಆದೇಶಿಸಿದ ನ್ಯಾಯಾಲಯ.
Actor Darshan with his girlfriend Pavitra Gowda
Actor Darshan with his girlfriend Pavitra Gowda
Published on

ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್‌ ರಾವ್‌ಗೆ ಕ್ಷಮಾದಾನ ನೀಡಿ, ಆತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಮಹತ್ವದ ಆದೇಶ ಮಾಡಿದೆ.

ಪ್ರಕರಣದಲ್ಲಿ ಕ್ಷಮಾದಾನ ನೀಡಬೇಕು ಹಾಗೂ ನನ್ನನ್ನು ಸಾಫಿ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿ 14ನೇ ಆರೋಪಿಯೂ ಆದ ದರ್ಶನ್‌ ಆಪ್ತ ಸ್ನೇಹಿತ ಪ್ರದೋಷ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಧೀಶೆ ಸುಜಾತಾ ಎಂ.ಸಾಂಬ್ರಾಣಿ ಅವರು ಪುರಸ್ಕರಿಸಿ,  ಷರತ್ತುಬದ್ಧ ಆದೇಶ ಮಾಡಿದ್ದಾರೆ.

Sujata Madiwalappa Sambrani
Sujata Madiwalappa Sambrani

ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ನ್ಯಾಯಾಲಯ ಪರಿಗಣಿಸಿರುವುದರಿಂದ ಪ್ರಕರಣಕ್ಕೆ ಬಹುದೊಡ್ಡ ತಿರುವು ಸಿಕ್ಕಿದೆ. ಈ ಮಹತ್ವದ ಬೆಳವಣಿಗೆಯು ನಟಿ ಪವಿತ್ರಾಗೌಡ ಮತ್ತು ನಟ ದರ್ಶನ್‌ ಸೇರಿದಂತೆ ಉಳಿದೆಲ್ಲಾ ಆರೋಪಿಗಳಿಗೆ ಸಂಕಷ್ಟ ತರುವ ಸಾಧ್ಯತೆ ಹೆಚ್ಚಿದೆ.

ಪ್ರದೋಷ್‌ಗೆ ಕ್ಷಮಾದಾನ ನೀಡಲು ಮತ್ತು ಆತನನ್ನು ಮಾಫಿ  ಸಾಕ್ಷಿಯಾಗಿ ಪರಿಗಣಿಸಲು ನ್ಯಾಯಾಲಯ ಕೆಲ ಮೂರು ಷರತ್ತು ವಿಧಿಸಿದೆ.

ಸಾಕ್ಷಿಯಾಗಿ ವಿಚಾರಣೆ ನಡೆಸುವ ಸಮಯದಲ್ಲಿ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಷ್‌ ತನಗೆ ತಿಳಿದಿರುವ ನಿಜ ಸಂಗತಿ, ಸಂದರ್ಭ-ಸನ್ನಿವೇಶವನ್ನು ನ್ಯಾಯಾಲಯದ ಮುಂದೆ ಸಂಪೂರ್ಣವಾಗಿ ಬಹಿರಂಗಪಡಿಸಬೇಕು. ಪ್ರಕರಣದ ವಿಚಾರಣೆ ಮುಕ್ತಾಯವಾಗುವವರೆಗೆ ಪ್ರದೋಷ್‌ ಬಂಧನದಲ್ಲಿರಬೇಕು. ಉದ್ದೇಶಪೂರ್ವಕವಾಗಿ ಅಗತ್ಯ ಮಾಹಿತಿಯನ್ನು ಮರೆಮಾಚಿದರೆ, ಯಾವುದೇ ಸುಳ್ಳು ಸಾಕ್ಷ್ಯ ನೀಡಿದರೆ ಅಥವಾ ನ್ಯಾಯಾಲಯ ವಿಧಿಸಿರುವ ಷರತ್ತು ಪಾಲಿಸಲು ವಿಫಲವಾದರೆ, ಪ್ರದೋಷ್‌ ನನ್ನು ಪುನಾ ಆರೋಪಿಯಾಗಿಯೇ ಪರಿಗಣಿಸಲಾಗುತ್ತದೆ. ನಂತರ ಆತನ ವಿರುದ್ಧ ಆರೋಪಿಸಲಾಗಿರುವ ಅಪರಾಧಗಳಿಗೆ ಮತ್ತು ಸುಳ್ಳು ಸಾಕ್ಷ್ಯ ನೀಡಿದ ಅಪರಾಧ ಮೇಲೆ ಕಾನೂನು ಪ್ರಕಾರ ವಿಚಾರಣೆ ನಡೆಸಲಾಗುವುದು ಎಂದು ಷರತ್ತು ವಿಧಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಆಗಸ್ಟ್‌ 27ಕ್ಕೆ ಮುಂದೂಡಿದೆ.

ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ (ತನಿಖಾಧಿಕಾರಿಗಳ ತನಿಖೆ) ಪರ ನಾನು ಸಾಕ್ಷ್ಯ ನುಡಿಯುತ್ತೇನೆ. ಪ್ರಕರಣದ ಎಲ್ಲಾ ಸತ್ಯಾಂಶಗಳನ್ನು ಮತ್ತು ಉಳಿದ ಆರೋಪಿಗಳ ಪಾತ್ರವನ್ನು ವಿವರಿಸುತ್ತೇನೆ. ಆದ್ದರಿಂದ ಪ್ರಕರಣದಲ್ಲಿ ನನಗೆ ಕ್ಷಮಾದಾನ ನೀಡಬೇಕು. ನನ್ನನ್ನು ಕ್ಷಮಿಸಿ ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿ 14ನೇ ಆರೋಪಿಯಾಗಿದ್ದ ಪ್ರದೋಷ್‌, 2026ರ ಆಗಸ್ಟ್‌ 7ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು.

ಈ ಅರ್ಜಿ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಈ ಅರ್ಜಿ ಸಲ್ಲಿಸಲಾಗಿದೆಯೇ? ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳು ತಿಳಿದಿದೆಯೇ? ಪ್ರಕರಣಕ್ಕೆ ಸಂಬಂಧಿಸಿದಂತೆ ತಿಳಿದಿರುವ ಸತ್ಯ ಸಂಗತಿಗಳು ಬಹಿರಂಗಪಡಿಸಲು ಸಿದ್ಧವೇ ಎಂಬುದಾಗಿ ಪ್ರದೋಷ್‌ನನ್ನು ಪ್ರಶ್ನೆ ಮಾಡಿತ್ತು. ಈ ಎಲ್ಲಾ ಪ್ರಶ್ನೆಗಳಿಗೂ ಹೌದು ಉತ್ತರಿಸಿದ್ದ ಪ್ರದೋಷ್‌, ಪ್ರಕರಣದಲ್ಲಿ ನನಗೆ ತಿಳಿದಿರುವ ಸತ್ಯಾಂಶ ಹಾಗೂ ಉಳಿದ ಎಲ್ಲಾ ಆರೋಪಿಗಳು ವಹಿಸಿರುವ ಪಾತ್ರವನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದರು. ನಂತರ ನ್ಯಾಯಾಲಯವು ಅರ್ಜಿ ಸಲ್ಲಿಕೆ ಕುರಿತು ಜೈಲಿನಲ್ಲಿರುವ ಪ್ರದೋಷ್‌ನೊಂದಿಗೆ ಸಮಾಲೋಚಿಸಿ ವರದಿ ಸಲ್ಲಿಸಲು ಪ್ರೊಬೇಷನ್‌ ಅಧಿಕಾರಿಯನ್ನು ಸಹ ನೇಮಿಸಿತ್ತು. ಅಂತಿಮವಾಗಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

Kannada Bar & Bench
kannada.barandbench.com