ನಿವೃತ್ತ ನ್ಯಾಯಾಧೀಶರನ್ನಷ್ಟೇ ಮಧ್ಯಸ್ಥಿಕೆದಾರರನ್ನಾಗಿ ನೇಮಿಸುವ ಪರಿಪಾಠ ತಪ್ಪಬೇಕು: ನ್ಯಾ. ಎಲ್ ನಾಗೇಶ್ವರ ರಾವ್

ಬದಲಿಗೆ ವಿವಿಧ ವಯೋಮಾನದ ಅನುಭವಿ ಕಾನೂನು ವೃತ್ತಿಪರರು ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ನ್ಯಾ. ರಾವ್ ಒತ್ತಿಹೇಳಿದರು.
ನ್ಯಾ. ಎಲ್ ನಾಗೇಶ್ವರ ರಾವ್
ನ್ಯಾ. ಎಲ್ ನಾಗೇಶ್ವರ ರಾವ್

ನಿವೃತ್ತ ನ್ಯಾಯಾಧೀಶರನ್ನಷ್ಟೇ ಮಧ್ಯಸ್ಥಿಕೆದಾರರನ್ನಾಗಿ ನೇಮಿಸುವ ಪರಿಪಾಠವನ್ನು ಭಾರತೀಯ ನ್ಯಾಯಾಲಯಗಳು ತೊರೆಯಬೇಕು, ಬದಲಿಗೆ ವಿವಿಧ ವಯೋಮಾನದ ಅನುಭವಿ ಕಾನೂನು ವೃತ್ತಿಪರರನ್ನು ಈ ಕ್ಷೇತ್ರಕ್ಕೆ ನೇಮಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಇತ್ತೀಚೆಗೆ ಸಲಹೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌, ದೆಹಲಿ ಹೈಕೋರ್ಟ್‌ ಹಾಗೂ ದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಸಹಯೋಗದಲ್ಲಿ ನಡೆಯುತ್ತಿರುವ ದೆಹಲಿ ಮಧ್ಯಸ್ಥಿಕೆ ಸಪ್ತಾಹ (ಡಿಎಡಬ್ಲ್ಯು) 2024ರ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ 'ಮಧ್ಯಸ್ಥಿಕೆದಾರರ ಆಯ್ಕೆ ಮತ್ತು ಸವಾಲುಗಳು' ಕುರಿತ ಅಧಿವೇಶನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಪ್ತಾಹ ನಾಳೆ ಸಮಾರೋಪಗೊಳ್ಳಲಿದೆ.

ನ್ಯಾ. ರಾವ್‌ ಅವರ ಭಾಷಣದ ಪ್ರಮುಖ ಅಂಶಗಳು

  • ನ್ಯಾಯಾಧೀಶರು ನಿಷ್ಪಕ್ಷಪಾತಿಗಳು ಮತ್ತು ಸ್ವತಂತ್ರರಾಗಿರುತ್ತಾರೆ ಎಂಬ ನಿರೀಕ್ಷೆಯಿಂದಾಗಿ ಮಧ್ಯಸ್ಥಿಕೆ ಬಯಸುವ ಪಕ್ಷಕಾರರು ನ್ಯಾಯಾಧೀಶರೇ ತಮ್ಮ ವ್ಯಾಜ್ಯಗಳ ಮಧ್ಯಸ್ಥಿಕೆ ವಹಿಸಲು ಆದ್ಯತೆ ನೀಡುತ್ತಾರೆ.

  • ಆದರೆ ನಿವೃತ್ತ ನ್ಯಾಯಮೂರ್ತಿಗಳ ಬಿಡುವಿಲ್ಲದ ಕೆಲಸಗಳಿಂದಾಗಿ ಮಧ್ಯಸ್ಥಿಕೆಗಾಗಿ ದಕ್ಷ ನಿವೃತ್ತ ನ್ಯಾಯಮೂರ್ತಿಗಳನ್ನು ಪತ್ತೆ ಹಚ್ಚುವುದು ಸವಾಲಿನ ಸಂಗತಿಯಾಗಿದೆ.

  • ಹಾಗಾಗಿ ಮಧ್ಯಸ್ಥಿಕೆಗಾಗಿ ನಿವೃತ್ತ ನ್ಯಾಯಮೂರ್ತಿಗಳನ್ನೇ ನಿರೀಕ್ಷಿಸುವ ಬದಲು ಈ ಕ್ಷೇತ್ರದಲ್ಲಿ ಪರಿಣತರಾದವರನ್ನು ಹುಡುಕಬೇಕು.

  • ಮಧ್ಯಸ್ಥಿಕೆ ಎಂಬುದು ಹಳಬರೇ ಇರಬೇಕಾದ ಕ್ಷೇತ್ರವೇನೂ ಅಲ್ಲ. ಹಾಗಾಗಿ ಈ ಅಂಶದಲ್ಲಿ ವೈವಿಧ್ಯತೆ ತರುವುದು ಉತ್ತಮ.

  • ಮಧ್ಯಸ್ಥಿಕೆಯಲ್ಲಿ ಪರಿಣತಿ ಹೊಂದಿರುವ ಭಾರತದ ಯುವಕರನ್ನು ಹೆಚ್ಚಾಗಿ ಮಧ್ಯಸ್ಥಿಕೆದಾರರಾಗಿ ನೇಮಿಸಬೇಕು.

  • ನ್ಯಾಯಾಧೀಶರಷ್ಟೇ ಅಲ್ಲದೆ ವಕೀಲರೂ ಮಾಡುವಂತಹ ಮಧ್ಯಸ್ಥಿಕೆ ಕಾರ್ಯಗಳಿವೆ.

  • ಸುಪ್ರೀಂ ಕೋರ್ಟ್ ಹಾಗೂ ದೆಹಲಿ ಮತ್ತು ಬಾಂಬೆ ಹೈಕೋರ್ಟ್‌ಗಳಲ್ಲಿ ಕಾನೂನು ವೃತ್ತಿಪರರನ್ನು ಈಗ ಮಧ್ಯಸ್ಥಿಕೆದಾರರಾಗಿ ನೇಮಕ ಮಾಡುತ್ತಿದ್ದು ಇದು ಸಕಾರಾತ್ಮಕ ಬೆಳವಣಿಗೆ.

  • ನಾನೇ ಮಧ್ಯಸ್ಥಿಕೆ ವಹಿಸಿರುವ ಹಲವು ಪ್ರಕರಣಗಳಲ್ಲಿ ಇತ್ತೀಚೆಗೆ ಹಲವು ಉತ್ತಮ ಬದಲಾವಣೆಗಳನ್ನು ಕಂಡಿದ್ದೇನೆ. ನನ್ನ ಜೊತೆ ಮಧ್ಯಸ್ಥಿಕೆದಾರರಾಗಿ ಅಧಿಕಾರಿವರ್ಗ, ತಂತ್ರಜ್ಞವರ್ಗದಿಂದ ಬಂದವರು ಸಹ ಕೂರುತ್ತಿದ್ದಾರೆ. ಇವರು ಪಕ್ಷಕಾರರಿಂದ ನಿಯುಕ್ತಿಗೊಳಿಸಲ್ಪಟ್ಟವರಾಗಿದ್ದು, ನ್ಯಾಯಮೂರ್ತಿಗಳಷ್ಟೇ ಉತ್ತಮವಾಗಿದ್ದಾರೆ.

ಲಂಡನ್‌ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಮಹಾ ನಿರ್ದೇಶಕ ಡಾ. ಜಕೊಮಿಜ್ನ್ ವ್ಯಾನ್ ಹೇರ್ಸೋಲ್ಟ್-ವ್ಯಾನ್ ಹಾಫ್, ಥ್ರೀ ಕ್ರೌನ್ ಲ್ಯಾಬ್‌ ಸಂಸ್ಥೆಯ ಪಾಲುದಾರ ಮತ್ತು ಅದರ ಭಾರತ ಶಾಖೆಯ ಮುಖ್ಯಸ್ಥ ಮನೀಶ್ ಅಗರ್‌ವಾಲ್‌, ಸ್ಟೀವರ್ಟ್ಸ್ ಲಾ ಸಂಸ್ಥೆಯ ಪಾಲುದಾರರಾದ ಶೆರಿನಾ ಪೆಟಿಟ್ ಹಾಗೂ ಡಿಎಸ್‌ಕೆ ಕಾನೂನು ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಆನಂದ್ ದೇಸಾಯಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

DAW 2024 07th ಮಾರ್ಚ್ ಸೆಷನ್ III
DAW 2024 07th ಮಾರ್ಚ್ ಸೆಷನ್ III

Related Stories

No stories found.
Kannada Bar & Bench
kannada.barandbench.com