ಹಿಮಾಚಲ ಪ್ರದೇಶ ಹೈಕೋರ್ಟ್ ಅತ್ಯಂತ ಕ್ಲಿಷ್ಟಕರವಾದ, ಅರ್ಥವಾಗದ ರೀತಿಯಲ್ಲಿ ತೀರ್ಪು ಬರೆದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ತೀರ್ಪು ಬರೆಯುವುದರ ಕುರಿತು ಕೆಲವು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ (ಭಾರತೀಯ ಸ್ಟೇಟ್ ಬ್ಯಾಂಕ್ ವರ್ಸಸ್ ಅಜಯ್ ಕುಮಾರ್ ಸೂದ್).
ತಾನು ಕೈಗೊಳ್ಳುವ ನಿರ್ಣಯಕ್ಕೆ ಆಧಾರ ಮತ್ತು ಕಾರಣಗಳನ್ನು ವಕೀಲರಿಗೆ ಮಾತ್ರವಲ್ಲ, ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರುವ ಪ್ರಜೆಗಳಿಗೂ ಅರ್ಥವಾಗಬೇಕು ಎಂಬುದು ತೀರ್ಪಿನ ಉದ್ದೇಶವಾಗಿದೆ ಎಂದು ಮಾರ್ಚ್ 12ರಂದು ಹೊರಡಿಸಿದ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
ಗ್ರಹಿಸಲಾಗದ ಭಾಷೆಯಲ್ಲಿ ಬರೆಯಲಾದ ತೀರ್ಪುಗಳು ನ್ಯಾಯವು ನಾಗರಿಕರ ಕೈಗೆಟುಕುವಂತೆ ಹಾಗೂ ಅರ್ಥವಾಗುವಂತೆ ಇರಬೇಕೆನ್ನುವ ಪ್ರಯತ್ನಕ್ಕೆ ಅಪಚಾರ ಉಂಟುಮಾಡುತ್ತವೆ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
“ತೀರ್ಪು ಕೈಗೊಳ್ಳುವುದಕ್ಕೆ ಕಾರಣವಾದ ಅಂಶಗಳ ಕುರಿತು ಕಕ್ಷಿದಾರರನ್ನು ಪ್ರತಿನಿಧಿಸುವ ವಕೀಲ ಸಮುದಾಯದ ಸದಸ್ಯರಿಗೆ ಮಾತ್ರ ತಿಳಿಸುವುದಷ್ಟೇ ಅಲ್ಲ, ಅದು ಯಾರಿಗೆ ಪೂರ್ವನಿದರ್ಶನವಾಗಬೇಕೋ ಅವರಿಗೆ ನಿದರ್ಶನವಾಗಲು ಹಾಗೂ ಬಹುಮುಖ್ಯವಾಗಿ ಕಾನೂನಿನ ಅಡಿ ಪರಿಹಾರ ಬಯಸಿ ನ್ಯಾಯಾಲಯದ ಮೆಟ್ಟಿಲೇರಲು ಕಾರಣವಾಗಬೇಕು. ಸದರಿ ಪ್ರಕರಣದಲ್ಲಿ ಹೈಕೋರ್ಟ್‌ನ ಗ್ರಹಿಸಲಾಗದ ಭಾಷೆಯಲ್ಲಿ ಬರೆಯಲಾದ ತೀರ್ಪುಗಳು ನಾಗರಿಕರ ಕೈಗೆಟುಕುವಂತೆ ಹಾಗೂ ಅರ್ಥವಾಗುವಂತೆ ಇರಬೇಕೆನ್ನುವ ಪ್ರಯತ್ನಕ್ಕೆ ಅಪಚಾರ ಮಾಡಿದಂತಾಗುತ್ತದೆ” ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರದ ಕೈಗಾರಿಕಾ ನ್ಯಾಯಾಧಿಕರಣದ (ಸಿಜಿಐಟಿ) ಆದೇಶವನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ಕಳೆದ ವರ್ಷದ ನವೆಂಬರ್ 27ರಂದು ದೃಢೀಕರಿಸಿತ್ತು. ಪ್ರತಿವಾದಿಯ ವಿರುದ್ಧದ ಪ್ರಥಮ ಆರೋಪವಾದ ದುರ್ವರ್ತನೆ ಸಾಬೀತಾಗಿದ್ದು, ಅವರನ್ನು ವಜಾಗೊಳಿಸುವುದು ಅತ್ಯಂತ ಅಮಾನವೀಯ ಮತ್ತು ಅಸಮಾನವಾದ ಶಿಕ್ಷೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿತು. ಹಾಗಾಗಿ, ವಜಾಗೊಳಿಸುವ ದಂಡವನ್ನು ಕಡ್ಡಾಯ ನಿವೃತ್ತಿಯಾಗಿ ಮಾರ್ಪಡಿಸಲಾಗಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಹದಿನೆಂಟು ಪುಟಗಳ ತೀರ್ಪು ಬರೆದಿದ್ದು, ಅದು ಗ್ರಾಹ್ಯವಾಗದ ರೀತಿಯಲ್ಲಿತ್ತು. “ಕಳೆದ ವರ್ಷದ ನವೆಂಬರ್ 27ರಂದು ಹೈಕೋರ್ಟ್‌ನ ವಿಭಾಗೀಯ ಪೀಠವು ಸಂವಿಧಾನದ 226ನೇ ವಿಧಿಯಡಿ ಅರ್ಜಿದಾರರ ಮನವಿಯನ್ನು ವಜಾಗೊಳಿಸಿ ತೀರ್ಪಿನಲ್ಲಿ ಕಾರಣಗಳನ್ನು ಉಲ್ಲೇಖಿಸಿತ್ತು. ಹದಿನೆಂಟು ಪುಟಗಳಿಗೂ ಹೆಚ್ಚಿನ ತೀರ್ಪು ಗ್ರಹಿಸಲು ಅಸಾಧ್ಯವಾಗಿತ್ತು” ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
2017ರ ಏಪ್ರಿಲ್‌ನಲ್ಲಿ ಗ್ರಾಹ್ಯವಾಗದ ರೀತಿಯ ಇಂಗ್ಲಿಷ್ ಒಳಗೊಂಡ ತೀರ್ಪು ಹೊರಡಿಸಿದ್ದ ಹಿಮಾಚಲ ಪ್ರದೇಶ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಮದನ್ ಲೋಕೂರ್ ಮತ್ತು ದೀಪಕ್ ಗುಪ್ತಾ ಅವರಿದ್ದ ಪೀಠವು ಬದಿಗೆ ಸರಿಸಿತ್ತು. ಮತ್ತೊಂದು ಪ್ರಕರಣದಲ್ಲಿ ಪ್ರಥಮ ಮೇಲ್ಮನವಿ ನ್ಯಾಯಾಲಯಕ್ಕೆ ಪ್ರಕರಣ ಹಿಂದಿರುಗಿಸಿ 60 ಪುಟಗಳ ತೀರ್ಪು ಬರೆದಿದ್ದ ಹಿಮಾಚಲ ಪ್ರದೇಶ ಹೈಕೋರ್ಟ್ ಆದೇಶಕ್ಕೆ 2018ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎ ಎಂ ಸಪ್ರೆ ಮತ್ತು ಇಂದೂ ಮಲ್ಹೋತ್ರಾ ಅವರಿದ್ದ ವಿಭಾಗೀಯ ಪೀಠವು ಆಕ್ಷೇಪ ವ್ಯಕ್ತಪಡಿಸಿತ್ತು.