ಆಶ್ರಯ ಕಳೆದುಕೊಂಡ ವಲಸೆ ಕಾರ್ಮಿಕರಿಗಾಗಿ ಸಮಗ್ರ ಪುನರ್ವಸತಿ ಯೋಜನೆ ರೂಪಿಸದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಯೋಜನೆಯ ವೈಫಲ್ಯಕ್ಕೆ ಕೊರೊನಾ ಕಾರಣ ಎಂಬ ನೆಪ ಹೇಳುವಂತಿಲ್ಲ ಎಂದು ಕೂಡ ಅದು ಎಚ್ಚರಿಕೆ ನೀಡಿದೆ.
ಅಕ್ರಮ ಬಾಂಗ್ಲಾ ವಲಸಿಗರು ಎಂಬ ನೆಪವೊಡ್ಡಿ ಬೆಂಗಳೂರಿನ ಮಾರತ್ತಹಳ್ಳಿ ಬಳಿ ಸಾವಿರಾರು ವಲಸೆ ಕಾರ್ಮಿಕರನ್ನು ಇತ್ತೀಚೆಗೆ ಕೆಲಸದಿಂದ ಕಿತ್ತುಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಪುನರ್ವಸತಿ ಯೋಜನೆ ರೂಪಿಸಲು ಸಾಧ್ಯವಾಗಿಲ್ಲ. ಯೋಜನೆ ಜಾರಿಗೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ರಾಜ್ಯ ಸರ್ಕಾರ ನ್ಯಾಯಾಲಯವನ್ನು ಕೋರಿತು. ಇದಕ್ಕೆ ಸಮ್ಮತಿ ಸೂಚಿಸದ ಕೋರ್ಟ್ ‘ಎಲ್ಲದಕ್ಕೂ ಕೊರೊನಾ ನೆಪ ಒಡ್ಡುವುದನ್ನು ಒಪ್ಪಲಾಗದು’ ಎಂದಿತು.
ಸಾಮಾನ್ಯ ದಿನಗಳಲ್ಲಾಗಿದ್ದರೆ ಇದು ಖಂಡಿತಾ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಮಾಡಬಹುದಾದ ಪ್ರಕರಣವಾಗಿತ್ತು ಎಂದು ಕೋರ್ಟ್ ಸ್ಪಷ್ಟಪಡಿಸಿತು. ಇಷ್ಟಾದರೂ ಯೋಜನೆ ಜಾರಿಗೆ ತರಲು ಸರ್ಕಾರಕ್ಕೆ ಅಂತಿಮ ಅವಕಾಶ ನೀಡಲು ಕೋರ್ಟ್ ನಿರ್ಧರಿಸಿ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿತು.
ಮುಂದಿನ ವಿಚಾರಣೆಯ ಒಳಗಾಗಿ ರಾಜ್ಯ ಸರ್ಕಾರ ಪುನರ್ವಸತಿ ಯೋಜನೆ ರೂಪಿಸದಿದ್ದರೆ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
351 ಮಂದಿ ಪುನರ್ವಸತಿ ಮತ್ತು ಪರಿಹಾರ ಕೋರಿ ಅರ್ಜಿ ಸಲ್ಲಿಸಿರುವುದನ್ನು ಗಮನಿಸಿದ ಕೋರ್ಟ್, "ಜನರನ್ನು ತಮ್ಮ ಮನೆಗಳಿಂದ ಹೊರಹಾಕಲಾಗಿದೆ.... ಬಿಬಿಎಂಪಿ ಈ ಕೆಲಸ ಮಾಡಿಲ್ಲ ಎನ್ನುತ್ತಿದೆ. ರಾಜ್ಯ ಸರ್ಕಾರ ಕೂಡ ತಾನು ಇದನ್ನು ಮಾಡಿಲ್ಲ ಎನ್ನುತ್ತಿದೆ. ಹಾಗಿದ್ದರೆ ಇದು ಸಮಾಜ ವಿರೋಧಿಗಳ ದುಷ್ಕೃತ್ಯ ಇರಬೇಕು” ಎಂದು ಅಭಿಪ್ರಾಯಪಟ್ಟಿತು.
ಈ ವರ್ಷದ ಆರಂಭದಲ್ಲಿ ಬೆಂಗಳೂರಿನಲ್ಲಿರುವ ತಮ್ಮ ಮನೆಗಳಿಂದ ಬಲವಂತವಾಗಿ ಹೊರಹಾಕಲ್ಪಟ್ಟ "ಬಾಂಗ್ಲಾದೇಶಿ" ವಲಸೆ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲು ಸಮಗ್ರ ಯೋಜನೆ ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಜನವರಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಪೊಲೀಸರು ನಡೆಸಿದ ಕಟ್ಟಡ ತೆರವು ಕಾರ್ಯಾಚರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಬೆಂಗಳೂರಿನ ಬೆಳ್ಳಂದೂರು ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ "ಅಕ್ರಮ ಬಾಂಗ್ಲಾದೇಶಿ ವಲಸಿಗರು ಬಗ್ಗೆ ಮಾಹಿತಿ ಪಡೆದ ಬಿಬಿಎಂಪಿ ಅವರ ಕಟ್ಟಡಗಳನ್ನು ನೆಲಸಮಗೊಳಿಸಲು ಮುಂದಾಗಿತ್ತು ಎಂದು ವರದಿಯಾಗಿತ್ತು.
ವಾಸ್ತವವಾಗಿ ಇವರು ಭಾರತದ ವಿವಿಧ ಭಾಗಗಳಿಂದ ಬಂದ ವಲಸೆ ಕಾರ್ಮಿಕರು ಎಂದು ನಂತರ ಪತ್ತೆಯಾಗಿತ್ತು.