ಕೋವಿಡ್ ಪರಿಸ್ಥಿತಿ ತುಂಬಾ ಭಯಾನಕ ಎಂದ ಕರ್ನಾಟಕ ಹೈಕೋರ್ಟ್: ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಬಗ್ಗೆ ಆತಂಕ
Hospital Beds

ಕೋವಿಡ್ ಪರಿಸ್ಥಿತಿ ತುಂಬಾ ಭಯಾನಕ ಎಂದ ಕರ್ನಾಟಕ ಹೈಕೋರ್ಟ್: ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಬಗ್ಗೆ ಆತಂಕ

ಹೆಚ್ಚುವರಿ ಹಾಸಿಗೆ ಸೌಲಭ್ಯ ಒದಗಿಸುವಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನ್ಯಾಯಾಲಯ ನಿರ್ದೇಶನ ನೀಡಿತು.

ಹೈ ಡಿಪೆಂಡೆನ್ಸಿ ಘಟಕ (ಎಚ್‌ಡಿಯು) ಮತ್ತು ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳ ಲಭ್ಯತೆ ಕ್ಷೀಣಿಸುತ್ತಿರುವುದು ಪರಿಸ್ಥಿತಿಯನ್ನು ಭಯಾನಕವಾಗಿಸಿದೆ ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಆತಂಕ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ “ಬೆಂಗಳೂರು ನಗರದಲ್ಲಿ ಕೇವಲ 32 ಎಚ್‌ಡಿಯು ಹಾಸಿಗೆಗಳು ಖಾಲಿ ಇವೆ, ಕೇವಲ 11 ವೆಂಟಿಲೇಟರ್‌ ಸೌಲಭ್ಯ ಇರುವ ತೀವ್ರ ನಿಗಾ ಘಟಕಗಳು ಲಭ್ಯವಿವೆ. ಯಾವುದೇ ಐಸಿಯು ಹಾಸಿಗೆಗಳು ಲಭ್ಯವಿಲ್ಲ." ಎಂದು ಹೇಳಿತು. ಪರಿಸ್ಥಿತಿ ಎದುರಿಸಲು ನ್ಯಾಯಾಲಯ ಕೆಲ ನಿರ್ದೇಶನಗಳನ್ನು ನೀಡಿದ್ದು ಅವು ಈ ರೀತಿ ಇವೆ:

  • ಹೆಚ್ಚುವರಿ ಹಾಸಿಗೆ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಅಗತ್ಯ ಕ್ರಮ ಕೈಗೊಳ್ಳಬೇಕು.

  • ಹತ್ತಿರದ ಜಿಲ್ಲೆಗಳಲ್ಲಿ ಹೈ ಡಿಪೆಂಡೆನ್ಸಿ ಘಟಕ ಮತ್ತು ವೆಂಟಿಲೇಟರ್‌ ಸೌಲಭ್ಯ ಇರುವ ತೀವ್ರ ನಿಗಾ ಘಟಕ ಮತ್ತು ತೀವ್ರ ನಿಗಾ ಘಟಕಗಳು ಲಭ್ಯತೆ ಎಷ್ಟಿದೆ ಎಂಬುದನ್ನು ಗುರುತಿಸಲು ಸರ್ಕಾರ, ಬಿಬಿಎಂಪಿ ಹಾಗೂ ಸಂಬಂಧಪಟ್ಟವರು ಮುಂದಾಗಬೇಕು.

  • ಕೋವಿಡ್‌ ಯಾವುದೇ ಕ್ಷಣದಲ್ಲಿ ಉಲ್ಬಣವಾಗಬಹುದು ಮತ್ತು ಮೇಲೆ ತಿಳಿಸಿದ ಮೂರೂ ವಿಭಾಗಗಳು ಲಭಿಸದು ಎಂಬ ನೆಲೆಯಲ್ಲೇ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.

  • ಮುಂದಿನ ವಿಚಾರಣೆಯ ವೇಳೆಗೆ ಇಂದಿನಿಂದ ಹಿಡಿದು ಅಂದಿನವರೆಗೆ ಒದಗಿಸಲಾದ ಹೆಚ್ಚುವರಿ ಹಾಸಿಗೆಗಳ ಮಾಹಿತಿಯನ್ನು ಸರ್ಕಾರ ಒದಗಿಸಬೇಕು.

  • ಬೆಂಗಳೂರು ನಗರದಲ್ಲಿ ಆಮ್ಲಜನಕದ ಪೂರೈಕೆ, ರೆಮ್‌ಡಿಸಿವಿರ್‌ ಲಭ್ಯತೆ ಕುರಿತು ಡೇಟಾಬೇಸ್‌ ರೂಪಿಸಲು ಸರ್ಕಾರ ಮುಂದಾಗಬೇಕು.

  • ಆಸ್ಪತ್ರೆ ಲಭ್ಯವಿಲ್ಲದ ವ್ಯಕ್ತಿಗಳಿಗೆ ಕೋವಿಡ್‌ ಆಸ್ಪತ್ರೆಗಳಾಚೆಗೆ ಸಹಾಯ ಕೇಂದ್ರ ಸ್ಥಾಪಿಸಬೇಕು. ಮತ್ತು ಸಹಾಯ ಕೇಂದ್ರದಲ್ಲಿ ಡೆಸ್ಕ್‌ನಲ್ಲಿ ರೆಮ್‌ಡಿಸಿವಿರ್ ಲಭ್ಯತೆಯ ಮಾಹಿತಿಯೂ ಇರಬೇಕು

  • ಮುಂದಿನ ವಿಚಾರಣೆ ಹೊತ್ತಿಗೆ ಆಮ್ಲಜನಕ ಅವಶ್ಯಕತೆ ಮತ್ತು ಪೂರೈಕೆ ಕುರಿತ ಅಗತ್ಯ ಮಾಹಿತಿ ಸರ್ಕಾರದ ಬಳಿ ಇರಬೇಕು.

  • ರೆಮ್‌ಡಿಸಿವಿರ್ ಖರೀದಿ ಮತ್ತು ಎಲ್ಲಾ ಆಸ್ಪತ್ರೆಗಳಿಗೆ ಅವುಗಳ ಸಮಾನ ವಿತರಣೆ ಕುರಿತು ಸರ್ಕಾರ ನಿರ್ಧರಿಸಲಿ.

ಕೋವಿಡ್‌ನಿಂದಾಗಿ ರಾಜ್ಯದಲ್ಲಿ ರೋಗಿಗಳು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಬಂದ ಎರಡು ಪತ್ರಗಳನ್ನು ಆಧರಿಸಿ ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಮುಂದಿನ ವಿಚಾರಣೆ ಏಪ್ರಿಲ್‌ 27ಕ್ಕೆ ನಿಗದಿಯಾಗಿದೆ.

Related Stories

No stories found.