ಮಹಿಳೆಯ ವಿರುದ್ಧದ ಅಪರಾಧಗಳಲ್ಲಿ ಕೋರ್ಟುಗಳು ಮೂಕಪ್ರೇಕ್ಷಕರಾಗದೆ ಕೃಷ್ಣನಂತೆ ಧರ್ಮ ರಕ್ಷಿಸಬೇಕು: ಕರ್ನಾಟಕ ಹೈಕೋರ್ಟ್

69 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿ ವಿಚಾರಣೆ ವೇಳೆ ಈ ಆದೇಶ ಹೊರಡಿಸಲಾಗಿದೆ.
Lord Krishna and Draupadi
Lord Krishna and Draupadi

69 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯನ್ನು ಇತ್ತೀಚೆಗೆ ತಿರಸ್ಕರಿಸಿರುವ ರಾಜ್ಯ ಹೈಕೋರ್ಟ್, ‘ಶ್ರೀಕೃಷ್ಣ ಮಹಾಭಾರತದಲ್ಲಿ ಮಹಿಳೆಯರನ್ನು ರಕ್ಷಿಸಿದಂತೆ ಕೋರ್ಟುಗಳು ರಕ್ಷಣೆ ನೀಡಬೇಕು’ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಇ ಎಸ್ ಇಂದಿರೇಶ್ ಅವರಿದ್ದ ವಿಭಾಗೀಯ ಪೀಠ ನೀಡಿದ ಆದೇಶ ಹೀಗಿದೆ:

" 1860ರ 45ನೇ ಕಾಯ್ದೆ ಮೂಲಕ ಭಾರತೀಯ ದಂಡ ಸಂಹಿತೆ ಜಾರಿಗೆ ತರಲಾಗಿದ್ದರೂ, ಸ್ವಾತಂತ್ರ್ಯ ದೊರೆತು 74 ವರ್ಷ ಕಳೆದಿದ್ದರೂ ಕಾನೂನು ಭಂಜಕರ ಕೈಯಲ್ಲಿ ಮಹಿಳೆ ಸುರಕ್ಷಿತವಾಗಿಲ್ಲ. ಈಗ ನ್ಯಾಯಾಲಯವು ರಕ್ಷಕನಂತೆ ಕಾರ್ಯನಿರ್ವಹಿಸಬೇಕಿದ್ದು ಮಹಿಳಾ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಧರ್ಮ ರಕ್ಷಣೆ ಮಾಡಬೇಕು ಎಂದು ಕಾಲ ಎಚ್ಚರಿಸುತ್ತಿದೆ. ಭಾರತದ ಸಂವಿಧಾನದ 21 ನೇ ಪರಿಚ್ಛೇದದಲ್ಲಿ ತಿಳಿಸಿರುವಂತೆ ಅತ್ಯಾಚಾರಿಗಳು ಸೇರಿದಂತೆ ಕಾಯ್ದೆ ಉಲ್ಲಂಘಿಸುವವರನ್ನು ಕಠೋರವಾಗಿ ಶಿಕ್ಷಿಸಬೇಕಿದೆ. ನ್ಯಾಯಾಲಯಗಳು ಧರ್ಮ ರಕ್ಷಿಸಲು ಮಹಾಭಾರತದ ಭಗವಾನ್ ಶ್ರೀ ಕೃಷ್ಣನಂತೆ ವರ್ತಿಸಬೇಕು. "

ಕರ್ನಾಟಕ ಹೈಕೋರ್ಟ್

‘ಯಾವಾಗ ಧರ್ಮದ ಅವನತಿಯಾಗುವುದೋ, ಅಧರ್ಮ ತಲೆಎತ್ತುವುದೋ ಆಗ ನಾನು ಅವತರಿಸುತ್ತೇನೆ. ಸಜ್ಜನರ ರಕ್ಷಣೆಗಾಗಿ, ದುಷ್ಟರ ಶಿಕ್ಷೆಗಾಗಿ ಹಾಗೂ ಧರ್ಮ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ,’ ಎಂಬ ಭಗವದ್ಗೀತೆಯ ಒಂದು ಶ್ಲೋಕವನ್ನು ನ್ಯಾಯಾಲಯ ಉಲ್ಲೇಖಿಸಿದೆ.

"ನ್ಯಾಯಾಲಯದ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ತಲೆಮಾರುಗಳಿಂದ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯ ತಡೆಯುವ ನಿಟ್ಟಿನಲ್ಲಿ ನ್ಯಾಯಾಲಯಗಳು ಮೂಕ ಪ್ರೇಕ್ಷಕರಂತೆ ವರ್ತಿಸಲು ಸಾಧ್ಯವಿಲ್ಲ." ಎಂದು ಆದೇಶದಲ್ಲಿ ಹೇಳಲಾಗಿದೆ.

ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಹಾಗೂ ದರೋಡೆ ಸಂಬಂಧ 2014 ರ ನವೆಂಬರ್‌ನಲ್ಲಿ ನೀಡಲಾದ ತೀರ್ಪನ್ನು ಪ್ರಶ್ನಿಸಿ ನಾಗೇಶ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ. 69 ವರ್ಷದ ಸಂತ್ರಸ್ತೆಯೊಬ್ಬರು 2013ರ ಜುಲೈ ತಿಂಗಳಲ್ಲಿ ನಾಗೇಶ್ ತಮಗೆ ಜೀವ ಬೆದರಿಕೆ ಒಡ್ಡಿ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಿದ್ದರು. 2014ರ ತೀರ್ಪಿನಲ್ಲಿ ಸೆಷನ್ಸ್ ನ್ಯಾಯಾಧೀಶರು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು.

“ಅತ್ಯಾಚಾರವು ಕೇವಲ ದೈಹಿಕ ಹಲ್ಲೆಯಲ್ಲ, ಬದಲಿಗೆ ಸಂತ್ರಸ್ತೆಯ ಇಡೀ ವ್ಯಕ್ತಿತ್ವವನ್ನೇ ನಾಶಪಡಿಸುವಂತಹುದು. ಕೊಲೆ ಎನ್ನುವುದು ಸಂತ್ರಸ್ತ ವ್ಯಕ್ತಿಯ ದೇಹವನ್ನು ನಾಶಪಡಿಸಿದರೆ, ಅತ್ಯಾಚಾರಿಗಳು ಅಸಹಾಯಕ ಸ್ತ್ರೀಯ ಆತ್ಮವನ್ನೇ ಕೀಳಾಗಿಸುವ ಕೃತ್ಯವೆಸಗುತ್ತಾರೆ,” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ದಾಖಲೆಯ ಸಾಕ್ಷ್ಯ ಮತ್ತು ಆರೋಪಿ ನೀಡಿದ ತಪ್ಪೊಪ್ಪಿಗೆ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಪೀಠ ವಯಸ್ಸಾದ ಮಹಿಳೆ ಮೇಲೆ ಆರೋಪಿ ನಡೆಸಿದ ಲೈಂಗಿಕ ದೌರ್ಜನ್ಯವು "ಕ್ರೂರ ಮೃಗ" ಎಸಗಿದ ಕೃತ್ಯದಂತಿದೆ ಎಂದು ಅಭಿಪ್ರಾಯಪಟ್ಟಿದೆ.

ಮುಂದುವರೆದು, “ಅತ್ಯಾಚಾರವು ಸಂತ್ರಸ್ತೆಯನ್ನು ಕೀಳಾಗಿಸಿ, ಅಪಮಾನಿಸಿ ಅವರ ಮನಸ್ಸಿನಲ್ಲಿ ಮಾಯದ ವೇದನೆಯನ್ನುಂಟು ಮಾಡುತ್ತದೆ. ಅತ್ಯಾಚಾರಿಯು ಕೇವಲ ದೈಹಿಕ ಗಾಯಗಳನ್ನು ಮಾತ್ರವೇ ಮಾಡುವುದಿಲ್ಲ ಬದಲಿಗೆ ಮಹಿಳೆಯರು ಜತನದಿಂದ ಕಾಪಾಡಿಕೊಂಡು ಬಂದ ಅವರ ಘನತೆ, ಗೌರವ, ಮರ್ಯಾದೆ ಮತ್ತು ಶೀಲದ ಮೇಲೆ ಮಾಸದ ಕಲೆಯುಂಟು ಮಾಡುತ್ತದೆ. ಅತ್ಯಾಚರವು ಕೇವಲ ಮಹಿಳೆಯರ ಮೇಲಿನ ಅಪರಾಧವಲ್ಲ ಬದಲಿಗೆ ಇಡೀ ಸಮಾಜದ ಮೇಲಿನ ಅಪರಾಧ,” ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ಇಂತಹ ಅವಲೋಕನಗಳೊಂದಿಗೆ ಮೇಲ್ಮನವಿ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ ಆರೋಪಿಗೆ ವಿಧಿಸಲಾಗಿದ್ದ ಏಳು ವರ್ಷಗಳ ಕಠಿಣ ಸಜೆ ಸೇರಿದಂತೆ ಇತರೆ ಶಿಕ್ಷೆಗಳನ್ನು ಎತ್ತಿಹಿಡಿಯಿತು.

ಮೇಲ್ಮನವಿಯ ಪ್ರತಿಯನ್ನು ಇಲ್ಲಿ ಓದಿ:

Attachment
PDF
Mute_spectator___Karnataka_HC.pdf
Preview

Related Stories

No stories found.
Kannada Bar & Bench
kannada.barandbench.com