ವಿವಿಧ ಇಲಾಖೆ, ಸಂಸ್ಥೆಗಳಿಗೆ ಇಮೇಲ್‌ ಮೂಲಕ ನೋಟಿಸ್‌ ಜಾರಿಗೆ ಮುಂದಾದ ಕರ್ನಾಟಕ ಹೈಕೋರ್ಟ್‌

ರಾಜ್ಯದ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳು, ಶಾಸನಬದ್ಧ ಸಂಸ್ಥೆಗಳ ಇಮೇಲ್‌ ಐಡಿಯನ್ನು ರಿಜಿಸ್ಟ್ರಾರ್‌ಗೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
Karnataka HC, COVID-19
Karnataka HC, COVID-19
Published on

ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ರಿಟ್‌ ಮನವಿಗಳು, ರಿಟ್‌ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ, ನಿಗಮ, ಮಂಡಳಿಗಳು, ಕಾರ್ಪೊರೇಶನ್‌ಗಳು ಹಾಗೂ ಇತರೆ ಶಾಸನಬದ್ಧ ಸಂಸ್ಥೆಗಳಿಗೆ ಇಮೇಲ್‌ ಮೂಲಕ ನೋಟಿಸ್‌ ಜಾರಿಗೊಳಿಸುವ ಪ್ರಸ್ತಾವವನ್ನು ಕರ್ನಾಟಕ ಹೈಕೋರ್ಟ್‌ ಮುಂದಿಟ್ಟಿದೆ.

ಕಳೆದ ವರ್ಷದ ಲಾಕ್‌ಡೌನ್‌ ಬಳಿಕ ವಿಚಾರಣಾಧೀನ ನ್ಯಾಯಾಲಯಗಳಲ್ಲಿ ತಲೆದೋರಬಹುದಾದ ಕಾನೂನಾತ್ಮಕ ಮತ್ತು ತಾಂತ್ರಿಕ ವಿಚಾರಗಳ ಮೇಲೆ ನಿಗಾ ಇಡುವುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು. ರಾಜ್ಯದ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳು, ಶಾಸನಬದ್ಧ ಸಂಸ್ಥೆಗಳ ಇಮೇಲ್‌ ಐಡಿಯನ್ನು ರಿಜಿಸ್ಟ್ರಾರ್‌ಗೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.

“ಹೈಕೋರ್ಟ್‌ನಲ್ಲಿ ಸಲ್ಲಿಸಲಾಗುವ ರಿಟ್‌ ಅರ್ಜಿಗಳು, ರಿಟ್‌ ಮೇಲ್ಮನವಿಗಳು ಹಾಗೂ ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಶಾಸನಬದ್ಧ ಸಂಸ್ಥೆಗಳಾದ ಬಿಬಿಎಂಪಿ, ಬಿಡಿಎ ಮತ್ತು ಇತರೆ ಶಾಸನಬದ್ಧ ಸಂಸ್ಥೆಗಳಿಗೆ ಇಮೇಲ್‌ ಮೂಲಕ ಕಳುಹಿಸಲಾಗುವ ನೋಟಿಸ್‌ ಅನ್ನು ಒಪ್ಪಿಕೊಳ್ಳುವಂತೆ ನಿರ್ದೇಶನ ನೀಡಬಹುದಾಗಿದೆ. ಮೇ 27ರ ಒಳಗೆ ಅಂಥ ಸಂಸ್ಥೆಗಳು, ವಿಳಾಸ ಮತ್ತು ಇಮೇಲ್‌ ಐಡಿಗಳನ್ನು ನ್ಯಾಯಾಲಯದ ಅಧಿಕಾರಿಗೆ ಸಲ್ಲಿಸುವುದಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಒಪ್ಪಿಕೊಂಡಿದ್ದಾರೆ. ನ್ಯಾಯಿಕ ರಿಜಿಸ್ಟ್ರಾರ್ ಅವರು ಸಂಬಂಧಪಟ್ಟ ಸಂಸ್ಥೆಗಳ ಇಮೇಲ್‌ ಐಡಿಗೆ ನೋಟಿಸ್‌ ಕಳುಹಿಸುವ ಮೂಲಕ ಜೂನ್‌ 2ರಂದು ಹಾಜರಿರುವಂತೆ ಸೂಚಿಸಲಿದ್ದಾರೆ” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

Also Read
ಆಮ್ಲಜನಕ ಹೆಚ್ಚಳ ಕುರಿತಂತೆ ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕೇಂದ್ರದ ವಾದವೇನು?

ಇದೇ ವೇಳೆ, “ಹಲವು ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಕಾಲಮಿತಿಯಲ್ಲಿ ಅವುಗಳನ್ನು ವಿಲೇವಾರಿ ಮಾಡುವಂತೆ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಿಗೆ ಹೈಕೋರ್ಟ್‌ ನಿರ್ದೇಶಿಸಿದೆ. ಹೈಕೋರ್ಟ್‌ ಹೊರಡಿಸಿರುವ ಮಾರ್ಗಸೂಚಿಗಳನ್ನು ಪರಿಗಣಿಸಿ ಹೇಳುವುದಾದರೆ ನ್ಯಾಯಾಲಯ ವಿಧಿಸಿರುವ ಕಾಲಮಿತಿಯಲ್ಲಿ ಕೆಲಸ ಮಾಡುವುದು ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಿಗೆ ಕಷ್ಟವಾಗಿದೆ. ಹೀಗಾಗಿ, ಹೈಕೋರ್ಟ್‌ ವಿಧಿಸಿದ್ದ ಗಡುವು ಜೂನ್‌ 30ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಪ್ರಕರಣಗಳ ವಿಲೇವಾರಿಗೆ ನೀಡಲಾಗಿದ್ದ ಕಾಲಾವಕಾಶವನ್ನು ಪೀಠವು ಮೂರು ತಿಂಗಳ ಕಾಲ ವಿಸ್ತರಿಸಿದೆ. ಈ ಆದೇಶವು ಜಾಮೀನು ಮನವಿಗಳಿಗೆ ಅನ್ವಯಿಸುವುದಿಲ್ಲ” ಎಂದು ನ್ಯಾಯಾಲಯ ಸೂಚಿಸಿದೆ.

Kannada Bar & Bench
kannada.barandbench.com