ಸಾಕ್ಷ್ಯ ಕೊರತೆ ಹಿನ್ನೆಲೆಯಲ್ಲಿ 12 ಮಂದಿ ವಿದೇಶಿ ತಬ್ಲೀಘಿ ಜಮಾತ್ ಸದಸ್ಯರನ್ನು ದೋಷಮುಕ್ತಗೊಳಿಸಿದ ಮುಂಬೈ ನ್ಯಾಯಾಲಯ

ಮುಂಬೈನ ಬಾಂದ್ರಾದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ತಬ್ಲಿಘಿ ಜಮಾತ್‌ನಲ್ಲಿ ಭಾಗವಹಿಸಿದ್ದ 12 ಮಂದಿ ವಿದೇಶಿಯರನ್ನು ದೋಷಮುಕ್ತಗೊಳಿಸಿದ್ದು, ಅವರಿಂದ ವಶಪಡಿಸಲಾದ ಪಾಸ್‌ಪೋರ್ಟ್‌ ಗಳನ್ನು ಮರಳಿಸುವಂತೆ ಪೊಲೀಸರಿಗೆ ಸೂಚಿಸಿದೆ.
Tablighi Jamaat
Tablighi Jamaat

ಸರ್ಕಾರದ ಆದೇಶ ಉಲ್ಲಂಘಿಸಿ ಕೋವಿಡ್ ವ್ಯಾಪಿಸಲು ಕಾರಣವಾದ ಆರೋಪದಲ್ಲಿ ತಬ್ಲೀಘಿ ಜಮಾತ್ ಸದಸ್ಯರಾದ ಇಂಡೋನೇಷ್ಯಾದ 12 ಪ್ರತಿನಿಧಿಗಳ ಮೇಲೆ ದಾಖಲಿಸಲಾಗಿದ್ದ ದೂರುಗಳನ್ನು ವಜಾಗೊಳಿಸಿರುವ ಬಾಂದ್ರಾದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ಅವರನ್ನು ದೋಷಮುಕ್ತಗೊಳಿಸಿದೆ.

ಮುಂಬೈ ಪೊಲೀಸರು ಆರೋಪಿಗಳ ವಿರುದ್ಧ ದಾಖಲಿಸಿರುವ ದೂರುಗಳನ್ನು ಸಾಬೀತುಪಡಿಸಲು ಅದಕ್ಕೆ ಪೂರಕವಾಗಿ ಸಲ್ಲಿಸಿರುವ ಸಾಕ್ಷ್ಯಗಳು ಸಮರ್ಥವಾಗಿಲ್ಲ ಎಂದು ನ್ಯಾಯಮೂರ್ತಿ ಜೇದಿಯೋ ವೈ ಘುಲೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಬ್ಲೀಘಿ ಜಮಾತ್ ಸದಸ್ಯರ ವಿರುದ್ಧ ದಾಖಲಿಸಲಾಗಿರುವ ದೂರುಗಳನ್ನು ವಜಾಗೊಳಿಸಲಾಗಿದ್ದು, ಅವರ ಪಾಸ್‌ಪೋರ್ಟ್ ಮರಳಿಸುವುದರ ಜೊತೆಗೆ ಅವರ ವಿರುದ್ಧದ ಜಾಮೀನು ಬಾಂಡ್ ಅನ್ನು ರದ್ದುಗೊಳಿಸಿರುವುದಾಗಿ ನ್ಯಾಯಪೀಠ ಹೇಳಿದೆ.

ಕೋನನ್ ಕೋಡಿಯೊ ಗ್ಯಾನ್ ಸ್ಟೋನ್ ಇತರರು ವರ್ಸಸ್ ಮಹಾರಾಷ್ಟ್ರ ಸರ್ಕಾರದ ಪ್ರಕರಣದಲ್ಲಿ 35 ತಬ್ಲೀಘಿ ಜಮಾತ್ ಸದಸ್ಯರ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್ ವಜಾಗೊಳಿಸಿದ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠದ ಆದೇಶವನ್ನು ತನ್ನ ತೀರ್ಪಿನಲ್ಲಿ ನ್ಯಾಯಪೀಠವು ಉಲ್ಲೇಖಿಸಿದೆ.

ಔರಂಗಾಬಾದ್ ಪೀಠದ ಆದೇಶ ಹಾಗೂ ತಮಗೆ ಸಲ್ಲಿಸಲಾಗಿರುವ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶವನ್ನು ಉಲ್ಲಂಘಿಸುವ ಮೂಲಕ ಕೋವಿಡ್ ವ್ಯಾಪಿಸಲು ಕಾರಣವಾಗಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೇಳಿದೆ.

ತನಿಖಾಧಿಕಾರಿಯು ಮರಾಠಿಯಲ್ಲಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ, “ಆರೋಪಿಗಳು ಕೋವಿಡ್ ವ್ಯಾಪಿಸಲು ಕಾರಣವಾಗಿದ್ದಾರೆ ಮತ್ತು ಸೋಂಕಿನಿಂದ ಯಾವುದೇ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ” ಎಂದಿರುವುದನ್ನು ಸಹ ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

ಆರೋಪಿಗಳ ವಿರುದ್ಧ ಆರೋಪಿಸಿರುವಂತೆ ಅವರು ಯಾವುದೇ ರೀತಿಯಲ್ಲೂ ವೀಸಾ ನಿಯಮಗಳನ್ನು ಉಲ್ಲಂಘಿಸಿಲ್ಲ. ಆರೋಪಿಗಳನ್ನು ಬಂಧಿಸಿದಾಗ ಅವರ ಬಳಿ ಸೂಕ್ತ ವೀಸಾ ದಾಖಲೆಗಳಿದ್ದವು ಎಂದು ಪೀಠ ಹೇಳಿದೆ.

Also Read
'ವಾಕ್ ಸ್ವಾತಂತ್ರ್ಯ ಎಂಬುದು ಇತ್ತೀಚಿನ ದಿನಗಳಲ್ಲಿ ಅತಿ ದುರ್ಬಳಕೆಯಾಗಿರುವ ಸ್ವಾತಂತ್ರ್ಯಗಳಲ್ಲೊಂದು' ಸಿಜೆಐ ಬೊಬ್ಡೆ

ಸರ್ಕಾರಿ ಅಧಿಕಾರಿಯ ಆದೇಶವನ್ನು ಉಲ್ಲಂಘಿಸಿ, ಕೋವಿಡ್ ಹರಡಲು ಕಾರಣವಾಗಿದ್ದಾರೆ. ನಕಲಿ ಪಾಸ್‌ಪೋರ್ಟ್ ಮತ್ತು ವೀಸಾಗಳನ್ನು ಆಧರಿಸಿ ಆರೋಪಿಗಳು ಭಾರತಕ್ಕೆ ಬಂದಿದ್ದಾರೆ ಎಂದು ಅವರ ವಿರುದ್ಧ ಆರೋಪಿಸಲಾಗಿತ್ತು. ಭಾರತ ದಂಡ ಸಂಹಿತೆಯ ಸೆಕ್ಷನ್ 304 (2) (ಗಂಭೀರವಾಗಿ ಊನಗೊಳಿಸುವುದು ಆದರೆ ಕೊಲೆಯಲ್ಲ) ಮತ್ತು 307 (ಕೊಲೆ ಯತ್ನ) ಅಡಿ ಆರೋಪಿಗಳ ವಿರುದ್ಧ ದಾಖಲಾಗಿಸಿದ್ದ ದೂರುಗಳನ್ನು ಸಾಕ್ಷ್ಯ ಕೊರತೆಯಿಂದ ಪೊಲೀಸರು ಕೈಬಿಟ್ಟಿದ್ದರು. ವಕೀಲ ಇಷ್ರಾತ್ ಖಾನ್ ಅವರು ಆರೋಪಿಗಳ ಪರ, ಹೆಚ್ಚುವರಿ ಸರ್ಕಾರಿ ಅಭಿಯೋಜಕರು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com