ನ್ಯಾಯಾಲಯಗಳು ಪ್ರಕರಣ ಮುಂದೂಡಿಕೆ ಸಂಸ್ಕೃತಿಯಿಂದ ಹೊರಬರಬೇಕು: ಸುಪ್ರೀಂಕೋರ್ಟ್

ನ್ಯಾಯ ವಿತರಣಾ ವ್ಯವಸ್ಥೆಯ ಮೇಲೆ ದಾವೆ ಹೂಡುವವರ ನಂಬುಗೆ ಮತ್ತು ವಿಶ್ವಾಸಕ್ಕೆ ಧಕ್ಕೆಯಾಗದಂತೆ ʼಕೆಲಸದ ಸಂಸ್ಕೃತಿ ಬದಲಿಸುವ ಮತ್ತು ಮುಂದೂಡಿಕೆ ಸಂಸ್ಕೃತಿಯಿಂದ ಹೊರಬರುವʼ ಸಮಯ ಬಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಾಲಯಗಳು ಪ್ರಕರಣ ಮುಂದೂಡಿಕೆ ಸಂಸ್ಕೃತಿಯಿಂದ ಹೊರಬರಬೇಕು: ಸುಪ್ರೀಂಕೋರ್ಟ್

ನ್ಯಾಯಾಲಯಗಳು ಪ್ರಕರಣಗಳನ್ನು ಯಾಂತ್ರಿಕವಾಗಿ ಮತ್ತು ವಾಡಿಕೆಯಂತೆ ಮುಂದೂಡಬಾರದು, ನ್ಯಾಯ ವಿತರಣೆಯಲ್ಲಿ ವಿಳಂಬ ಉಂಟಾಗಲು ಅವು ಕಾರಣವಾಗಬಾರದು ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಹೇಳಿದೆ. (ಈಶ್ವರ ಲಾಲ್ ಮಾರ್ಲಿ ರಾಥೋಡ್ ಮತ್ತು ಗೋಪಾಲ್ ಮತ್ತಿತರರ ನಡುವಣ ಪ್ರಕರಣ).

ಪದೇ ಪದೇ ಪ್ರಕರಣ ಮುಂದೂಡಿಕೆಯಾದ ನಂತರ ಫಿರ್ಯಾದಿದಾರರ ಸಾಕ್ಷಿಗಳ ಪಾಟಿ ಸವಾಲು ಬಯಸಿದ್ದ ಪ್ರತಿವಾದಿಗಳ ಹಕ್ಕನ್ನು ರದ್ದುಪಡಿಸಿ ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮಧ್ಯಪ್ರದೇಶ ಹೈಕೋರ್ಟ್‌ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಸುಪ್ರೀಂಕೋರ್ಟ್‌ ಪೀಠ ಆಲಿಸಿತು.

ನ್ಯಾಯಾಲಯಗಳು ಪ್ರಕರಣಗಳನ್ನು ಯಾಂತ್ರಿಕವಾಗಿ ಮತ್ತು ವಾಡಿಕೆಯಂತೆ ಮುಂದೂಡಬಾರದು. ನ್ಯಾಯ ವಿತರಣೆಯಲ್ಲಿ ವಿಳಂಬ ಉಂಟಾಗಲು ಅವು ಕಾರಣವಾಗಬಾರದು. ದಕ್ಷ ನ್ಯಾಯ ವಿತರಣಾ ವ್ಯವಸ್ಥೆ ಅಳವಡಿಸಿಕೊಳ್ಳಲು ಮತ್ತು ಕಾನೂನು ಆಡಳಿತದಲ್ಲಿ ಇರಿಸಲಾದ ನಂಬಿಕೆ ಉಳಿಸಿಕೊಳ್ಳಲು ನ್ಯಾಯಾಲಯಗಳು ಶ್ರದ್ಧೆಯಿಂದ ಇರಬೇಕು ಮತ್ತು ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಇದರೊಂದಿಗೆ ಕಾನೂನು ಆಡಳಿತದಲ್ಲಿ ಇರುವ ನಂಬಿಕೆಯನ್ನು ಅವು ಉಳಿಸಿಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿತು.

ಅನೇಕ ಬಾರಿ ವಿಚಾರಣಾ ನ್ಯಾಯಾಲಯಗಳು ಪ್ರಕರಣಗಳ ಅನಗತ್ಯ ಮುಂದೂಡಿಕೆ ಒಪ್ಪದಿದ್ದಾಗ ನ್ಯಾಯಾಧೀಶರು ಕಟ್ಟುನಿಟ್ಟಿನವರು ಎಂದು ಆರೋಪಿಸಲಾಗುತ್ತದೆ. ಅಲ್ಲದೆ ಅವರು ವಕೀಲ ವರ್ಗದ ಅಸಮಾಧಾನವನ್ನು ಕೂಡ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆದರೂ ನ್ಯಾಯಾಂಗ ಅಧಿಕಾರಿಯ ಮನಸಾಕ್ಷಿ ಸ್ಪಷ್ಟವಾಗಿದ್ದರೆ ಮತ್ತು ನ್ಯಾಯಕ್ಕಾಗಿ ನ್ಯಾಯಾಲಯಗಳ ಮುಂದೆ ಕಾದಿರುವ ದಾವೆದಾರರ ಬಗ್ಗೆ ತನ್ನ ಕರ್ತವ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅದರ ಬಗ್ಗೆ ಚಿಂತಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಸ್ತುತ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ 2014 ರಿಂದ 2019 ರ ನಡುವೆ ಪ್ರತಿವಾದಿಗಳಿಗೆ ಸುಮಾರು ಹತ್ತು ಬಾರಿ ಪ್ರಕರಣ ಮುಂದೂಡಲು ಅವಕಾಶ ನೀಡಿತ್ತು. ಕಡೆಯ ಬಾರಿಗೆ ಕೊನೆಯ ಅವಕಾಶವೆಂಬಂತೆ ದಂಡ ಪಾವತಿಸಿ ಮುಂದೂಡಿಕೆಗೆ ಅವಕಾಶ ನೀಡಲಾಗಿತ್ತು.

ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ “ನ್ಯಾಯ ವಿತರಣಾ ವ್ಯವಸ್ಥೆಯ ಮೇಲೆ ದಾವೆದಾರರು ಇರಿಸಿದ ನಂಬುಗೆ ಮತ್ತು ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕೆಲಸದ ಸಂಸ್ಕೃತಿ ಬದಲಿಸುವ ಮತ್ತು ಮುಂದೂಡಿಕೆ ಸಂಸ್ಕೃತಿಯಿಂದ ಹೊರಬರುವ ಸಮಯ ಬಂದಿದೆ” ಎಂದು ಹೇಳಿದೆ.

ʼಕೆಲಸದ ಸಂಸ್ಕೃತಿ ಬದಲಿಸುವ ಮತ್ತು ಮುಂದೂಡಿಕೆ ಸಂಸ್ಕೃತಿಯಿಂದ ಹೊರಬರುವʼ ಸಮಯ ಬಂದಿದೆ”
- ಸರ್ವೋಚ್ಚ ನ್ಯಾಯಾಲಯ

ಇಂತಹ ಪ್ರಕ್ರಿಯೆ ಸಂಪೂರ್ಣ ಖಂಡನೀಯ ಎಂದು ವಿಶೇಷ ಅನುಮತಿ ಅರ್ಜಿ ವಜಾಗೊಳಿಸುವಾಗ ದ್ವಿಸದಸ್ಯ ಪೀಠ ಹೇಳಿತು. ಅಲ್ಲದೆ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ವಿಳಂಬ ತಂತ್ರಗಳು ಮತ್ತು ಪ್ರಕರಣ ಮುಂದೂಡುವಿಕೆ ಕೊಡುಗೆ ನೀಡುತ್ತಿರುವುದನ್ನು ಅದು ಪ್ರಸ್ತಾಪಿಸಿತು. ಪ್ರಕರಣಗಳನ್ನು ಮುಂದೂಡುವುದೆಂದರೆ ನ್ಯಾಯವನ್ನು ಕೊಲ್ಲುವುದಾಗಿದ್ದು ಸಕಾಲದಲ್ಲಿ ನ್ಯಾಯ ಸಿಗದಿರುವುದು ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ದಾವೆದಾರರ ನಂಬಿಕೆ ಮತ್ತು ವಿಶ್ವಾಸವನ್ನು ಕದಡಬಹುದು ಎಂದ ನ್ಯಾಯಾಲಯ ಮೇಲ್ಮನವಿಯನ್ನು ತಿರಸ್ಕರಿಸಿತು.

Related Stories

No stories found.
Kannada Bar & Bench
kannada.barandbench.com