ಉತ್ತರ ಪ್ರದೇಶದ ಐದು ನಗರಗಳಲ್ಲಿ ಲಾಕ್‌ಡೌನ್ ಸೇರಿದಂತೆ ವಿವಿಧ ನಿಷೇಧಾಜ್ಞೆ ಜಾರಿಗೊಳಿಸುವಂತೆ ಆದೇಶಿಸಿದ್ದ ಅಲಾಹಾಬಾದ್ ಹೈಕೋರ್ಟ್ ನಿರ್ದೇಶನಗಳನ್ನು ಜಾರಿಗೊಳಿಸಲು ಉತ್ತರ ಪ್ರದೇಶ ಸರ್ಕಾರ ನಿರಾಕರಿಸಿದೆ.
ಕೊರೊನಾ ವೈರಸ್ ವ್ಯಾಪಿಸುವುದನ್ನು ನಿಯಂತ್ರಿಸಲು ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಹಣಕಾಸು ಸಂಸ್ಥೆಗಳು, ಹಣಕಾಸು ಇಲಾಖೆ, ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳು, ಕೈಗಾರಿಕಾ ಮತ್ತು ವೈಜ್ಞಾನಿಕ ಸಂಸ್ಥೆಗಳು, ಅಗತ್ಯ ಸೇವೆಗಳಾದ ಮುನ್ಸಿಪಲ್ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳಿಗೆ ಏಪ್ರಿಲ್ 26ರವರೆಗೆ ನಿರ್ಬಂಧ ವಿಧಿಸಿ ಕೊರೊನಾ ವೈರಸ್ ವ್ಯಾಪಿಸುವುದನ್ನು ತಡೆಯಲು ಅಲಾಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿತ್ತು.
ಲಾಕ್‌ಡೌನ್ ಜಾರಿಗೂ ಮುನ್ನ ಬಡವರ ಪರಿಸ್ಥಿತಿಯನ್ನೂ ಪರಿಗಣಿಸಬೇಕಿದೆ, ಸಂಪೂರ್ಣವಾಗಿ ಲಾಕ್‌ಡೌನ್ ಮಾಡುವುದರಿಂದ ಬಡವರಿಗೆ ಸಮಸ್ಯೆಯಾಗುತ್ತದೆ ಎಂದು ಸರ್ಕಾರ ಹೇಳಿದೆ. ಹೀಗಾಗಿ, ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗದು ಎಂದು ಸರ್ಕಾರ ತಿಳಿಸಿದೆ.
ತುರ್ತು ಕ್ರಮಕೈಗೊಳ್ಳದಿದ್ದರೆ ವೈದ್ಯಕೀಯ ಪರಿಸ್ಥಿತಿ ರಾಜ್ಯದಲ್ಲಿ ಕುಸಿಯಲಿದೆ ಎಂದು ನ್ಯಾಯಮೂರ್ತಿಗಳಾದ ಅಜಿತ್ ಕುಮಾರ್ ಮತ್ತು ಸಿದ್ಧಾರ್ಥ್ ವರ್ಮಾ ಅವರ ನೇತೃತ್ವದ ವಿಭಾಗೀಯ ಪೀಠವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಪ್ರಯಾಗ್‌ರಾಜ್, ಲಖನೌ, ವಾರಾಣಸಿ, ಖಾನಪುರ್ ನಗರ್ ಮತ್ತು ಗೋರಖ್‌ಪುರದಲ್ಲಿ ಹಲವು ಕ್ರಮಗಳಿಗೆ ನ್ಯಾಯಾಲಯ ಸೂಚಿಸಿತ್ತು.