

ವಾಯು ಮಾಲಿನ್ಯದಂತಹ ಸಮಸ್ಯೆಗಳನ್ನು ನಿಭಾಯಿಸುವ ವಿಷಯದಲ್ಲಿ ನ್ಯಾಯಾಂಗ ಸಂಸ್ಥೆಗಳಿಗೆ ಮಿತಿಗಳಿದ್ದು, ದೆಹಲಿ ವಾಯು ಮಾಲಿನ್ಯ ಬಿಕ್ಕಟ್ಟನ್ನು ಪರಿಹರಿಸಲು ತನ್ನ ಬಳಿ ಯಾವುದೇ ಮಂತ್ರದಂಡವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕುಸಿಯಲು ಅನೇಕ ಕಾರಣಗಳಿವೆ. ಹಾಗಾಗಿ, ಪರಿಹಾರವನ್ನು ಕಂಡುಹಿಡಿಯುವುದು ವಿಷಯ ತಜ್ಞರು ಮತ್ತು ವಿಜ್ಞಾನಿಗಳ ಜವಾಬ್ದಾರಿಯಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಹೇಳಿದರು.
"ನ್ಯಾಯಾಂಗ ವೇದಿಕೆಯು ಯಾವ ಮಂತ್ರದಂಡವನ್ನು ಬಳಸಬಹುದು? ದೆಹಲಿ ಎನ್‌ಸಿಆರ್‌ಗೆ ಇದು (ವಾಯುಮಾಲಿನ್ಯ) ಅಪಾಯಕಾರಿ ಎಂದು ನಮಗೆ ತಿಳಿದಿದೆ... ತಕ್ಷಣವೇ ನಾವು ಯಾವುದಾದರೂ ನಿರ್ದೇಶನಗಳನ್ನು ನೀಡುವ ಮೂಲಕ ಶುದ್ಧ ಗಾಳಿಯನ್ನು ನೀಡಬಹುದಾಗಿದ್ದರೆ ತಿಳಿಸಿ ನೋಡೋಣ. ಸಮಸ್ಯೆ ಏನೆಂದು ನಮಗೆಲ್ಲರಿಗೂ ತಿಳಿದಿದೆ.. ನಾವು ಎಲ್ಲಾ ಕಾರಣಗಳನ್ನು ಗುರುತಿಸಬೇಕು. ಇಲ್ಲಿ ಯಾವುದೇ ಒಂದು ಕಾರಣವಿಲ್ಲ... ಹಾಗೆ ಯೋಚಿಸುವುದು ನಿಜವಾಗಿಯೂ ತಪ್ಪಾಗುತ್ತದೆ. ವಿಷಯತಜ್ಞರು ಮತ್ತು ವಿಜ್ಞಾನಿಗಳು ಮಾತ್ರ ಸಮಸ್ಯೆಯನ್ನು ಪರಿಶೀಲಿಸಬಹುದು. ನಂತರ ಪ್ರತಿಯೊಂದು ಕ್ಷೇತ್ರದ (ವಾಯುಮಾಲಿನ್ಯಕ್ಕೆ ಕೊಡುಗೆ ನೀಡುತ್ತಿರುವಂತದ್ದು) ಸಮಸ್ಯೆಗಳಿಗೆ ಪರಿಹಾರಗಳನ್ನು ಗಮನಿಸಿ ಮುಂದುವರೆಯಬೇಕು. ಸರ್ಕಾರವು ಯಾವ ರೀತಿ ಸಮಿತಿಯನ್ನು ರಚಿಸಿದೆ ಎನ್ನುವುದನ್ನು ನೋಡೋಣ," ಎಂದು ಸಿಜೆಐ ಸೂರ್ಯಕಾಂತ್ ಸಮಸ್ಯೆಯ ಗಹನತೆಯನ್ನು ವಿವರಿಸಿದರು.
ದೆಹಲಿ ವಾಯು ಮಾಲಿನ್ಯ ಪ್ರಕರಣದಲ್ಲಿ ಅಮಿಕಸ್ ಕ್ಯೂರಿ ಅಪರಾಜಿತಾ ಸಿಂಗ್ ಪ್ರಕರಣವನ್ನು ಪಟ್ಟಿ ಮಾಡಲು ವಿಷಯವನ್ನು ಪ್ರಸ್ತಾಪಿಸಿದ ನಂತರ ಈ ಬೆಳವಣಿಗೆಗಳು ನಡೆದವು. "ದೆಹಲಿ NCR ನಲ್ಲಿ ಆತಂಕಕಾರಿ ಪರಿಸ್ಥಿತಿ ಇದೆ ಮತ್ತು ಇದು ಆರೋಗ್ಯ ತುರ್ತುಸ್ಥಿತಿಯಾಗಿದೆ" ಎಂದು ಸಿಂಗ್ ಹೇಳಿದರು. ಈ ವೇಳೆ ಸಿಜೆಐ ಅವರು ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ಸುಪ್ರೀಂ ಕೋರ್ಟ್ ಮುಂದೆ ಇರುವ ಪ್ರಕರಣವನ್ನು ಔಪಚಾರಿಕ ರೀತಿಯಲ್ಲಿ ಪಟ್ಟಿ ಮಾಡಲಾಗುತ್ತದೆ ಎಂದರು. ಈ ವಿಷಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಅವರು ಸೂಚಿಸಿದರು.
ಅಂತಿಮವಾಗಿ ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರನ್ನೂ ಒಳಗೊಂಡ ಪೀಠವು ಅಂತಿಮವಾಗಿ ಡಿಸೆಂಬರ್ 1 ರ ಸೋಮವಾರದಂದು ಪ್ರಕರಣವನ್ನು ಪಟ್ಟಿ ಮಾಡಲು ಸಮ್ಮತಿಸಿತು. ಅಂದು ಏನು ಮಾಡಬಹುದು ನೋಡೋಣ ಎಂದು ತಿಳಿಸಿತು.
ಸುಪ್ರೀಂ ಕೋರ್ಟ್ ಈ ಹಿಂದೆ ದೀಪಾವಳಿಯ ಸಮಯದಲ್ಲಿ ರಾಷ್ಟ್ರ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಿತ್ತು. ಮತ್ತೊಂದೆಡೆ, ಮಾಲಿನ್ಯ ಮಟ್ಟ ತೀವ್ರವಾಗಿ ಹೆಚ್ಚುತ್ತಿರುವ ಕಾರಣ, ವೈದ್ಯಕೀಯ ತಜ್ಞರು ಕೆಲವು ವಾರಗಳ ಕಾಲ ದೆಹಲಿಯನ್ನು ತೊರೆಯುವಂತೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಸಲಹೆ ನೀಡುತ್ತಿದ್ದಾರೆ.
ಅಲ್ಲದೆ, ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವನ್ನು ಹದಗೆಡಿಸುವ ಅಂಶಗಳಲ್ಲಿ ಒಂದಾದ ರೈತರು ಕಳೆ ಸುಡುವುದನ್ನು ತಡೆಯಲು ತೆಗೆದುಕೊಂಡ ಕ್ರಮಗಳ ಕುರಿತು ನ್ಯಾಯಾಲಯವು ಪಂಜಾಬ್ ಮತ್ತು ಹರಿಯಾಣದಿಂದ ವರದಿಗಳನ್ನು ಕೋರಿತ್ತು.
ನವೆಂಬರ್ 17 ರಂದು, ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅಳೆಯುವಲ್ಲಿ ಉಪಕರಣಗಳ ಸ್ವರೂಪ ಮತ್ತು ಅವುಗಳ ದಕ್ಷತೆಯನ್ನು ವಿವರಿಸುವ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ದೆಹಲಿ ಸರ್ಕಾರವನ್ನು ಕೇಳಿತ್ತು.