ವಿದ್ಯುನ್ಮಾನ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸ್ವನಿಯಂತ್ರಣ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಸಂಬಂಧ ಯಾವುದೇ ರೀತಿಯಲ್ಲಿಯೂ ನ್ಯಾಯಾಲಯ ಮಧ್ಯಪ್ರವೇಶಿಸುವ ಅವಶ್ಯಕತೆ ಇಲ್ಲ ಎಂದು ಬಾಂಬೆ ಹೈಕೋರ್ಟ್‌ಗೆ ರಾಷ್ಟ್ರೀಯ ಪ್ರಸಾರಕರ ಒಕ್ಕೂಟ (ಎನ್‌ಬಿಎ) ವಿವರಿಸಿದೆ.
ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತಾ ಮತ್ತು ಜಿ ಎಸ್ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವರದಿಗಾರಿಕೆಯ ಕುರಿತಾದ 'ಮಾಧ್ಯಮ ವಿಚಾರಣೆ'ಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಪೀಠ ಸೊಮವಾರ ನಡೆಸಿತು. ಈ ಸಂದರ್ಭದಲ್ಲಿ ಎನ್‌ಬಿಎ ಪ್ರತಿನಿಧಿಸುತ್ತಿರುವ ದಾತಾರ್ ಅವರು “ಸ್ವನಿಂಯತ್ರಣ ವ್ಯವಸ್ಥೆ ವಿಫಲವಾದಾಗ ಸಮಸ್ಯೆ ಬಗೆಹರಿಸಲು ನ್ಯಾಯಾಲಯ ಮಧ್ಯಪ್ರವೇಶಿಸಬಹುದು. ಬಹುಹಿಂದೆಯೇ ಸುಪ್ರೀಂ ಕೋರ್ಟ್ ಅನುಮೋದಿಸಿರುವ ಸ್ವನಿಯಂತ್ರಣ ವ್ಯವಸ್ಥೆ ಅಸ್ತಿತ್ವದಲ್ಲಿರುವಾಗ ಟಿವಿ ಚಾನೆಲ್‌ಗಳ ನಿಯಂತ್ರಣಕ್ಕೆ ನ್ಯಾಯಾಂಗದ ಮಧ್ಯಪ್ರವೇಶದ ಅವಶ್ಯಕತೆ ಇಲ್ಲ” ಎಂದರು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರಾದ ಅಸ್ಪಿ ಚಿನೋಯ್ ಮತ್ತು ದೇವದತ್ ಕಾಮತ್ ಅವರ ವಾದಕ್ಕೆ ಪ್ರತಿಯಾಗಿ ದಾತಾರ್ ಅವರು ವಿಸ್ತೃತವಾದ ಮೂರು ವಾದಗಳನ್ನು ಮಂಡಿಸಿದರು.
1. ಎನ್‌ಬಿಎ ಜಾರಿಗೊಳಿಸಿರುವ ಮಾರ್ಗಸೂಚಿಗಳು ಅಸ್ವಿತ್ವದಲ್ಲಿದ್ದು, ಅದನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಕೆ ಸಿಕ್ರಿ ಅವರು ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರದ (ಎನ್‌ಬಿಎಸ್‌ಎ) ಮುಖ್ಯಸ್ಥರಾಗಿದ್ದು, ಸಂವಿಧಾನದ 19(1)(a) ವಿಧಿಯ ಅನ್ವಯ ದೊರೆತಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಕುರಿತು ಹಲವು ದೂರುಗಳು ಎನ್‌ಬಿಎಸ್‌ಎಗೆ ಸಲ್ಲಿಕೆಯಾಗಿದ್ದು, ಕ್ರಮಕೈಗೊಂಡಿರುವ ಆದೇಶಗಳ ಕುರಿತು ಉಲ್ಲೇಖಿಸಲಾಗಿದೆ. ಪ್ರತಿ ದೂರಿಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿರುವುದೂ ಸೇರಿದಂತೆ ಹಲವು ಕ್ರಮಕೈಗೊಳ್ಳಲಾಗಿದೆ ಎಂದು ದಾತಾರ್ ವಿವರಿಸಿದ್ದಾರೆ.
“ಒಂದು ಚಾನೆಲ್ ಎನ್‌ಬಿಎಸ್‌ಎ ಆದೇಶ ಮತ್ತು ಎನ್‌ಬಿಎ ಮಾರ್ಗಸೂಚಿ ಅನುಸರಿಸಲು ನಿರಾಕರಿಸಿದ ಮಾತ್ರಕ್ಕೆ ಸಂಸ್ಥೆ ಪ್ರಭಾವಿಯಲ್ಲ ಎಂದುಕೊಳ್ಳಬಾರದು” ಎಂದು ದಾತಾರ್ ಹೇಳಿದ್ದಾರೆ.
2. ಎನ್‌ಬಿಎನ ಸ್ವನಿಯಂತ್ರಣ ಮಾದರಿಯನ್ನು ಹಿಂದೆಯೇ ಒಪ್ಪಿರುವ ಸುಪ್ರೀಂ ಕೋರ್ಟ್
ಮಾಧ್ಯಮಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿಯಲು ದೇಶದ ವಿವಿಧ ನ್ಯಾಯಾಲಯಗಳು ಹೇಗೆ ಸ್ವನಿಯಂತ್ರಣ ಅನುಮೋದಿಸಿವೆ ಎಂಬುದನ್ನು ದಾತಾರ್ ಉಲ್ಲೇಖಿಸಿದರು. “ಬಹುತೇಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸ್ವನಿಯಂತ್ರಣ ಎಂಬುದು ವಿಧಾನವಾಗಿದ್ದು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಮಸ್ಯೆಯಿಲ್ಲ” ಎಂದು ಹೇಳಿದ್ದಾರೆ.
3. ಸ್ವನಿಯಂತ್ರಣ ವಿಫಲವಾದಾಗ ಸಾಮಾನ್ಯ ನ್ಯಾಯಾಂಗ ನಿಂದನೆಯಡಿ ನ್ಯಾಯಾಲಯ ಮಧ್ಯಪ್ರವೇಶ
“ಸ್ವನಿಯಂತ್ರಣ ವಿಫಲವಾದಾಗ ಮಾತ್ರ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂಬುದು ನನ್ನ ಪ್ರತಿಪಾದನೆ” ಎಂದು ವಿವರಿಸಿದರು. ಪರಿಸ್ಥಿತಿಯನ್ನು ಆಧರಿಸಿ ನ್ಯಾಯಾಂಗದ ಆಡಳಿತವನ್ನು ವ್ಯಾಖ್ಯಾನಿಸಬೇಕು ಎಂದು ದಾತಾರ್ ವಾದಿಸಿದರು.
ಕ್ರಿಮಿನಲ್ ತನಿಖೆಯ ವರದಿಗಾರಿಕೆ ಸಂದರ್ಭದಲ್ಲಿ ಸಂಯಮವನ್ನು ಪೊಲೀಸ್ ಮತ್ತು ಮಾಧ್ಯಮ ಕಾಪಾಡದಿದ್ದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸಬಹುದು ಎಂಬ ಕೇರಳ ಹೈಕೋರ್ಟ್ ತೀರ್ಪನ್ನೂ ಅವರು ಉಲ್ಲೇಖಿಸಿದರು. ಭಾರತೀಯ ಪ್ರಸಾರ ನಿಯಂತ್ರಣ ಪ್ರಾಧಿಕಾರ ರಚನೆಯ ಕುರಿತು ಸಲ್ಲಿಕೆಯಾಗಿರುವ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ ಎಂದು ನ್ಯಾಯಪೀಠಕ್ಕೆ ದಾತಾರ್ ವಿವರಿಸಿದರು.
ದೂರುಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇರುವಾಗ ಅದನ್ನು ಏಕೆ ಎನ್‌ಬಿಎಸ್‌ಎಗೆ ಸರ್ಕಾರ ವರ್ಗಾಯಿಸುತ್ತದೆ ಎಂಬುದಕ್ಕೆ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ವಿವರಣೆ ನೀಡುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರಿಗೆ ನ್ಯಾಯಾಲಯ ಸೂಚಿಸಿತು. ನಿರ್ದಿಷ್ಟ ಚಾನೆಲ್ ವಿರುದ್ಧ ಕಠಿಣ ಕ್ರಮಕೈಗೊಂಡಿರುವ ಅಂಕಿ-ಸಂಖ್ಯೆ ಸಲ್ಲಿಸುವಂತೆಯೂ ಪೀಠ ಹೇಳಿದೆ. ಎಎಸ್‌ಜಿ ಪ್ರತಿಕ್ರಿಯಿಸಿದ ಬಳಿಕ ಬುಧವಾರ ವಿಚಾರಣೆ ಮುಂದುವರಿಯಲಿದೆ.