[ಚಾಮರಾಜನಗರ ಕೋವಿಡ್‌ ದುರಂತ] ನ್ಯಾಯಾಂಗ ತನಿಖೆಯ ಇಂಗಿತ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್

ವಿವಿಧ ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಸಲು ಅಳವಡಿಸಿಕೊಂಡಿರುವ ವಿಧಾನದ ಬಗ್ಗೆಯೂ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯ
Chief Justice Abhay S Oka and Justice Aravind Kumar
Chief Justice Abhay S Oka and Justice Aravind Kumar

ಚಾಮರಾಜನಗರ ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ ಆಮ್ಲಜನಕದ ಕೊರತೆಯಿಂದಾಗಿ 24 ಜನರ ಸಾವಿಗೆ ಕಾರಣವಾದ ಪ್ರಕರಣದ ಸಂಬಂಧ ನ್ಯಾಯಾಂಗ ತನಿಖೆಯನ್ನು ನಡೆಸುವ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯ ಇಂಗಿತ ವ್ಯಕ್ತಪಡಿಸಿದೆ.

ಮೇಲುನೋಟಕ್ಕೆ, ನಿವೃತ್ತ ನ್ಯಾಯಾಂಗ ಅಧಿಕಾರಿಯೊಬ್ಬರನ್ನು ನೇಮಿಸುವ ಮೂಲಕ ಪ್ರಕರಣದ ತನಿಖೆಯನ್ನು ನಡೆಸಬೇಕು ಎನ್ನುವ ಅಭಿಪ್ರಾಯ ನಮ್ಮದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ. ಅರವಿಂದ್‌ ಕುಮಾರ್‌ ಅವರು ತಮ್ಮ ಆದೇಶದಲ್ಲಿ ದಾಖಲಿಸಿದ್ದಾರೆ.

ಕೋವಿಡ್‌ ರೋಗಿಗಳಿಗೆ ರಾಜ್ಯದಲ್ಲಿ ಕಳಪೆ ಚಿಕಿತ್ಸಾ ಸೌಕರ್ಯ ದೊರೆಯುತ್ತಿರುವ ಕುರಿತು ಎರಡು ಪ್ರತ್ಯೇಕ ಪತ್ರಗಳು ನ್ಯಾಯಾಲಯಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಹೈಕೊರ್ಟ್‌ ಪ್ರಕರಣದ ವಿಚಾರಣೆಯನ್ನು ಕೆಲ ದಿನಗಳಿಂದ ನಡೆಸಿದೆ.

ಪ್ರಕರಣದ ಇಂದಿನ ವಿಚಾರಣೆ ವೇಳೆ ಚಾಮರಾಜನಗರದ ದುರಂತದ ಬಗ್ಗೆ ಗಮನಹರಿಸಿದ ನ್ಯಾಯಾಲಯವು, “ಚಾಮರಾಜನಗರ ಪ್ರಕರಣವು ಗಂಭೀರವಾದದ್ದು. ಸುಮಾರು 24 ಮಂದಿ ಸಾವನ್ನಪ್ಪಿದ್ದಾರೆ. ಪ್ರಕರಣದ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರಿಂದ ತನಿಖೆ ನಡೆಸಬೇಕು ಎಂದು ನಾವು ಸಲಹೆ ನೀಡುತ್ತೇವೆ,” ಎಂದು ರಾಜ್ಯ ಸರ್ಕಾರದ ಅಡ್ವೊಕೇಟ್‌ ಜನರಲ್ ಪ್ರಭುಲಿಂಗ ನಾವದಗಿ ಅವರಿಗೆ ಹೇಳಿತು.

ಈ ವೇಳೆ ಘಟನೆಯ ಸಂಬಂಧ ನ್ಯಾಯಪೀಠಕ್ಕೆ ಮಾಹಿತಿ ನೀಡಿದ ನಾವದಗಿ ಅವರು, ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ಪ್ರಕರಣದ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲು ಇದಾಗಲೇ ಚಾಮರಾಜನಗರಕ್ಕೆ ತೆರಳಿದ್ದಾರೆ. ಅಧಿಕಾರಿ ನೀಡುವ ವರದಿಯನ್ನು ನಾಳೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮುಂದುವರೆದು, “ಘಟನೆಗೆ ಕಾರಣರಾದವರನ್ನು ಶಿಕ್ಷಿಸಲು ಸರ್ಕಾರವು ಹಿಂಜರಿಯುವುದಿಲ್ಲ… ಈ ಲೋಪಕ್ಕೆ ಕಾರಣರಾದವರು ಯಾರೆಂದು ರಾಜ್ಯ ಸರ್ಕಾರ ತಿಳಿಯ ಬಯಸಿದೆ. ಏನಾದರೂ ಲೋಪ ಉಂಟಾಗಿದ್ದರೆ ಅದನ್ನು ನಾವು ಮತ್ತೆ ಮರುಕಳಿಸಬಯಸುವುದಿಲ್ಲ. ನ್ಯಾಯಾಂಗ ತನಿಖೆಯ ಬಗ್ಗೆ ನಮಗೆ ಯಾವುದೇ ಸಮಸ್ಯೆ ಇಲ್ಲ,” ಎಂದರು.

ಇದೇ ರೀತಿಯ ಘಟನೆ ಕಲಬುರಗಿಯಲ್ಲಿಯೂ ನಡೆದಿರುವುದಾಗಿ ವಿಚಾರಣೆ ವೇಳೆ ಉಪಸ್ಥಿತರಿದ್ದ ಇತರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಆಮ್ಲಜನಕದ ಕೊರತೆಯಿಂದಾಗಿ ಅಲ್ಲಿಯೂ ಅನೇಕ ಸಾವುಗಳು ಸಂಭವಿಸಿದೆ ಎಂದು ಹೇಳಲಾಯಿತು.

ಪ್ರಕರಣದ ಮುಂದಿನ ವಿಚಾರಣೆಯು ಮೇ 5ರಂದು ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com