
ಆಂಧ್ರಪ್ರದೇಶದಲ್ಲಿ ಜಿಲ್ಲಾ ನ್ಯಾಯಾಲಯದ ಸ್ಥಳಾಂತರ ಪ್ರಶ್ನಿಸಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿ ಆಲಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, "ನ್ಯಾಯಾಲಯಗಳು ಇರುವುದು ವಕೀಲರಿಗಾಗಿ ಅಲ್ಲ ಬದಲಿಗೆ ಕಕ್ಷಿದಾರರಿಗೆ" ಎಂದು ಗುರುವಾರ ಕಿವಿಮಾತು ಹೇಳಿದೆ [ಬುರಗಡ್ಡ ಅಶೋಕ್ ಕುಮಾರ್ ಮತ್ತು ಆಂಧ್ರಪ್ರದೇಶ ಸರ್ಕಾರ ನಡುವಣ ಪ್ರಕರಣ].
ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವನ್ನು ಮಚಲಿಪಟ್ಟಣಂನಿಂದ ಅವನಿಗಡ್ಡಕ್ಕೆ ಸ್ಥಳಾಂತರಿಸಲು ಅನುಮತಿಸಿದ್ದ ಆಂಧ್ರಪ್ರದೇಶ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು.
"ನ್ಯಾಯಾಲಯ ಸ್ಥಾಪನೆಯಾದಾಗಲೆಲ್ಲಾ ವಕೀಲರು ವಿರೋಧಿಸುತ್ತಾರೆ. ನ್ಯಾಯಾಲಯ ಇರುವುದು ವಕೀಲರಿಗಾಗಿ ಅಲ್ಲ, ಕಕ್ಷಿದಾರರಿಗಾಗಿ. ಮನೆ ಬಾಗಿಲಿಗೆ ನ್ಯಾಯ ತಲುಪಬೇಕು ಎಂಬ ಬಗ್ಗೆ ಮಾತನಾಡುತ್ತೇವೆ ಆದರೂ ಹೀಗೆಲ್ಲಾ ನಡೆಯುತ್ತದೆ” ಎಂದು ಸಿಜೆಐ ಅರ್ಜಿದಾರರ ಕಿವಿಹಿಂಡಿದರು.
ನ್ಯಾಯಾಲಯ ಸ್ಥಳಾಂತರದಿಂದಾಗಿ ಸ್ಥಳೀಯ ವಕೀಲರಿಗೆ ಸ್ವಲ್ಪ ಅನಾನುಕೂಲತೆ ಉಂಟಾಗಬಹುದು, ಆದರೆ ಅದರಿಂದ ಅಂತಿಮವಾಗಿ ದಾವೆ ಹೂಡುವವರಿಗೆ ಪ್ರಯೋಜನವಾಗಲಿದ್ದು ವ್ಯಾಪಕ ಸಾರ್ವಜನಿಕ ಹಿತಾಸಕ್ತಿಗೆ ಕಾರಣವಾಗುತ್ತದೆ ಎಂದು ಹೈಕೋರ್ಟ್ ಈ ಹಿಂದೆ ಹೇಳಿತ್ತು.
ಸುಪ್ರೀಂ ಕೋರ್ಟ್ ಟೀಕೆ ಹಿನ್ನೆಲೆಯಲ್ಲಿ ಅರ್ಜಿದಾರರು ಅರ್ಜಿ ಹಿಂಪಡೆಯಲು ಮುಂದಾದರು ಅದಕ್ಕೆ ನ್ಯಾಯಾಲಯ ಸಮ್ಮತಿಸಿತು.