ನ್ಯಾಯಾಲಕ್ಕಿಂತಲೂ ಮಿಗಿಲು ಎಂಬಂತೆ ಕೋರ್ಟ್‌ ಆಫೀಸರ್‌ಗಳ ವರ್ತನೆ: ಸಿಜೆಗೆ ಎಎಬಿ ಪತ್ರ

ವಕೀಲರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದರೆ ಅವರಿಗೆ ಕೋರ್ಟ್ ಆಫೀಸರ್‌ ಜವಾಬ್ದಾರಿಯನ್ನೇ ನೀಡಬಾರದು ಮತ್ತು ಅಂಥವರನ್ನು ತೆಗೆದುಹಾಕಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
Vakeelara Bhavana, AAB
Vakeelara Bhavana, AAB
Published on

“ಕರ್ನಾಟಕ ಹೈಕೋರ್ಟ್‌ನ ನ್ಯಾಯಾಲಯದ ಅಧಿಕಾರಿಗಳು (ಕೋರ್ಟ್‌ ಆಫೀಸರ್‌ಗಳು) ತಾವು ನ್ಯಾಯಾಲಯಕ್ಕಿಂತಲೂ ದೊಡ್ಡವರು ಎಂಬ ರೀತಿಯಲ್ಲಿ ವರ್ತಿಸುತ್ತಿದ್ದು ಮೆಮೊಗಳನ್ನು (ಜ್ಞಾಪನಾ ಪತ್ರ) ಪೋಸ್ಟ್‌ ಮಾಡುವ ವಿಚಾರದಲ್ಲಿ ಆಯಾ ಪೀಠಗಳಲ್ಲಿನ ನ್ಯಾಯಮೂರ್ತಿಗಳು ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ಪಾಲನೆ ಮಾಡುತ್ತಿಲ್ಲ. ಆದ್ದರಿಂದ, ಕೂಡಲೇ ಇಂತಹವರನ್ನು ಬದಲಾಯಿಸಬೇಕು” ಎಂದು ಬೆಂಗಳೂರು ವಕೀಲರ ಸಂಘವು (ಎಎಬಿ) ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರಿಗೆ ಮನವಿ ಮಾಡಿದೆ.

"ಪ್ರಕರಣಗಳನ್ನು ಪೋಸ್ಟ್ ಮಾಡಲು ಅಡ್ಡಿಪಡಿಸುತ್ತಿರುವ ಕೋರ್ಟ್‌ ಆಫೀಸರ್‌ಗಳು ವಕೀಲರನ್ನು ಸೌಜನ್ಯದಿಂದ ನಡೆಸಿಕೊಳ್ಳುವುದಿಲ್ಲ. ವಕೀಲರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವುದಿಲ್ಲ. ಒರಟುತನ ಪ್ರದರ್ಶಿಸುತ್ತಾ ವಕೀಲರ ಬಗ್ಗೆ ಅತ್ಯಂತ ನಿಕೃಷ್ಟವಾಗಿ ವರ್ತಿಸುತ್ತಾರೆ. ಇವರನ್ನು ಮಾತನಾಡಿಸುವುದೇ ಅಸಾಧ್ಯ ಎನ್ನುವಂತಾಗಿದೆ. ವಕೀಲರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದರೆ ಅವರಿಗೆ ಕೋರ್ಟ್ ಆಫೀಸರ್‌ ಜವಾಬ್ದಾರಿಯನ್ನೇ ನೀಡಬಾರದು ಮತ್ತು ಅಂಥವರನ್ನು ತೆಗೆದುಹಾಕಬೇಕು" ಎಂದು ಪತ್ರದಲ್ಲಿ ಕೋರಲಾಗಿದೆ.

“ಪ್ರಕರಣಗಳನ್ನು ಪೋಸ್ಟ್ ಮಾಡುವಲ್ಲಿ ಹೈಕೋರ್ಟ್ ನ್ಯಾಯಾಂಗ ಆಡಳಿತ ಸಂಪೂರ್ಣ ಕುಸಿದಿದೆ” ಎಂದು ಆರೋಪಿಸಿರುವ ಎಎಬಿಯು “ಈ ವಿಷಯದಲ್ಲಿ ವಕೀಲರು ದಿನನಿತ್ಯ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಮೆಮೊಗಳನ್ನು ಪೋಸ್ಟ್ ಮಾಡಲು ಕಳುಹಿಸಲಾದ ಅನೇಕ ವಿಷಯಗಳನ್ನು ಪೋಸ್ಟ್ ಮಾಡದೇ ಇರುವುದು ವಕೀಲ ವೃಂದ ಮತ್ತು ದಾವೆದಾರರಲ್ಲಿ ತೀವ್ರ ಬೇಸರಕ್ಕೆ ಎಡೆ ಮಾಡಿಕೊಟ್ಟಿದೆ” ಎಂದು ಕಳವಳ ವ್ಯಕ್ತಪಡಿಸಿದೆ.

“ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರ ಅವಧಿಯಲ್ಲೂ ಈ ಗಂಭೀರ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಇದೇ ಕಾರಣಕ್ಕಾಗಿ ನ್ಯಾಯಾಲಯದ ಕುಂದುಕೊರತೆಗಳನ್ನು ಪರಿಹರಿಸಲು ಅಂದು ಹಿರಿಯ ನ್ಯಾಯಮೂರ್ತಿಗಳು ಸಭೆ ಸೇರಿದ್ದರು. ಆದರೆ, ಸಮಸ್ಯೆಗಳು ಇಂದಿಗೂ ಬಗೆಹರಿದಿಲ್ಲ. ಹೀಗಾಗಿ, ಈಗಲಾದರೂ ಈ ವಿಷಯ ಪರಿಹಾರಕ್ಕೆ ಮುಂದಾಗಬೇಕು” ಎಂದು ಎಎಬಿ ಮನವಿ ಮಾಡಿದೆ. 

“ಮೆಮೊಗಳು ಸ್ಥಳಾಂತರಗೊಂಡ ತಕ್ಷಣವೇ ಅವುಗಳನ್ನು ಪೋಸ್ಟ್ ಮಾಡುವ ವಿಧಾನವನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನದ ಸಹಾಯ ಪಡೆಯಬೇಕು. ಈ ಮೂಲಕ ಈ ವಿಷಯದಲ್ಲಿ ಸುಧಾರಣೆಗಳನ್ನು ಪ್ರಾರಂಭಿಸಲು ಮುಂದಾಗಬೇಕು” ಎಂದು ಮನವಿ ಮಾಡಲಾಗಿದೆ.

“ಹೈಕೋರ್ಟ್‌ನ ವಿಚಕ್ಷಣಾ ದಳ ಗಂಭೀರವಾಗಿರಬೇಕು ಮತ್ತು ರಿಜಿಸ್ಟ್ರಿ ಇಂತಹ ನಿರ್ಲಕ್ಷ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದುರದೃಷ್ಟವಶಾತ್ ಹೈಕೋರ್ಟ್‌ನ ವಿಚಕ್ಷಣಾ ದಳ ಈ ಸಂದರ್ಭಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ. ಇಂದಿನ ಅವ್ಯವಸ್ಥೆಗೆ ರಿಜಿಸ್ಟ್ರಿ ಕೂಡಾ ಜವಾಬ್ದಾರಿಯಾಗಿದೆ. ಇದರ ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ರಿಜಿಸ್ಟ್ರಿ ಶಾಖೆಗಳನ್ನು ನಿರಂತರವಾಗಿ ಪರಿಶೀಲಿಸಬೇಕಿದೆ. ಅಂತೆಯೇ, ರಿಜಿಸ್ಟ್ರಿಯಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ ಎಂಬುದನ್ನೂ ಖಾತ್ರಿಪಡಿಸಬೇಕಿದೆ” ಎಂದು ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಉಪಾಧ್ಯಕ್ಷ ಸಿ ಎಸ್‌ ಗಿರೀಶ್‌ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್ ವಿ ಪ್ರವೀಣ್ ಗೌಡ ಮತ್ತು ಖಜಾಂಚಿ ಶ್ವೇತಾ ರವಿಶಂಕರ್‌ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಆಗ್ರಹಿಸಿದ್ದಾರೆ.

Attachment
PDF
AAB letter to Chief Justice
Preview
Kannada Bar & Bench
kannada.barandbench.com