ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳು ಅನಗತ್ಯ ಹಸ್ತಕ್ಷೇಪ ಮಾಡಬಾರದು: ಸುಪ್ರೀಂ ನ್ಯಾಯಮೂರ್ತಿ ಗವಾಯಿ

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಅವರು, ಖಾಸಗಿ ಹೂಡಿಕೆದಾರರ ನಡುವಿನ ವ್ಯಾಜ್ಯಗಳನ್ನು ನಿಭಾಯಿಸಲೆಂದೇ ನ್ಯಾಯಾಲಯ ಒದಗಿಸುವುದು ಮುಖ್ಯ ಎಂದರು.
ನ್ಯಾಯಮೂರ್ತಿ ಬಿ.ಆರ್.ಗವಾಯಿ
ನ್ಯಾಯಮೂರ್ತಿ ಬಿ.ಆರ್.ಗವಾಯಿ

ಭಾರತದ ನ್ಯಾಯಾಲಯಗಳು ಮಧ್ಯಸ್ಥಿಕೆ ಪ್ರಕ್ರಿಯೆಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಬಾರದು ಮತ್ತು ಅಂತಹ ವಿಚಾರಣೆಗಳು ನ್ಯಾಯಾಲಯವನ್ನು ತಲುಪಿದರೆ ಮಧ್ಯಸ್ಥಿಕೆದಾರನ ಪಾತ್ರವನ್ನಷ್ಟೇ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಇತ್ತೀಚೆಗೆ ಹೇಳಿದ್ದಾರೆ.

ಭಾರತೀಯ ಮಧ್ಯಸ್ಥಿಕೆ ಕೇಂದ್ರ ಡಿಸೆಂಬರ್ 16ರಂದು ಆಯೋಜಿಸಿದ್ದ 'ಆರ್ಥಿಕ ಬೆಳವಣಿಗೆಗೆ ವೇಗವರ್ಧಕವಾಗಿ ಮಧ್ಯಸ್ಥಿಕೆ' ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಭಾರತದ ಮಧ್ಯಸ್ಥಿಕೆ ವ್ಯವಸ್ಥೆಯ ದಕ್ಷತೆ ಉಳಿಸಿಕೊಳ್ಳಲು, ಮಧ್ಯಸ್ಥಿಕೆ ಪ್ರಕ್ರಿಯೆಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಿತಿಗೊಳಿಸಬೇಕು. ಜೊತೆಗೆ ಮಧ್ಯಸ್ಥಿಕೆ ಒಪ್ಪಂದಗಳು ಮತ್ತು ತೀರ್ಪುಗಳು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳುವ ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.

ಹಲವು ವರ್ಷಗಳಿಂದ ನ್ಯಾಯಾಂಗ ಸದಾ ಮಧ್ಯಸ್ಥಿಕೆ ಪರವಾದ ನಿಲುವು ತಳೆದಿದೆ ಎಂದು ನ್ಯಾ. ಗವಾಯಿ ಗಮನಸೆಳೆದರು. ಮಧ್ಯಸ್ಥಿಕೆ ಪ್ರಕ್ರಿಯೆಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಿತಗೊಳಿಸುವುದನ್ನು ನ್ಯಾಯಾಲಯಗಳು ಮುಂದುವರೆಸಬೇಕು ಎಂಬುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.

"...ಮಧ್ಯಸ್ಥಿಕೆ ನ್ಯಾಯಮಂಡಳಿಯ ಸ್ಥಾಪನೆಗೆ ಮೊದಲು ಅಥವಾ ಸ್ಥಾಪನೆಯ ಹಂತದಲ್ಲಿರುವ ಕೆಲ ಸಂದರ್ಭಗಳಲ್ಲಿ ಮಧ್ಯಂತರ ಪರಿಹಾರ ಒದಗಿಸುವ ಮೂಲಕ ನ್ಯಾಯಾಲಯಗಳು ಮಧ್ಯಸ್ಥಿಕೆದಾರನ ಪಾತ್ರ ವಹಿಸಬೇಕು" ಎಂದು ನ್ಯಾ. ಗವಾಯಿ ಅಭಿಪ್ರಾಯಪಟ್ಟರು.

ಭಾರತದಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಸುಗಮಗೊಳಿಸುವಲ್ಲಿ ವಾಣಿಜ್ಯ ಮಧ್ಯಸ್ಥಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನ್ಯಾ. ಗವಾಯಿ ತಮ್ಮ ಭಾಷಣದಲ್ಲಿ ಹೇಳಿದರು. ಆರ್ಥಿಕ ಅಭಿವೃದ್ಧಿ ಮತ್ತು ವಾಣಿಜ್ಯ ವ್ಯಾಜ್ಯಗಳ ಇತ್ಯರ್ಥ ಎಂಬುದು ಕೂಡ ಸಂವಾದಾತ್ಮಕ ನಂಟು ಹೊಂದಿದೆ ಎಂದು ಅವರು ವಿವರಿಸಿದರು.

ಸಮ್ಮೇಳನದಲ್ಲಿ ನಡೆಯುತ್ತಿರುವ ಚರ್ಚೆಗಳು ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯ ಕಾರ್ಯವಿಧಾನದ ಅಂಶಗಳ ಕಾನೂನು ಸುಧಾರಣೆಗಳಿಗೆ ಮಾತ್ರವೇ ಸೀಮಿತವಾಗಬಾರದು ಎಂದು ಅವರು ಸಲಹೆ ನೀಡಿದರು.

ಭಾರತದಲ್ಲಿ ಪರಿಣಾಮಕಾರಿ ಮಧ್ಯಸ್ಥಿಕೆಗೆ ಅಗತ್ಯವಾದ ಶಾಸಕಾಂಗ ಮತ್ತು ನ್ಯಾಯಾಂಗ ಆಲೋಚಿಸಬಹುದಾದ ಕೆಲ ಸಲಹೆಗಳನ್ನು ಅವರು ಈ ಸಂದರ್ಭದಲ್ಲಿ ನೀಡಿದರು:

  • ವ್ಯಾಜ್ಯದ ಪೂರ್ವ-ಉಲ್ಲೇಖ ಹಂತದಿಂದ ತೀರ್ಪನ್ನು ಪ್ರಶ್ನಿಸುವ ಹಂತದವರೆಗೆ ನ್ಯಾಯಾಧೀಶರ ಹಸ್ತಕ್ಷೇಪ ಕಡಿಮೆ ಮಾಡುವ ಅಗತ್ಯವಿದೆ.

  • ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಕ್ಕಾಗಿ ಗಡುವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ.

  • ಮಧ್ಯಸ್ಥಿಕೆ ತೀರ್ಪುಗಳ ಜಾರಿಯಾಗುವಂತೆ ನೋಡಿಕೊಳ್ಳುವುದು ಕಡ್ಡಾಯವಾಗಿದೆ.

  • ಪಕ್ಷಕಾರರ ಸ್ವಾಯತ್ತತೆಯನ್ನು ಗೌರವಿಸಬೇಕು.

  • ಮಧ್ಯಸ್ಥಿಕೆ ತೀರ್ಪನ್ನು ಪ್ರಶ್ನಿಸಲು ಅಗತ್ಯವಾದ ಆಧಾರಗಳನ್ನು ಕಡಿಮೆಗೊಳಿಸಿ ನಿರ್ದಿಷ್ಟಪಡಿಸಬೇಕು.

  • ಮಧ್ಯಸ್ಥಿಕೆ ತೀರ್ಪುಗಳಿಗೆ ತಡೆಯಾಜ್ಞೆ ನೀಡುವುದು ಒಂದು ಅಪವಾದವಾಗಿರಬೇಕೆ ವಿನಾ ಸಂಪ್ರದಾಯವಾಗಬಾರದು.

  • ತುರ್ತು ತೀರ್ಪುಗಳಿಗೆ ಮಾನ್ಯತೆ ನೀಡುವ ಬಗ್ಗೆ ಯೋಚಿಸಬೇಕು.

  • ಸಾಂಸ್ಥಿಕ ಮಧ್ಯಸ್ಥಿಕೆ ಮತ್ತು ಮಧ್ಯಸ್ಥಿಕೆ ಸಂಸ್ಥೆಗಳನ್ನು ಉತ್ತೇಜಿಸುವ ಅಗತ್ಯವಿದೆ.

  • ಪ್ಯಾನೆಲಿಸ್ಟ್ ಗಳು ಮತ್ತು ತಜ್ಞರು ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಸಹಾಯ ಮಾಡಬಹುದು.

  • ಎಲ್ಲಾ ಯುವ ವೃತ್ತಿಪರರಿಗೆ ಮಧ್ಯಸ್ಥಿಕೆ ಕೌಶಲ್ಯಗಳನ್ನು ಕಲಿಸಲು ತರಬೇತಿ ಅಧಿವೇಶನಗಳು ಮತ್ತು ಸಮ್ಮೇಳನಗಳು ನಡೆಯಬೇಕು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಅವರು, ಖಾಸಗಿ ಹೂಡಿಕೆದಾರರ ನಡುವಿನ ವ್ಯಾಜ್ಯಗಳನ್ನು ನಿಭಾಯಿಸಲೆಂದೇ ನ್ಯಾಯಾಲಯ ಒದಗಿಸುವುದು ಮುಖ್ಯ ಎಂದರು.

Related Stories

No stories found.
Kannada Bar & Bench
kannada.barandbench.com