ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸುವ (ಬೆಡ್ ಬ್ಲಾಕಿಂಗ್) ಗಂಭೀರ ಹಗರಣದ ಬಗ್ಗೆ ಪ್ರಸ್ತಾಪಿಸಿದ್ದು, ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿರುವುದರಿಂದ ಅನುಭವಿ ಹಿರಿಯ ಐಪಿಎಸ್ ಅಧಿಕಾರಿಯ ನಿರಂತರ ಮೇಲ್ವಿಚಾರಣೆ ತನಿಖೆಯ ಮೇಲಿರಬೇಕು ಎಂದು ಬುಧವಾರ ಕರ್ನಾಟಕ ಹೈಕೋರ್ಟ್ ಹೇಳಿದೆ.
“ಆರೋಪದ ಸೂಕ್ಷ್ಮತೆಯನ್ನು ಗಮನಿಸುವುದಾದರೆ ನಿರಂತರವಾಗಿ ಅನುಭವಿ ಐಪಿಎಸ್ ಅಧಿಕಾರಿಯೊಬ್ಬರು ತನಿಖೆಯ ಮೇಲ್ವಿಚಾರಣೆ ನಡೆಸುವುದು ಅಗತ್ಯ” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠದ ಆದೇಶದಲ್ಲಿ ತಿಳಿಸಲಾಗಿದೆ.
ಸೈಬರ್ ಅಪರಾಧ ತನಿಖಾ ತಂಡದಲ್ಲಿ ಕೆಲಸ ಮಾಡಿದ ಅಧಿಕಾರಿಗಳನ್ನು ತನಿಖೆಗೆ ನಿಯೋಜಿಸುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಬೇಕು. ಈ ನಿರ್ಧಾರವನ್ನು ತಕ್ಷಣ ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಹಗರಣದ ಮೇಲೆ ಹಿರಿಯ ಐಪಿಎಸ್ ಅಧಿಕಾರಿ ನಿಗಾ ಇಡಲಿದ್ದಾರೆ ಎಂದು ರಾಜ್ಯ ಸರ್ಕಾರವು ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠಕ್ಕೆ ತಿಳಿಸಿತು. ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ತನಿಖೆಗೆ ಸಂಬಂಧಿಸಿದ ವರದಿ ಸಲ್ಲಿಸಬೇಕು. ತನಿಖೆಗೆ ಸಂಬಂಧಿಸಿದ ವಿಚಾರಗಳು ವರದಿಯಲ್ಲಿ ಇರಬೇಕು ಎಂದು ನ್ಯಾಯಾಲಯ ಆದೇಶಿಸಿತು.
ರಾಜ್ಯದಲ್ಲಿ ಲಭ್ಯವಿರುವ ಹಾಸಿಗೆ ಮತ್ತು ರೆಮಿಡಿಸಿವಿರ್ ಔಷಧದ ಬಗ್ಗೆಯೂ ನ್ಯಾಯಾಲಯ ಮಾಹಿತಿ ಪಡೆಯಿತು. 45,754 ಹಾಸಿಗೆಗಳು; 5,305 ಐಸಿಯು ಹಾಸಿಗೆಗಳು; 4,109 ವೆಂಟಿಲೇಟರ್‌ಗಳನ್ನು ಒಳಗೊಂಡ ಐಸಿಯು ಹಾಸಿಗೆಗಳು ಲಭ್ಯ ಇವೆ ಎಂಬ ಅಂಶವನ್ನು ಪೀಠಕ್ಕೆ ತಿಳಿಸಲಾಯಿತು. ಆದರೆ, ಇದು ಕೇಂದ್ರವು ಸೂಚಿಸಿರುವ 66,333 ಸಾಮಾನ್ಯ ಹಾಸಿಗೆಗಳಿಗಿಂತ ಕಡಿಮೆ ಇದೆ ಎನ್ನುವುದನ್ನು ಪೀಠವು ಗಮನಿಸಿತು. ಹಾಗಾಗಿ, “ರಾಜ್ಯಮಟ್ಟದಲ್ಲಿ ಅಪಾರ ಪ್ರಮಾಣದ ಕೊರತೆ ಇದೆ ಎಂದು ಹೇಳಬಹುದು” ಎಂದಿತು.
ಇಪ್ಪತ್ತನಾಲ್ಕು ಗಂಟೆಯೊಳಗೆ ವಾಯುಪಡೆ ನೀಡಲು ಮುಂದಾಗಿರುವ ಹಾಸಿಗೆಗಳು ಮತ್ತು ದಾದಿಯರ ಸೇವಾ ವ್ಯವಸ್ಥೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತರು ಪಡೆದುಕೊಳ್ಳಬೇಕು. ತಕ್ಷಣ ಅದು ಸದ್ಬಳಕೆಯಾಗುವಂತೆ ಮಾಡಬೇಕು.
ರೈಲ್ವೆ ಇಲಾಖೆ ನೀಡಲು ಮುಂದಾಗಿರುವ ಹಾಸಿಗೆ ವ್ಯವಸ್ಥೆಯನ್ನು ಇದುವರೆವಿಗೂ ಏಕೆ ಪಡೆಯಲು ಮುಂದಾಗಿಲ್ಲ ಎಂಬುದಕ್ಕೆ ಲಿಖಿತ ಉತ್ತರ ನೀಡಬೇಕು.
ಜಿಲ್ಲಾ ಮಟ್ಟದಲ್ಲಿನ ಹಾಸಿಗೆಗಳು ಮತ್ತು ಅಗತ್ಯ ಇರುವ ಹಾಸಿಗೆ ಪಟ್ಟಿಯನ್ನು ರಾಜ್ಯ ಸರ್ಕಾರ ತೋರಿಸಬೇಕು.
ಸಂಭಾವ್ಯ ಮೂರನೇ ಅಲೆಗೆ ಅಗತ್ಯ ಸಿದ್ಧತೆ ನಡೆಸಲು ಇದು ಸಕಾಲವಾಗಿದೆ. ಮುಂದಿನ ಮಂಗಳವಾರದ ಒಳಗೆ ಸಿದ್ಧತೆ ಕಾರ್ಯತಂತ್ರ ಮತ್ತು ಸಂಭಾವ್ಯ ಮೂರನೇ ಅಲೆ ಎದುರಿಸಲು ಅಂದಾಜು ಹಾಸಿಗೆಗಳು, ಆಮ್ಲಜನಕ ಇತ್ಯಾದಿಗಳ ಕುರಿತಾದ ದೂರದರ್ಶಿತ್ವದ ಸಿದ್ಧತಾ ಯೋಜನೆಯನ್ನು ಸಲ್ಲಿಸಬೇಕು.
ಹಾಸಿಗೆ ಕೊರತೆಯ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಅಗತ್ಯ ನೆರವು, ಅರೆ ಸರ್ಕಾರಿ ಸಂಸ್ಥೆಗಳು ಕೋವಿಡ್ ರೋಗಿಗಳಿಗೆ ಅಗತ್ಯವಾದ ಹಾಸಿಗೆ ವ್ಯವಸ್ಥೆ ಮಾಡಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು.
ಮೇ 10ರಿಂದ ರಾಜ್ಯ ಸರ್ಕಾರಕ್ಕೆ ಪ್ರತಿದಿನ 40,000 ಸಾವಿರ ವಯಲ್ ರೆಮ್‌ಡಿಸಿವಿರ್ ದೊರೆಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈಗ ಆ ಕೋಟಾವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಈ ಔಷಧ ಬಳಕೆ ಮತ್ತು ರಾಜ್ಯದಲ್ಲಿನ ಆಮ್ಲಜನಕ ಬಳಕೆ ಪರಿಶೋಧನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ನಡೆಸಬೇಕು.
ಕೆಲವು ಆಸ್ಪತ್ರೆಗಳು ಅನಗತ್ಯವಾಗಿ ಬಳಸುತ್ತಿದ್ದರೆ ಈ ಸಂದರ್ಭದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ನ್ಯಾಯಾಲಯ ಹೇಳಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.