Karnataka HC
Karnataka HC

ಶೌಚಾಲಯ ಎಲ್ಲಿ ನಿರ್ಮಿಸಬೇಕು ಎಂದು ನ್ಯಾಯಾಲಯ ನಿರ್ಧರಿಸಲಾಗದು: ಅರ್ಜಿ ವಜಾ ಮಾಡಿದ ಹೈಕೋರ್ಟ್‌

ಪ್ರಮುಖ ರಸ್ತೆಗೆ ಸೇರಿಕೊಂಡಂತೆ ಶೌಚಾಲಯದ ಬಾಗಿಲು ನಿರ್ಮಿಸದಂತೆ ಸಂಬಂಧಪಟ್ಟವರಿಗೆ ಸ್ಥಳೀಯ ನಿವಾಸಿಗಳು ಮನವಿ ಸಲ್ಲಿಸಬಹುದಾಗಿದೆ. ಅಧಿಕಾರಿಗಳು ಅದನ್ನು ಪರಿಶೀಲಿಸಬಹುದು ಎಂದ ನ್ಯಾಯಾಲಯ.
Published on

ಪ್ರಮುಖ ಮುಖ್ಯರಸ್ತೆಗೆ ಸೇರಿಕೊಂಡ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶಿಸಿಬೇಕು ಎಂದು ಬೆಂಗಳೂರು ಸದಾಶಿವ ನಗರದ ಆಯ್ದ ನಿವಾಸಿಗಳು ಸಲ್ಲಿಸಿದ್ದ ಮನವಿಯನ್ನು ಈಚೆಗೆ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌, “ಶೌಚಾಲಯ ಎಲ್ಲಿ ನಿರ್ಮಿಸಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಾಗದು” ಎಂದಿದೆ.

ಸದಾಶಿವನಗರದ 13ನೇ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬಾರದು. ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

“ಶೌಚಾಲಯದ ಬಾಗಿಲನ್ನು ಮೊದಲಿಗೆ ಪಾರ್ಕ್‌ ಒಳಗೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಈಗಿನ ವಿನ್ಯಾಸದ ಪ್ರಕಾರ ಶೌಚಾಲಯದ ಬಾಗಿಲನ್ನು ರಸ್ತೆಗೆ ಸೇರಿದಂತೆ ತೆರಯಲಾಗುತ್ತಿದೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ಸಮಸ್ಯೆಯಾಗುತ್ತದೆ. ಬಿಬಿಎಂಪಿ ವಾಹನಗಳು ತ್ಯಾಜ್ಯ ಸಂಗ್ರಹಣೆಗೆ ಬರುವುದರಿಂದ ನಿವಾಸಿಗಳಿಗೆ ಇನ್ನಷ್ಟು ಸಮಸ್ಯೆಯಾಗುತ್ತದೆ” ಎಂದು ಅರ್ಜಿದಾರರು ವಾದಿಸಿದ್ದರು.

ಇದಕ್ಕೆ ಪೀಠವು ಸ್ಥಳೀಯರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಬಿಬಿಎಂಪಿಗೆ ಆದೇಶಿಸಿರುವ ನ್ಯಾಯಾಲಯವು ಎಲ್ಲಿ ಶೌಚಾಲಯ ನಿರ್ಮಿಸಬೇಕು ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ. ಇದನ್ನು ನ್ಯಾಯಾಲಯ ನಿರ್ಧರಿಸಲಾಗದು” ಎಂದಿದೆ.

ಅಲ್ಲದೇ, “ಶೌಚಾಲಯದ ಬಾಗಿಲು ಪಾರ್ಕ್‌ ಒಳಗೆ ಇರಬೇಕೋ ಅಥವಾ ಪ್ರಮುಖ ರಸ್ತೆಗೆ ಸೇರಿಕೊಂಡಂತೆ ಇರಬೇಕೋ ಎಂಬುದನ್ನು ಸರ್ಕಾರ ನಿರ್ಧರಿಸಲಿದೆ. ಪ್ರಮುಖ ರಸ್ತೆಗೆ ಸೇರಿಕೊಂಡಂತೆ ಶೌಚಾಲಯದ ಬಾಗಿಲು ನಿರ್ಮಿಸದಂತೆ ಸಂಬಂಧಪಟ್ಟವರಿಗೆ ಸ್ಥಳೀಯ ನಿವಾಸಿಗಳು ಮನವಿ ಸಲ್ಲಿಸಬಹುದಾಗಿದೆ. ಅಧಿಕಾರಿಗಳು ಅದನ್ನು ಪರಿಶೀಲಿಸಬಹುದು” ಎಂದು ನ್ಯಾಯಾಲಯ ಹೇಳಿದೆ.

Kannada Bar & Bench
kannada.barandbench.com