
ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನ್ಯಾಯಾಂಗ ನಿರ್ವಹಿಸುವ ರೀತಿಯನ್ನು ಕಟುವಾಗಿ ಟೀಕಿಸಿದ ಒರಿಸ್ಸಾ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಹಿರಿಯ ವಕೀಲ ಎಸ್. ಮುರಳೀಧರ್, ಪತ್ರಕರ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಭಾರತದ ನ್ಯಾಯಾಲಯಗಳು ಸಾಮಾನ್ಯವಾಗಿ ಅಸಮಂಜಸ ಧೋರಣೆ ಅನುಸರಿಸುತ್ತವೆ ಎಂದು ಹೇಳಿದ್ದಾರೆ.
ದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಬಿ.ಜಿ. ವರ್ಗೀಸ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ' ಮಾಧ್ಯಮ, ನ್ಯಾಯಾಲಯಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ' ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ನ್ಯಾಯಯುತವಾಗಿ ವರದಿ ಮಾಡುವುದನ್ನು ಹತ್ತಿಕ್ಕುವ ಆದೇಶ ಮತ್ತು ತಡೆಯಾಜ್ಞೆಗಳನ್ನು ನ್ಯಾಯಾಲಯಗಳು ನೀಡುತ್ತಿವೆ ಎಂದು ಅವರು ಹೇಳಿದರು.
ನ್ಯಾ. ಎಸ್ ಮುರಳೀಧರ್ ಅವರ ಭಾಷಣದ ಪ್ರಮುಖಾಂಶಗಳು
ಸರ್ಕಾರ ಮತ್ತು ನ್ಯಾಯಾಲಯಗಳು ಎಲ್ಲಾ ಹಂತಗಳಲ್ಲಿ ಹೊರಡಿಸುವ ಆದೇಶಗಳನ್ನು ರದ್ದುಗೊಳಿಸುವುದು ಮತ್ತು ಅವುಗಳನ್ನು ವಜಾಗೊಳಿಸುವ ಆದೇಶಗಳನ್ನು ಹೊರಡಿಸುವುದು ಸಾಮಾನ್ಯವಾಗಿದೆ.
ವಿಪರ್ಯಾಸವೆಂದರೆ ಸುಳ್ಳು ಸುದ್ದಿಗಳನ್ನು ಬಯಲಿಗೆಳೆಯುವ ಪತ್ರಕರ್ತರಿಗೆ ಹಾನಿಯಾಗುವಂತಹ ಆರೋಪ ಮಾಡಲಾಗುತ್ತದೆ.
ಕ್ರಿಮಿನಲ್ ಮೊಕದ್ದಮೆ ಅಥವಾ ಬಂಧನದಿಂದ ಪರಿಹಾರ ಪಡೆಯಲು ಪತ್ರಕರ್ತರು ನ್ಯಾಯಾಲಯಗಳನ್ನು ಸಂಪರ್ಕಿಸಿದಾಗ, ಫಲಿತಾಂಶಗಳು ಅಸಮಾನವಾಗಿರುತ್ತವೆ
ಕೆಲವರಿಗೆ ಬಂಧನ ಅಥವಾ ಜಾಮೀನಿನಿಂದ ಸೂಕ್ತ ಸಮಯದಲ್ಲಿ ರಕ್ಷಣೆ ಸಿಕ್ಕಿದೆ. ಕೆಲವರು ದೀರ್ಘಕಾಲ ಕಾಯುವಂತಾದರೆ ಇನ್ನೂ ಕೆಲವರಿಗೆ ಯಾವುದೇ ಪರಿಹಾರ ದೊರೆತಿಲ್ಲ.
ಪ್ರಭಾವಿ ಕಾರ್ಪೊರೇಟ್‌ಗಳು ಮತ್ತು ರಾಜಕಾರಣಿಗಳು ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವ ಭಯದಿಂದಾಗಿ ತನಿಖಾ ಪತ್ರಿಕೋದ್ಯಮಕ್ಕೆ ಬೆದರಿಕೆ ಇದೆ.
“The nation wants to know why, in the times now, in our republic, in India today it is so hard to tolerate a healthy sense of humour, the ability to laugh at oneself or take a dig at the government?” (ಇದೀಗ, ಭಾರತದ ಗಣರಾಜ್ಯದಲ್ಲಿ, ಆರೋಗ್ಯಕರ ಹಾಸ್ಯಪ್ರಜ್ಞೆ, ಸ್ವಯಂ ತಮಾಷೆ ಅಥವಾ ಸರ್ಕಾರವನ್ನು ಟೀಕಿಸುವುದನ್ನು ಏಕೆ ಸಹಿಸುವುದು ಕಷ್ಟವಾಗುತ್ತಿದೆ ಎಂದು ರಾಷ್ಟ್ರ ತಿಳಿದುಕೊಳ್ಳಲು ಬಯಸುತ್ತದೆ)
2002 ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವನ್ನು ಪರಿಶೀಲಿಸಿದ ಸಾಕ್ಷ್ಯಚಿತ್ರವನ್ನು 2023 ರಲ್ಲಿ ಬಿಬಿಸಿ ಪ್ರಸಾರ ಮಾಡಿದ ನಂತರ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಹಿತಿ ತಂತ್ರಜ್ಞಾನ ನಿಯಮಗಳ ತುರ್ತು ಸೆಕ್ಷನ್‌ಗಳನ್ನು ಬಳಸಿಕೊಂಡು ಅದನ್ನು ತೆಗೆದುಹಾಕಲು ಮುಂದಾಯಿತು.. ಇದಾದ ಕೂಡಲೇ ಬಿಬಿಸಿ ಕಚೇರಿಗಳ ಮೇಲಿನ ಆದಾಯ ತೆರಿಗೆ ಸಮೀಕ್ಷೆಗಳು ನಡೆದವು. ಪಕ್ಷದ ವಕ್ತಾರರು ಇದನ್ನು "ಭ್ರಷ್ಟ ಬಕ್ವಾಸ್ ಕಾರ್ಪೊರೇಷನ್" ಎಂದು ಕರೆದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಡಂಬನಾತ್ಮಕ ವ್ಯಂಗ್ಯಚಿತ್ರವನ್ನು ತಮಿಳು ನಿಯತಕಾಲಿಕೆ ಪ್ರಕಟಿಸಿದ ಹಿನ್ನೆಲೆಯಲ್ಲಿ ಅದರ ಜಾಲಾತಾಣವನ್ನು ಸಂಪೂರ್ಣ ನಿಷೇಧಿಸಲಾಯಿತು. ಬಳಿಕ ವ್ಯಂಗ್ಯಚಿತ್ರ ತೆಗೆದುಹಾಕಿದರೆ ಮಾತ್ರ ಜಾಲತಾಣ ಮರು ಆರಂಭಕ್ಕೆ ಅನುಮತಿ ನೀಡುವುದಾಗಿ ಮದ್ರಾಸ್ ಹೈಕೋರ್ಟ್ ತಿಳಿಸಿತು. "ಪತ್ರಿಕಾ ಸ್ವಾತಂತ್ರ್ಯವು ದೇಶ ಮತ್ತು ಅದರ 140 ಕೋಟಿ ಜನರನ್ನು ಅಣಕಿಸುವುದಕ್ಕೆ ವಿಸ್ತರಿಸುವುದಿಲ್ಲ" ಎಂದು ಬಿಜೆಪಿ ವಕ್ತಾರರು ಹೇಳಿದ್ದರು.
ಸ್ವತಂತ್ರ ನ್ಯಾಯಾಂಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು, ಅದಕ್ಕೆ ಮುಕ್ತ ಪತ್ರಿಕಾ ವ್ಯವಸ್ಥೆ ಅಗತ್ಯವಿರುತ್ತದೆ. ಅಂತೆಯೇ ಪತ್ರಿಕಾ ವ್ಯವಸ್ಥೆ ಮುಕ್ತವಾಗಿರಲು, ಅದಕ್ಕೆ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಅವಶ್ಯಕವಾಗಿರುತ್ತದೆ.
ಭಾರತವು ಜಾಗತಿಕ ಅಂತರ್ಜಾಲ ಸ್ಥಗಿತಗೊಳಿಸುವ ವಿಚಾರದಲ್ಲಿ ಭಾರತ ಜಾಗತಿಕವಾಗಿ ಮುಂಚೂಣಿಯಲ್ಲಿದೆ. 2024ನೇ ಸಾಲೊಂದರಲ್ಲೇಜಾಗತಿಕವಾಗಿ 294 ರಲ್ಲಿ 84 ಸ್ಥಾನಗಳನ್ನು ಗಳಿಸಿದೆ.
ಕೆಲವು ಮುಖ್ಯ ನ್ಯಾಯಮೂರ್ತಿಗಳು, ಕೆಲವು ವರದಿಗಾರರ ಮೇಲೆ ಒಲವು ತೋರುತ್ತಾರೆ, ಅವರಿಗೆ ಸಂಸ್ಥೆಯ ಆಂತರಿಕ ಕಾರ್ಯಗಳ ಬಗ್ಗೆ ವಿಶೇಷ ಮಾಹಿತಿ ನೀಡಲಾಗುತ್ತದೆ.
ನ್ಯಾಯಾಧೀಶರು ತಮಗೆ ಅನುಕೂಲಕರವಾಗಿ ಪತ್ರಿಕಾ ಮಾಧ್ಯಮವನ್ನು ಬಳಸಿಕೊಳ್ಳುತ್ತಾರೆ ಆದರೆ ಮಾಧ್ಯಮಗಳು ಟೀಕಿಸಿದಾಗ ಕೋಪಗೊಳ್ಳುತ್ತಾರೆ.
ಬೇರೆ ದೇಶಗಳಂತಲ್ಲದೆ ಮಾಧ್ಯಮಗಳು ತಮ್ಮನ್ನು ಟೀಕಿಸಿದಾಗ ಭಾರತದ ನ್ಯಾಯಾಲಯಗಳು ತೀವ್ರ ಆಕ್ರೋಶದಿಂದ ಪ್ರತಿಕ್ರಿಯಿಸಿವೆ. ನರ್ಮದಾ ತೀರ್ಪು ಟೀಕಿಸಿದ ಲೇಖಕಿ ಅರುಂಧತಿ ರಾಯ್ ಅವರಿಗೆ ವಿಧಿಸಲಾದ ಜೈಲು ಶಿಕ್ಷೆಯಿಂದ ಹಿಡಿದು ಶಿಲ್ಲಾಂಗ್ ಟೈಮ್ಸ್ ಸಂಪಾದಕಿ ಪೆಟ್ರೀಷಿಯಾ ಮುಖಿಮ್ ಅವರ ಸಂಪಾದಕೀಯಕ್ಕಾಗಿ ₹ 2 ಲಕ್ಷ ದಂಡ ವಿಧಿಸಿದ ಘಟನೆಯವರೆಗೆ ಅಂತಹ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು.
ನ್ಯಾಯಾಂಗವು ಟೀಕೆಗಳನ್ನು ಸ್ವೀಕರಿಸುವುದನ್ನು ಕಲಿಯಬೇಕು
ಸಾರ್ವಜನಿಕ ಸುರಕ್ಷತಾ ಕಾಯಿದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ರೀತಿಯ ಕಾನೂನುಗಳು ವರದಿಗಳನ್ನು ಮೌನಗೊಳಿಸುತ್ತಲೇ ಇದ್ದು ಬಂಧನ, ಕಣ್ಗಾವಲು ಮತ್ತು ದೈಹಿಕ ದಾಳಿಗಳನ್ನು ಬೆದರಿಕೆಯ ಸಾಧನಗಳಾಗಿ ಹೆಚ್ಚು ಬಳಸಲಾಗುತ್ತಿದೆ.