ಪ್ರಯಾಣದ ವಿವರ ಅಂತಿಮಗೊಂಡ ಬಳಿಕ ಲುಕ್ಔಟ್ ಸುತ್ತೋಲೆಗೆ ತಡೆ ಕೋರಿಕೆ: ಅರ್ಜಿದಾರರ ವಿರುದ್ಧ ಬಾಂಬೆ ಹೈಕೋರ್ಟ್ ಅಸಮಾಧಾನ

ನ್ಯಾಯಾಲಯವು ಅರ್ಜಿದಾರರ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದರೂ ಅವರಿಗೆ ₹ 50,000 ದಂಡ ವಿಧಿಸಿತು.
ಪ್ರಯಾಣದ ವಿವರ ಅಂತಿಮಗೊಂಡ ಬಳಿಕ ಲುಕ್ಔಟ್ ಸುತ್ತೋಲೆಗೆ ತಡೆ ಕೋರಿಕೆ: ಅರ್ಜಿದಾರರ ವಿರುದ್ಧ ಬಾಂಬೆ ಹೈಕೋರ್ಟ್ ಅಸಮಾಧಾನ
Published on

ಮೊದಲು ತಮ್ಮ ವಿದೇಶ ಪ್ರಯಾಣದ ವಿವರಗಳನ್ನು ಅಂತಿಮಗೊಳಿಸಿ ಆ ಬಳಿಕ ತಮ್ಮ ವಿರುದ್ಧ ಹೊರಡಿಸಲಾದ ಲುಕ್‌ಔಟ್‌ ಸುತ್ತೋಲೆಗಳಿಗೆ (ಎಲ್‌ಒಸಿ) ತಾತ್ಕಾಲಿಕ ತಡೆ ನೀಡುವಂತೆ ಕೋರಿ ಅರ್ಜಿದಾರರು ಕೊನೆಯ ಕ್ಷಣದಲ್ಲಿ ಸಲ್ಲಿಸುವ ಅರ್ಜಿಗಳ ಬಗ್ಗೆ ಬಾಂಬೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ್ದು ನ್ಯಾಯಾಲಯಗಳನ್ನು ಅರ್ಜಿದಾರರು ಲಘುವಾಗಿ ಪರಿಗಣಿಸಿದ್ದಾರೆ ಎಂದು ಕಿಡಿಕಾರಿದೆ.

ಅರ್ಜಿದಾರರು ನ್ಯಾಯಾಲಯಗಳನ್ನು ಸಂಪರ್ಕಿಸುವ ಮೊದಲೇ ತಮ್ಮ ಪ್ರವಾಸ ವಿವರಗಳನ್ನು ಅಂತಿಮಗೊಳಿಸುತ್ತಿರುವುದು ಸ್ವೀಕಾರಾರ್ಹವಲ್ಲ ಎಂದು ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠ ಹೇಳಿತು.

ತಮ್ಮ ಪ್ರವಾಸ ಮುಂದುವರೆಸಲು ಅನುಮತಿ ನೀಡುವುದಕ್ಕಾಗಿ ಆದ್ಯತೆಯ ಮೇರೆಗೆ ನ್ಯಾಯಾಲಯ ಪ್ರಕರಣ ಆಲಿಸುತ್ತದೆ ಎಂದು ಅರ್ಜಿದಾರರು ಸೂಚ್ಯವಾಗಿ ಭಾವಿಸಿದಂತಿದೆ ಎಂದು ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿತು.

ಎಲ್‌ಒಸಿಗಳಿಗೆ ಸಂಬಂಧಿಸಿದಂತೆ ತಡೆಯಾಜ್ಞೆ ಬಯಸುವ ಪಕ್ಷಕಾರರು ಸಾಕಷ್ಟು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಇಲ್ಲವಾದಲ್ಲಿ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಪೀಠ ಎಚ್ಚರಿಸಿದೆ.

ಸಿಬಿಐ ತನಿಖೆ ಎದುರಿಸುತ್ತಿರುವ ಪ್ರಕರಣದ ಸಾಕ್ಷಿ ಸಂಜಯ್ ಡಾಂಗಿ ಎಂಬುವರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಅಸಮಾಧಾನ ಹೊರಹಾಕಿತು. ಡಾಂಗಿ ಅವರು ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್‌ಗೆ ಪ್ರಯಾಣಿಸುವುದಕ್ಕಾಗಿ ಅನುಮತಿ ಕೋರಿದ್ದರು. ಕಾರ್ಯಕ್ರಮದ ಮುಖ್ಯ ವ್ಯಕ್ತಿ ತಾನು ಎಂದು ಅವರು ಹೇಳಿಕೊಂಡಿದ್ದರು.  ಅಲ್ಲದೆ ಮುಂದಿನ ವಿಚಾರಣೆಗಳಲ್ಲಿ ಸಿಬಿಐಗೆ ಸಹಕಾರ ಮುಂದುವರೆಸುವುದಾಗಿ ತಿಳಿಸಿದ್ದರು. ಜುಲೈ 7, 2023 ರವರೆಗೆ ಅಮೆರಿಕ ಮತ್ತಿತರ ನಗರಗಳಿಗೆ ಪ್ರಯಾಣಿಸಲು ಅವರು ಅನುಮತಿ ಬಯಸಿದ್ದರು.

ನ್ಯಾಯಾಲಯವು ಅವರಿಗೆ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದರೂ, ದಂಡ ವಿಧಿಸಿತು. ಜೂನ್ 26 ರೊಳಗೆ ಸೇಂಟ್ ಜೂಡ್ ಇಂಡಿಯಾ ಶಿಶುಪಾಲನಾ ಕೇಂದ್ರಕ್ಕೆ ₹ 50,000 ಮೊತ್ತ  ಪಾವತಿಸುವಂತೆ ಅದು ಡಾಂಗಿ ಅವರಿಗೆ ಸೂಚಿಸಿತು,

Kannada Bar & Bench
kannada.barandbench.com