ಎಲ್ಲಾ ವಯಸ್ಕ ನಾಗರಿಕರಿಗೆ ಕೊವೊವ್ಯಾಕ್ಸ್ ಕೋವಿಡ್ ಲಸಿಕೆ ನೀಡಲು ಅನುಮತಿಸುವಂತೆ ಕೋರಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಈಚೆಗೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಹಿರಿಯ ನಾಗರಿಕ ಅರುಣ್ ಕುಮಾರ್ ಅಗರ್ವಾಲ್ ಅವರು ಮನವಿ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ತುರ್ತು ನೋಟಿಸ್ ಜಾರಿ ಮಾಡಿದೆ.
ಶೇ 90ರಷ್ಟು ಪರಿಣಾಮಕಾರಿ ಎಂದು ಪರಿಗಣಿಸಲ್ಪಟ್ಟಿರುವ ಈ ಲಸಿಕೆಗೆ ಅನುಮತಿಸುವಂತೆ ಕೇಂದ್ರೀಯ ಔಷಧ ಪ್ರಮಾಣ ನಿಯಂತ್ರಣ ಸಂಸ್ಥೆಗೆ (ಸಿಡಿಎಸ್‌ಸಿಒ) ಕೋರಲಾಗಿದೆ. ಲಸಿಕೆ ಪಡೆಯುವುದು ಅರ್ಜಿದಾರರ ಮೂಲಭೂತ ಹಕ್ಕಾಗಿದೆ. ಇದನ್ನು ನಿರಾಕರಿಸುವುದರಿಂದ ಅವರ ಹಕ್ಕು ಮೊಟಕುಗೊಳ್ಳುತ್ತದೆ ಎಂದು ವಾದಿಸಲಾಗಿದೆ.
12-17 ವಯೋಮಾನದ ಮಕ್ಕಳಿಗೆ ಕೊವೊವ್ಯಾಕ್ಸ್ ಲಸಿಕೆ ನೀಡಲು ಮೇ ಮೊದಲ ವಾರದಲ್ಲಿ ಅನುಮತಿಸಲಾಗಿತ್ತು. ಅಲ್ಲದೇ, ಇದನ್ನು ಅಪಾರ ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತು ಮಾಡಲಾಗಿದೆ. ಅದಾಗ್ಯೂ, ಭಾರತದ ವಯಸ್ಕರಿಗೆ ನೀಡಲು ಅನುಮತಿಸಲಾಗಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಮಕ್ಕಳಿಗೆ ಈ ಲಸಿಕೆ ನೀಡಲು ಅನುಮತಿಸಿ, ವಯಸ್ಕರಿಗೆ ನೀಡಲು ವರ್ಗೀಕರಿಸುವುದು ಸ್ವೇಚ್ಛೆಯ ತೀರ್ಮಾನವಾಗಿದೆ. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ಗಿಂತ ಕೊವೊವ್ಯಾಕ್ಸ್ ಲಸಿಕೆ ಪರಿಣಾಮಕಾರಿಯಾಗಿರುವುದರಿಂದ ಅದಕ್ಕೆ ಒಪ್ಪಿಗೆ ನೀಡುವುದನ್ನು ಕಾಯುತ್ತಿರುವುದಾಗಿ ಅರ್ಜಿದಾರರು ತಿಳಿಸಿದ್ದಾರೆ.
“ಎರಡೂ ಡೋಸ್ ಪಡೆದಿದ್ದ ಹಲವು ವಯಸ್ಕರು ಕೋವಿಡ್‌ನಿಂದ ಮರಣ ಹೊಂದಿದ್ದಾರೆ. ಕೋವೊವ್ಯಾಕ್ಸ್ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಅದಕ್ಕೆ ಒಪ್ಪಿಗೆ ನೀಡುವುದಕ್ಕಾಗಿ ಕಾಯುತ್ತಿದ್ದು, ಇದು ಕೋವಿಡ್‌ನಿಂದ ರಕ್ಷಣೆ ನೀಡಲು ಸಮರ್ಥವಾಗಿದೆ” ಎಂದು ಮನವಿಯಲ್ಲಿ ಹೇಳಲಾಗಿದೆ. ಅರ್ಜಿದಾರರನ್ನು ಹಿರಿಯ ವಕೀಲ ಉದಯ್ ಹೊಳ್ಳ ಪ್ರತಿನಿಧಿಸಿದ್ದರು.