ವಿವಾಹಿತೆ ಗಂಡನ ಮನೆಯವರಿಂದ ಚಿನ್ನ ಮರಳಿ ಕೇಳಿದಾಗ ನ್ಯಾಯಾಲಯಗಳು ಪುರಾವೆಗಳಿಗೆ ಕಟ್ಟುಬೀಳಬಾರದು: ಕೇರಳ ಹೈಕೋರ್ಟ್

ನವವಿವಾಹಿತೆಯರು ಅತ್ತೆ ಮನೆಯವರಿಗೆ ನಂಬಿಕೆಯ ಆಧಾರದ ಮೇಲೆ ಚಿನ್ನ ಒಪ್ಪಿಸಿರುತ್ತಾರೆ. ವ್ಯಾಜ್ಯ ಉಂಟಾಗಬಹುದು ಎಂದು ಊಹಿಸಿ ಅವರು ಅದರ ರಶೀದಿ ಇಟ್ಟುಕೊಂಡಿರಬೇಕು ಎಂದು ನಿರೀಕ್ಷಿಸಲಾಗದು ಎಂಬುದಾಗಿ ನ್ಯಾಯಾಲಯ ನುಡಿಯಿತು.
ವಿವಾಹಿತೆ ಗಂಡನ ಮನೆಯವರಿಂದ ಚಿನ್ನ ಮರಳಿ ಕೇಳಿದಾಗ ನ್ಯಾಯಾಲಯಗಳು ಪುರಾವೆಗಳಿಗೆ ಕಟ್ಟುಬೀಳಬಾರದು: ಕೇರಳ ಹೈಕೋರ್ಟ್
Published on

ವಿವಾಹಿತ ಮಹಿಳೆಯರು ತಮ್ಮ ವೈವಾಹಿಕ ಗೃಹದಲ್ಲಿ ಅತ್ತೆ-ಮಾವಂದಿರ ಸುಪರ್ದಿಗೆ ವಹಿಸಿದ್ದ  ಚಿನ್ನಾಭರಣ ಹಿಂದಿರುಗಿಸುವಂತೆ ಕೋರಿ ಸಲ್ಲಿಸುವ ಅರ್ಜಿಗಳ ವಿಚಾರಣೆ ಮಾಡುವಾಗ ನ್ಯಾಯಾಲಯಗಳು ಪ್ರಾಯೋಗಿಕ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಬುದ್ಧಿಮಾತು ಹೇಳಿದೆ.

ಹೊಸದಾಗಿ ಮದುವೆಯಾದ ಮಹಿಳೆಯರು ಸಾಮಾನ್ಯವಾಗಿ ತಮ್ಮ ಆಭರಣಗಳನ್ನು ಯಾವುದೇ ದಾಖಲೆಗಳಿಲ್ಲದೆ ಅಥವಾ ಸ್ವತಂತ್ರ ಸಾಕ್ಷಿಗಳಿಲ್ಲದೆ ತಮ್ಮ ಅತ್ತೆ-ಮಾವಂದಿರಿಗೆ ಒಪ್ಪಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ, ವಿವಾಹಿತ ಮಹಿಳೆಯರು ತಮ್ಮ ಅತ್ತೆ-ಮಾವಂದಿರಿಗೆ ಆಭರಣಗಳನ್ನು ಹಸ್ತಾಂತರಿಸಿರುವುದಕ್ಕೆ ಸಂಬಂಧಿಸಿದಂತೆ ರಶೀದಿ ಪಡೆದಿರಬೇಕು ಅಥವಾ ಕಟ್ಟುನಿಟ್ಟಾದ ಪುರಾವೆಗಳನ್ನು ಒದಗಿಸಬೇಕು ಎಂದು ನಿರೀಕ್ಷಿಸುವುದು ಅಪ್ರಾಯೋಗಿಕ ಎಂಬುದಾಗಿ ನ್ಯಾಯಮೂರ್ತಿಗಳಾದ  ದೇವನ್ ರಾಮಚಂದ್ರನ್ ಮತ್ತು ನ್ಯಾಯಮೂರ್ತಿ ಎಂ ಬಿ ಸ್ನೇಹಲತಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

Also Read
ಸುಳ್ಳು ಭರವಸೆ ನೀಡಿ ಪರಪುರುಷ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ವಿವಾಹಿತೆ ಆರೋಪಿಸುವಂತಿಲ್ಲ: ಮಧ್ಯಪ್ರದೇಶ ಹೈಕೋರ್ಟ್

"ನವವಿವಾಹಿತ ಮಹಿಳೆ ತನ್ನ ಪತಿ ಅಥವಾ ಅತ್ತೆ-ಮಾವಂದಿರಿಗೆ ಆಭರಣ  ಹಸ್ತಾಂತರಿಸಿದಾಗ ಅಂತಹ ವಹಿವಾಟುಗಳ ಕೌಟುಂಬಿಕ ಮತ್ತು ಅನೌಪಚಾರಿಕ ಸ್ವರೂಪದಿಂದಾಗಿ ರಸೀದಿ ಅಥವಾ ಸ್ವತಂತ್ರ ಸಾಕ್ಷಿ ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಅವರು ದಾಖಲೆಗಳನ್ನು ಅಥವಾ ಸ್ವತಂತ್ರ ಸಾಕ್ಷಿಗಳನ್ನು ಹಾಜರುಪಡಿಸುವ ಸ್ಥಿತಿಯಲ್ಲಿರುವುದಿಲ್ಲ" ಎಂದು ನ್ಯಾಯಾಲಯ ವಿವರಿಸಿತು.

ಹೀಗಾಗಿ, ವಿವಾಹಿತ ಮಹಿಳೆಯರು ಅಂತಹ ಚಿನ್ನಾಭರಣಗಳನ್ನು ಹಿಂದಿರುಗಿಸುವಂತೆ ಮೊಕದ್ದಮೆ ಹೂಡಿದಾಗ ನ್ಯಾಯಾಲಯಗಳು ಕಟ್ಟುನಿಟ್ಟಾದ ಕಾನೂನು ಪುರಾವೆ ಅಗತ್ಯ ಎಂದು ಒತ್ತಾಯಿಸಬಾರದು ಎಂಬುದಾಗಿ ಪೀಠ ಹೇಳಿದೆ. ಬದಲಾಗಿ, ನ್ಯಾಯಾಲಯಗಳು (ಘಟನೆಗಳ ಯಾವ ಆವೃತ್ತಿಯು ನಿಜವಾಗುವ ಸಾಧ್ಯತೆ ಹೆಚ್ಚು ಎಂಬುದನ್ನು ನಿರ್ಧರಿಸುವ) ಸಂಭವನೀಯತೆಗಳ ಪ್ರಾಮುಖ್ಯತೆಯ ತತ್ವದ ಆಧಾರದ ಮೇಲೆ ಅಂತಹ ಪ್ರಕರಣಗಳನ್ನು ಪರಾಮರ್ಶಿಸಬೇಕು ಎಂದು ಅದು ನುಡಿಯಿತು.

ಮುಂದುವರೆದು, "ಅಂತಹ ಸಂದರ್ಭಗಳಲ್ಲಿ, ಕ್ರಿಮಿನಲ್ ಕಾನೂನಿನಲ್ಲಿ ಅಗತ್ಯವಿರುವಂತೆ ಸಮಂಜಸವಾದ ಸಂಶಯ ಮೀರಿದ ಕಠಿಣ ಪುರಾವೆಗಳು ಅನ್ಯಾಯ ಉಂಟುಮಾಡುವುದರಿಂದ ನ್ಯಾಯಾಲಯ ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಳ್ಳಬೇಕು ಮತ್ತು ಸಂಭವನೀಯತೆಯ ಪ್ರಾಮುಖ್ಯತೆಯ ತತ್ವದ ಮೇಲೆ ಜವಾಬ್ದಾರಿಯ ವಿಷಯವನ್ನು ನಿರ್ಧರಿಸಬೇಕು" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ತನ್ನ ಅತ್ತೆ-ಮಾವನಿಂದ ತನ್ನ ಚಿನ್ನಾಭರಣಗಳನ್ನು ಹಿಂದಿರುಗಿಸಲು ಅರ್ಜಿ ಸಲ್ಲಿಸಿದ್ದ ವಿಧವೆಯೊಬ್ಬರಿಗೆ ಪರಿಹಾರ ನೀಡುವ ಸಂದರ್ಭದಲ್ಲಿ ನ್ಯಾಯಾಲಯ  ಈ  ವಿಚಾರ ತಿಳಿಸಿತು.

 ಸ್ತ್ರೀಧನ (ಮದುವೆ ಸಮಯದಲ್ಲಿ ಮಹಿಳೆಗೆ ಆಕೆಯ ಕುಟುಂಬ ನೀಡಿದ ಚಿನ್ನ) ಹಿಂದಿರುಗಿಸುವಂತೆ ಮಹಿಳೆಯರು ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸುವಾಗ ನ್ಯಾಯಾಲಯಗಳು ಪುರಾವೆಗಳ ಕಠಿಣ ಮಾನದಂಡಗಳನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದಾಗ ಇದೇ ಪೀಠ  ಬೇರೊಂದು ಪ್ರಕರಣದ ವಿಚಾರಣೆಯ ವೇಳೆಯೂ ತಿಳಿಸಿತ್ತು.

 ಈ ಪ್ರಕರಣದಲ್ಲಿ, ವಿಧವೆ ಮಹಿಳೆ ತನ್ನ ಮದುವೆಯ ದಿನದಂದು 81 ಸವರನ್‌ ಚಿನ್ನಾಭರಣಗಳನ್ನು ಧರಿಸಿದ್ದಾಗಿ ಹೇಳಿಕೊಂಡಿದ್ದಾಳೆ, ಇದರಲ್ಲಿ ತನ್ನ ಪೋಷಕರು, ಸಂಬಂಧಿಕರು ಮತ್ತು ಪತಿ ಉಡುಗೊರೆಯಾಗಿ ನೀಡಿದ ಚಿನ್ನವೂ ಸೇರಿದೆ.

ಮದುವೆಯ ದಿನ ತಾನು ಧರಿಸಿದ್ದ 81 ಸವರನ್‌ ಚಿನ್ನಾಭರಣದಲ್ಲಿ ತವರಿನ ಕಡೆಯವರು ನೀಡಿದ ಉಡುಗೊರೆಯೂ ಸೇರಿತ್ತು. ಅದನ್ನು ಸುರಕ್ಷಿತವಾಗಿ ಇರಿಸುವಂತೆ ಅತ್ತೆ ಮಾವಂದಿರಿಗೆ ತಿಳಿಸಿದ್ದೆ. ಪತಿ ವಿದೇಶಕ್ಕೆ ಕೆಲಸಕ್ಕೆ ತೆರಳಿದ್ದರು. ಅತ್ತೆ ಮನೆಯಲ್ಲಿಯೇ ವಾಸವಾಗಿದ್ದ ತನಗೆ ಅವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಈ ಮಧ್ಯೆ ಪತಿ  ವಿದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ನಂತರ ಮನೆ ಬಿಟ್ಟು ತೆರಳುವಂತೆ ಅತ್ತೆ ಮನೆಯವರು ಒತ್ತಡ ಹೇರಿದರು. ಪದೇ ಪದೇ ಬೇಡಿಕೆಯಿಟ್ಟರೂ ತನ್ನ ಚಿನ್ನಾಭರಣ ಹಿಂತಿರುಗಿಸಿರಲಿಲ್ಲ ಎಂದು ಮಹಿಳೆ ಈ ಹಿಂದೆ ಕೌಟುಂಬಿಕ ನ್ಯಾಯಾಲಯ ಮೊರೆ ಹೋಗಿದ್ದರು.

ಕೌಟುಂಬಿಕ ನ್ಯಾಯಾಲಯವು ಆಕೆಯ ಮನವಿಯನ್ನು ಭಾಗಶಃ ಪುರಸ್ಕರಿಸಿ, ಅತ್ತೆ-ಮಾವಂದಿರು 53 ಸವರನ್ ಚಿನ್ನಾಭರಣಗಳನ್ನು ಹಿಂದಿರುಗಿಸುವಂತೆ ನಿರ್ದೇಶಿಸಿತು. ಈ ತೀರ್ಪಿನಿಂದ ನೊಂದ ಅತ್ತೆಮನೆಯವರು  ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಅಂತಿಮವಾಗಿ ಹೈಕೋರ್ಟ್, ಮೈದುನನ ವಿರುದ್ಧ  ಕೌಟುಂಬಿಕ ನ್ಯಾಯಾಲಯ ಪ್ರಕಟಿಸಿದ್ದ ಆದೇಶ ರದ್ದುಗೊಳಿಸಿತು. ಆದರೆ, ಅತ್ತೆಗೆ ನೀಡಿದ ಕುಟುಂಬ ನ್ಯಾಯಾಲಯದ ನಿರ್ದೇಶನಗಳನ್ನು ಎತ್ತಿಹಿಡಿದ ಹೈಕೋರ್ಟ್, 53 ಸವರನ್‌ ಚಿನ್ನಾಭರಣಗಳನ್ನು ಸೊಸೆಗೆ ಹಿಂದಿರುಗಿಸುವಂತೆ ಆದೇಶಿಸಿತು.

Also Read
ಸುಳ್ಳು ಭರವಸೆ ನೀಡಿ ಪರಪುರುಷ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ವಿವಾಹಿತೆ ಆರೋಪಿಸುವಂತಿಲ್ಲ: ಮಧ್ಯಪ್ರದೇಶ ಹೈಕೋರ್ಟ್

ಮಹಿಳೆಯ ತಂದೆ 53 ಸವರನ್‌ ಚಿನ್ನಾಭರಣಗಳನ್ನು ಖರೀದಿಸಿದ್ದನ್ನು ತೋರಿಸುವ ಆಭರಣ ಖರೀದಿ ಬಿಲ್‌ಗಳು ಸೇರಿದಂತೆ ಕುಟುಂಬ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಾಕ್ಷ್ಯಗಳನ್ನು ಪರಿಗಣಿಸಿದ ಪೀಠ ಈ ತೀರ್ಪು ನೀಡಿದೆ.

ಮಹಿಳೆ ಗಣನೀಯ ಪ್ರಮಾಣದ ಚಿನ್ನಾಭರಣ ಧರಿಸಿದ್ದ ಛಾಯಾಚಿತ್ರಗಳನ್ನು ಉಲ್ಲೇಖಿಸಿದ ಪೀಠ . ಈ ಫೋಟೋಗಳು ಮತ್ತು ಬಿಲ್‌ಗಳ ಸತ್ಯಾಸತ್ಯತೆ ಬಗ್ಗೆ ಗಂಭೀರ ಆಕ್ಷೇಪಣೆ ಎತ್ತಿಲ್ಲ ಎಂದಿತು.

ತಾನು ಪ್ರತ್ಯೇಕವಾಗಿ ವಾಸಿಸುತ್ತಿದ್ದು ತಾನು ಆಭರಣ ಇರಿಸಿಕೊಂಡಿಲ್ಲ ಎಂಬ ಮೈದುನನ ವಾದವನ್ನು ಮನ್ನಿಸಿದ್‌ ನ್ಯಾಯಾಲಯ ಆತನ ವಿರುದ್ಧ ಕೌಟುಂಬಿಕ ನ್ಯಾಯಾಲಯ ನೀಡಿದ್ದ ನಿರ್ದೇಶನಗಳನ್ನು ರದ್ದುಗೊಳಿಸಿತು.

Kannada Bar & Bench
kannada.barandbench.com