ಕ್ಷಿಪ್ರ ರೀತಿಯಲ್ಲಿ ಕುಟುಂಬ ವ್ಯವಸ್ಥೆ ಕ್ಷಯ: ರಕ್ಷಣೆಗೆ ಧಾವಿಸುವಂತೆ ನ್ಯಾಯಾಲಯಗಳಿಗೆ ಮದ್ರಾಸ್ ಹೈಕೋರ್ಟ್ ಕರೆ

ಆದಾಗ್ಯೂ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅದರ ಸೂಕ್ಷ್ಮಗಳನ್ನು ಗಮನಿಸಿದ ನ್ಯಾಯಾಲಯವು ತಿಂಗಳಿಗೆ ಎರಡು ಬಾರಿಯ ಬದಲಿಗೆ ತಿಂಗಳಿಗೊಮ್ಮೆಯಂತೆ ಅಪ್ರಾಪ್ತ ವಯಸ್ಸಿನ ಮೊಮ್ಮಗುವನ್ನು ಭೇಟಿ ಮಾಡಲು ಅಜ್ಜಿ- ತಾತನಿಗೆ ಅವಕಾಶ ನೀಡಿತು.
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್

ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಕ್ಷೀಣಿಸುತ್ತಿರುವ ಕುಟುಂಬ ವ್ಯವಸ್ಥೆಯನ್ನು ನ್ಯಾಯಾಲಯಗಳು ರಕ್ಷಿಸಬೇಕಿದೆ ಎಂದು ಮದ್ರಾಸ್‌ ಹೈಕೋರ್ಟ್‌ ಈಚೆಗೆ ಕರೆ ನೀಡಿದೆ. ಅಪ್ರಾಪ್ತ ಹೆಣ್ಣು ಮಗುವಿನ ಅಜ್ಜಿ-ತಾತನಿಗೆ ಆಕೆಯನ್ನು ಭೇಟಿಯಾಗುವ ಹಕ್ಕನ್ನು ಒದಗಿಸುವ ಸಂದರ್ಭದಲ್ಲಿ ಈಚೆಗೆ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿತು [ಎ ಆಶಿಫಾ ಬೇಗಂ ಮತ್ತು ಖಾದರ್‌ ಬೀವಿ ನಡುವಣ ಪ್ರಕರಣ].

ಮಕ್ಕಳ ಸುಪರ್ದಿ ಅಥವಾ ಪೋಷಣೆ ಪ್ರಕರಣಗಳಲ್ಲಿ, ನ್ಯಾಯಾಲಯಗಳು ಮಗುವಿನ ಒಳಿತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಆರ್ ಮಹಾದೇವನ್ ಮತ್ತು ಮೊಹಮ್ಮದ್ ಶಫೀಕ್ ಅವರಿದ್ದ ವಿಭಾಗೀಯ ಪೀಠ ಒತ್ತಿ ಹೇಳಿತು.

ಹಾಗೆ ಮಕ್ಕಳ ಒಳಿತನ್ನು ಗಣನೆಗೆ ತೆಗೆದುಕೊಳ್ಳುವುದೇ ಅತ್ಯುನ್ನತ ಪರಿಗಣನೆ ಎಂದಿರುವ ಪೀಠ ದೇಶದಲ್ಲಿ ಕ್ಷಿಪ್ರವಾಗಿ ಕ್ಷೀಣಿಸುತ್ತಿರುವ ಕುಟುಂಬ ವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ಅದನ್ನು ಉಳಿಸಿಕೊಳ್ಳಬೇಕು ಎಂದಿತು. ಮಗುವಿನ ಸುಪರ್ದಿನ ವಿಚಾರ ಬಂದಾಗ ಅಪ್ರಾಪ್ತ ಮಗುವಿನ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ, ಸೂಕ್ತ ಪರಿಸರ ಮತ್ತು ಪೋಷಣೆಯ ದೊರಕುವಿಕೆಯ ಬಗ್ಗೆ ನ್ಯಾಯಾಲಯಗಳು ಖಚಿತಪಡಿಸಿಕೊಳ್ಳಬೇಕಿದೆ ಎಂದು ಮಾರ್ಚ್ 5ರಂದು ಪ್ರಕಟಿಸಿದ ಆದೇಶದಲ್ಲಿ ತಿಳಿಸಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಗುವಿಗೆ ಕೇವಲ 2.5 ವರ್ಷವಾಗಿರುವುದರಿಂದ ಮಗು ತಾಯಿಯ ಸುಪರ್ದಿಯಲ್ಲೇ ಇರಬೇಕು. ಆದರೆ ಮಗುವಿನ ಸಾಮಾನ್ಯ ಬೆಳವಣಿಗೆಗೆ ಸಹಾಯಕವಾಗುವ ಅಜ್ಜಿ ತಾತನಿಗೆ ಹಾಗೂ ಮೊಮ್ಮಗಳ ಭೇಟಿ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ಪೀಠ ಹೇಳಿತು. ಆದಾಗ್ಯೂ, ತಿಂಗಳಿಗೆ ಎರಡು ಬಾರಿ ಅಪ್ರಾಪ್ತ ಮೊಮ್ಮಗಳನ್ನು ಭೇಟಿಯಾಗಲು ನೀಡಿದ್ದ ಅವಕಾಶವನ್ನು ಬದಲಿಸಿ ತಿಂಗಳಿಗೊಮ್ಮೆ ಅಪ್ರಾಪ್ತ ವಯಸ್ಸಿನ ಮಗುವನ್ನು ಭೇಟಿ ಮಾಡಲು ಮಗುವಿನ ಅಜ್ಜಿ ತಾತನಿಗೆ ಅವಕಾಶ ನೀಡಿತು.

ನ್ಯಾಯಮೂರ್ತಿಗಳಾದ ಆರ್ ಮಹಾದೇವನ್ ಮತ್ತು ಮೊಹಮ್ಮದ್ ಶಫೀಕ್
ನ್ಯಾಯಮೂರ್ತಿಗಳಾದ ಆರ್ ಮಹಾದೇವನ್ ಮತ್ತು ಮೊಹಮ್ಮದ್ ಶಫೀಕ್

ಅಪ್ರಾಪ್ತ ಮಗುವಿನ ತಾಯಿ ತನ್ನ ಅತ್ತೆ ಮಾವಂದಿರ ವಿರುದ್ಧ ವಿವಿಧ ಆರೋಪಗಳನ್ನು ಮಾಡಿದ್ದನ್ನು ನ್ಯಾಯಾಲಯವು ಈ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಂಡಿತು. ತನ್ನ ಪತಿಯ ಅನಾರೋಗ್ಯ ಮತ್ತು ಸಾವಿಗೆ ತಾನೇ ಕಾರಣ ಎಂದು ಅತ್ತೆ ಮಾವಂದಿರು ಆರೋಪಿಸಿದ್ದರು. ತಾನು ʼಅಶುಭʼ ಎಂಬ ವದಂತಿ ಹಬ್ಬಿಸಿದ್ದರು. ಅತ್ತೆ- ಮಾವ ತನಗೆ ಮಗುವನ್ನು ಹಸ್ತಾಂತರಿಸಲು ನಿರಾಕರಿಸಿದ್ದರು. ಮಗುವನ್ನು ತನ್ನ ಸುಪರ್ದಿಗೆ ನೀಡುವಂತೆ ಕೇಳಿದಾಗ ಮನೆಯ ಮೂರನೇ ಮಹಡಿಯಿಂದ ಮಗುವನ್ನು ಎಸೆಯುವುದಾಗಿ ಬೆದರಿಕೆ ಹಾಕಿದ್ದರು. ಮಗುವಿನ ಆರೋಗ್ಯ ನಿರ್ಲಕ್ಷಿಸಿದ್ದರಿಂದ ಅದು ಸೋಂಕಿಗೆ ತುತ್ತಾಯಿತು. ಮಗುವಿನ ಭೇಟಿಗಾಗಿ ಮಧ್ಯಸ್ಥಿಕೆ ಒಪ್ಪಂದಕ್ಕೆ ಒತ್ತಾಯಪೂರ್ವಕವಾಗಿ ಸಹಿ ಹಾಕುವಂತೆ ಅತ್ತೆ ಮಾವಂದಿರು ಮಾಡಿದರು. ತನ್ನ ತವರು ಮನೆಗೆ ರೌಡಿಗಳ ಸಹಾಯದಿಂದ ನುಗ್ಗಿ ಮನೆಯನ್ನು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು ಎಂದು ಆರೋಪಿಸಿದ್ದರು.

ಈ ವಾದಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅಜ್ಜಿ ತಾತ, ತಮ್ಮ ಮಗನ ಸಾವಿನಿಂದ ಕಂಗಾಲಾಗಿರುವ ತಾವು, ಸೊಸೆ ಮಗುವನ್ನು ಕರೆದೊಯ್ದದ್ದರಿಂದ ಮತ್ತಷ್ಟು ದುಃಖಿತರಾದೆವು. ಸೊಸೆಯ ಪೋಷಕರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದೆ ಇರುವುದರಿಂದ ಅವರೊಂದಿಗೆ ಮಗುವನ್ನು ಇರುವಂತೆ ಹೇಳುವುದು ಮಗುವಿನ ಬೆಳವಣಿಗೆಗೆ ತೊಡಕುಂಟು ಮಾಡುತ್ತದೆ. ಅಲ್ಲದೆ, ಶಿಸ್ತು, ಮೌಲ್ಯಗಳು, ನೀತಿ, ನಿಯಮಗಳು, ಸಹಾನುಭೂತಿಯ ಕೊರತೆಗೆ ಕಾರಣವಾಗುತ್ತದೆ. ತಮ್ಮ ಬಳಿ ಚೆನ್ನೈ ಸುತ್ತಮುತ್ತಲೇ ಎರಡಕ್ಕಿಂತ ಹೆಚ್ಚಿನ ಆಸ್ತಿಗಳಿದ್ದು ಮಗುವನ್ನು ನೋಡಿಕೊಳ್ಳಲು, ಅಗತ್ಯಗಳನ್ನು ಪೂರೈಸಲು ತಾವು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದಿದ್ದರು.

ವಾಸ್ತವಾಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಅಜ್ಜಿತಾತಂದಿರು ತಿಂಗಳಿಗೆ ಎರಡು ಬಾರಿ ಭೇಟಿಯಾಗಲು ನೀಡಿದ್ದ ಅವಕಾಶವನ್ನು ಬದಲಿಸಿ ತಿಂಗಳಿಗೊಮ್ಮೆ ಮಗುವನ್ನು ಭೇಟಿಯಾಗುವಂತೆ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಮಾರ್ಪಾಡು ಮಾಡಿತು. ತಿಂಗಳಿಗೆ ಎರಡು ಬಾರಿ (ತಲಾ ಎರಡು ಗಂಟೆ ಕಾಲ) ಭೇಟಿಯಾಗುವ ಬದಲಿಗೆ ತಿಂಗಳ ಮೊದಲ ಶನಿವಾರದಂದು ಒಂದು ಬಾರಿಗೇ ನಾಲ್ಕು ಗಂಟೆಗಳ ಕಾಲ ಮಗುವನ್ನು ಭೇಟಿಯಾಗಬಹುದು ಎಂದು ಆದೇಶಿಸಿತು. ಇದೇ ವೇಳೆ, ಇತರ ಬಗೆಯ ಪರಿಹಾರಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಅಥವಾ ಈ ಸಂಬಂಧ ನ್ಯಾಯಾಧೀಶರನ್ನು ಎಡತಾಕಲು ಪಕ್ಷಕಾರರು ಸ್ವತಂತ್ರರು ಎಂದು ಹೇಳಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
A Aashifa Begum vs Khader Beevi.pdf
Preview

Related Stories

No stories found.
Kannada Bar & Bench
kannada.barandbench.com