ಅಕ್ರಮವಾಗಿ ನಿರ್ಮಿಸಿದ ದೇವಾಲಯಕ್ಕೆ ರಸ್ತೆ ನಿರ್ಮಿಸಲು ಕೋರಿಕೆ: ನ್ಯಾಯಾಲಯಕ್ಕೆ ಯಾವುದೇ ಧರ್ಮವಿಲ್ಲ ಎಂದ ಹೈಕೋರ್ಟ್‌

ಸರ್ಕಾರದ ಆಸ್ತಿಯಲ್ಲಿ ದೇವಸ್ಥಾನ ನಿರ್ಮಿಸಿರುವುದನ್ನು ತೆರವು ಮಾಡಲು ಹೇಳಿ. ಎಸಗಿರುವ ಪ್ರಮಾದವನ್ನು ಕಾನೂನಾತ್ಮಕಗೊಳಿಸಲು ನಾವು ಅನುಮತಿಸುವುದಿಲ್ಲ ಎಂದ ಪೀಠ.
Chief Justice P B Varale and Justice Krishna S. Dixit
Chief Justice P B Varale and Justice Krishna S. Dixit
Published on

“ನ್ಯಾಯಾಲಯವು ಸಂವಿಧಾನ ಪಾಲಿಸುತ್ತಿದ್ದು, ಅದು ಜಾತ್ಯತೀತವಾಗಿದೆ. ನ್ಯಾಯಾಲಯಕ್ಕೆ ಯಾವುದೇ ಧರ್ಮವಿಲ್ಲ” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಮೌಖಿಕವಾಗಿ ಹೇಳಿದೆ.

ಬೀದರ್‌ನ ಸಾಮಾಜಿಕ ಕಾರ್ಯಕರ್ತ ಗುರುನಾಥ್‌ ವಡ್ಡೆ ಎಂಬುವರು ಸಂಗಮೇಶ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಲು ನಿರ್ದೇಶಿಸುವಂತೆ ಕೋರಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ಮೇಲಿನಂತೆ ಹೇಳಿದೆ.

ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಹನುಮಂತಪ್ಪ ಹರವಿ ಅವರು “ದೇವಸ್ಥಾನಕ್ಕೆ ರಸ್ತೆಯ ಸಮಸ್ಯೆಯಾಗಿದೆ. ಪ್ರತಿವಾದಿಗಳಿಗೆ ರಸ್ತೆ ನಿರ್ಮಿಸಲು ನಿರ್ದೇಶಿಸಬೇಕು” ಎಂದು ಕೋರಿದರು.

ಇದಕ್ಕೆ ಸಿಜೆ ಅವರು “ದೇವಸ್ಥಾನವನ್ನು ಎಲ್ಲಿ ನಿರ್ಮಿಸಲಾಗಿದೆ. ಸರ್ಕಾರದ ಆಸ್ತಿಯಲ್ಲಿ ದೇವಸ್ಥಾನ ನಿರ್ಮಿಸಲಾಗಿದೆಯೇ? ಸರ್ಕಾರಿ ಜಾಗದಲ್ಲಿ ದೇವಸ್ಥಾನ ಹೇಗೆ ನಿರ್ಮಿಸಲಾಯಿತು? ಅಲ್ಲಿ ಹೇಗೆ ದೇವಸ್ಥಾನ ನಿರ್ಮಿಸಲಾಯಿತು ಎಂಬುದನ್ನು ತಿಳಿಸಿ. ಸರ್ಕಾರದ ಆಸ್ತಿಯಲ್ಲಿ ದೇವಸ್ಥಾನ ನಿರ್ಮಿಸಿರುವುದನ್ನು ತೆರವು ಮಾಡಲು ಹೇಳಿ. ಮೊದಲು ಪ್ರಮಾದ ಎಸಗಿ ಅದನ್ನು ಕಾನೂನಾತ್ಮಕಗೊಳಿಸಲು ಕೋರಿದರೆ ನಾವು ಅನುಮತಿಸುವುದಿಲ್ಲ” ಎಂದರು.

ಮುಂದುವರಿದು, “ನಾವು ಯಾವುದೇ ಧರ್ಮದ ವಿರುದ್ಧವಿಲ್ಲ. ಆ ಭಾವನೆಯನ್ನು ಬಿಡಿ. ನ್ಯಾಯಾಲಯವು ಸಂವಿಧಾನ ಪಾಲಿಸುತ್ತಿದ್ದು, ಅದು ಜಾತ್ಯತೀತವಾಗಿದೆ. ನ್ಯಾಯಾಲಯಕ್ಕೆ ಯಾವುದೇ ಧರ್ಮವಿಲ್ಲ” ಎಂದರು.

”ಸರ್ಕಾರದ ಭೂಮಿಯಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ ಎಂದು ರಸ್ತೆ ನಿರ್ಮಿಸಿಕೊಡುವ ಮೂಲಕ ನ್ಯಾಯಾಲಯ ಉಡುಗೊರೆ ನೀಡಬೇಕೆ? ಹಾಗೆ ಮಾಡಿದರೆ ನಾವು ಗಂಭೀರ ಪ್ರಮಾದ ಎಸಗಿದಂತಾಗುತ್ತದೆ. ದೇವರ ಅನುಗ್ರಹದಿಂದ ನಾವು ಅದನ್ನು ಮಾಡುವುದಿಲ್ಲ” ಎಂದು ಹೇಳಿದರು.

ಆಗ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು “ಜೊರಾಸ್ಟ್ರಿಯನ್‌ ಒಬ್ಬರು ತಮ್ಮ ಮಂದಿರಕ್ಕೆ ರಸ್ತೆ ನಿರ್ಮಿಬೇಕು ಎನ್ನಬಹುದು, ಇನ್ನೊಂದು ದಿನ ಮಸೀದಿ ನಿರ್ಮಿಸಲಾಗಿದೆ ರಸ್ತೆ ನಿರ್ಮಿಸಿಕೊಡಿ ಎಂದು ಮತ್ತೊಬ್ಬರು ಕೇಳಬಹುದು. ಇದು ಹಲವು ಧರ್ಮಗಳ ದೇಶ. ಹಲವು ಸಮೂಹಗಳಿವೆ. ಈ ರೀತಿ ಮುಂದುವರೆದರೆ ಸರ್ಕಾರ ತನ್ನ ಬಜೆಟ್‌ ಎಲ್ಲವನ್ನೂ ಮಂದಿರಗಳಿಗೆ ರಸ್ತೆ ನಿರ್ಮಿಸಲು ಬಳಸಬೇಕಾಗುತ್ತದೆ. ಹೀಗಾದಲ್ಲಿ ಸರ್ಕಾರ ಯಾವ ತರಹದ ಅಭಿವೃದ್ಧಿ ಚಟುವಟಿಕೆ ನಡೆಸಲು ಸಾಧ್ಯ?” ಎಂದರು.

“ಅಕ್ರಮವಾಗಿ ಮಾಡಿರುವುದಕ್ಕೆ ಕಾನೂನಿನ ಮೊಹರು ಒತ್ತಲು ನೀವು ಬಯಸುತ್ತಿದ್ದೀರಿ. ನಾವು ಅದನ್ನು ಮಾಡುವುದಿಲ್ಲ. ಇದು ಸರ್ಕಾರದ ಭೂಮಿ ಎಂದು ತೋರಿಸಿ. ಅದನ್ನು ಅಕ್ರಮವಾಗಿ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಲಾಗುವುದು. ಅಕ್ರಮವಾಗಿ ವಶಪಡಿಸಿಕೊಂಡಿರುವುದಕ್ಕೆ ನಾವು ರಸ್ತೆ ನಿರ್ಮಿಸುವಂತೆ ಹೇಳುವುದಿಲ್ಲ” ಎಂದ ಪೀಠವು ಅರ್ಜಿ ಹಿಂಪಡೆಯಲು ಅನುಮತಿಸಿತು.

Kannada Bar & Bench
kannada.barandbench.com