ಕೋವಿಡ್‌ ನಿಯಂತ್ರಿಸಲು ವಸತಿ ಪ್ರದೇಶಕ್ಕೆ ಅನಿರೀಕ್ಷಿತ ಭೇಟಿ ನೀಡುವಂತೆ ಸರ್ಕಾರ, ಬಿಬಿಎಂಪಿಗೆ ಸೂಚಿಸಿದ ಹೈಕೋರ್ಟ್‌

ಅಪಾರ್ಟ್‌ಮೆಂಟ್‌ಗಳಲ್ಲಿ ಕಾರ್ಯಕ್ರಮ ನಡೆಸಿದ್ದರಿಂದ ಅಲ್ಲಿ ಕೋವಿಡ್‌ ಸೋಂಕಿತರು ಪತ್ತೆಯಾಗಿದ್ದಾರೆ ಎಂಬ ಹಲವು ನಿದರ್ಶನಗಳನ್ನು ಪೀಠದ ಗಮನಕ್ಕೆ ತಂದ ಬಳಿಕ ನ್ಯಾಯಾಲಯವು ನಿರ್ದೇಶನ ನೀಡಿದೆ.
Karnataka high court
Karnataka high court

ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ವಸತಿ ಗೃಹಗಳು, ಹೋಟೆಲ್‌ ಮತ್ತು ಇತರೆ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಬೇಕು ಎಂಬ ವಿಚಾರವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಒತ್ತಿ ಹೇಳಿದೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಕಾರ್ಯಕ್ರಮ ನಡೆಸಿದ್ದರಿಂದ ಅಲ್ಲಿ ಕೋವಿಡ್‌ ಸೋಂಕಿತರು ಪತ್ತೆಯಾಗಿದ್ದಾರೆ ಎಂಬ ಹಲವು ನಿದರ್ಶನಗಳನ್ನು ಪೀಠದ ಗಮನಕ್ಕೆ ತಂದ ಬಳಿಕ ನ್ಯಾಯಾಲಯವು ಮೇಲಿನ ನಿರ್ದೇಶನ ನೀಡಿದೆ.

“ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಅಧಿಕಾರಿಗಳು ಕೋವಿಡ್‌ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಲು ಅನಿರೀಕ್ಷಿತ ಭೇಟಿ ನೀಡುವುದು ಅತ್ಯಗತ್ಯವಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಏಪ್ರಿಲ್‌ 4ರಂದು ರಾಜ್ಯ ಸರ್ಕಾರವು ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಬಹಿರಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ 500 ಮಂದಿ ಭಾಗವಹಿಸಬಹುದಾಗಿದ್ದು, ನಿರ್ಬಂಧಿತ ಪ್ರದೇಶದಲ್ಲಿರುವ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 200 ಮಂದಿ ಭಾಗವಹಿಸಬಹುದಾಗಿದೆ ಎಂಬ ವಿಚಾರವನ್ನು ಪೀಠದ ಗಮನಕ್ಕೆ ತರಲಾಯಿತು.

ಬಹಿರಂಗ ಪ್ರದೇಶ ಮತ್ತು ನಿರ್ಬಂಧಿತ ಪ್ರದೇಶದ ಸಭಾಂಗಣದ ಕುರಿತಾದ ವಿವರಣೆಯನ್ನು ಸರ್ಕಾರ ನೀಡಿಲ್ಲ ಎಂದು ವಕೀಲ ವೆಂಕಟೇಶ ದಳವಾಯಿ ತಮ್ಮ ಮಧ್ಯಪ್ರವೇಶ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ಹೆಚ್ಚಿನ ಮಂದಿ ನೆರೆಯಲು ಅನುವಾಗಲಿದ್ದು, ಇದರಿಂದ ಕೋವಿಡ್‌ ವ್ಯಾಪಿಸುವ ಸಾಧ್ಯತೆ ಇದೆ ಎಂದು ಅವರು ವಾದಿಸಿದರು.

“ಅರ್ಜಿದಾರರು ಹೇಳಿರುವಂತೆ ಬಹಿರಂಗ ಪ್ರದೇಶದ ವ್ಯಾಪ್ತಿ ಮತ್ತು ಸಭಾಂಗಣವನ್ನು ಹೊಂದಿರುವ ನಿರ್ಬಂಧಿತ ಪ್ರದೇಶವನ್ನು ವ್ಯಾಖ್ಯಾನಿಸಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ” ಎಂದು ಅರ್ಜಿದಾರರ ವಾದಕ್ಕೆ ನ್ಯಾಯಾಲಯ ಸಮ್ಮತಿಸಿದೆ. ಅಲ್ಲದೇ, ತಕ್ಷಣ ಎಚ್ಚೆತ್ತುಕೊಂಡು ಏಪ್ರಿಲ್‌ 4ರಂದು ಹೊರಡಿಸಲಾದ ಆದೇಶವನ್ನು ಮಾರ್ಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ವಿಪತ್ತು ನಿರ್ವಹಣಾ ಕಾಯಿದೆ 2005ರ ಸೆಕ್ಷನ್‌ 51 ರಿಂದ 60 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್‌ 188 ಹಾಗೂ ರಾಜ್ಯ ಸಾಂಕ್ರಾಮಿಕ ರೋಗಗಳ ಕಾಯಿದೆ 2020ರ ಸೆಕ್ಷನ್‌ಗಳಾದ 4, 5 ಮತ್ತು 10 ಅನ್ನು ಉಲ್ಲಂಘಿಸಿರುವುದರ ಕುರಿತು ಮಾರ್ಚ್‌ 23 ಮತ್ತು ಏಪ್ರಿಲ್‌ 2ರಂದು ಹೊರಡಿಸಲಾದ ತನ್ನ ಆದೇಶಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳನ್ನು ದಾಖಲೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಪೀಠವು ನಿರ್ದೇಶನ ನೀಡಿದೆ.

Also Read
ಕೊಳಚೆ ಪ್ರದೇಶ, ಕಿಕ್ಕಿರದ ಜನವಸತಿ ಪ್ರದೇಶದ ಜನರಿಗೆ ಕೋವಿಡ್‌ ಲಸಿಕೆ ಸಿಗಲಿ: ವಿಶೇಷ ಕ್ರಮವಹಿಸಲು ಹೈಕೋರ್ಟ್‌ ಸೂಚನೆ

ಥಿಯೇಟರ್‌ಗಳಲ್ಲಿ ಆಸನ ಭರ್ತಿ ಕುರಿತಂತೆ ಸಿನಿಮಾ ಕ್ಷೇತ್ರದ ಪ್ರತಿನಿಧಿಗಳು ಮನವಿ ಸಲ್ಲಿಸಿದ ಬಳಿಕ ವಕೀಲ ಎನ್‌ ಪಿ ಅಮೃತೇಶ್‌ ಅವರು ಏಪ್ರಿಲ್‌ 2ರ ಆದೇಶದ ಪ್ರಕಾರ ಸಿನಿಮಾ ಥಿಯೇಟರ್‌ಗಳಲ್ಲಿ ಇಂದಿನವರೆಗೂ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು. ಅಲ್ಲದೇ ಜಿಮ್‌ಗಳಲ್ಲಿ ಶೇ. 50ರಷ್ಟು ಭರ್ತಿಗೆ ಅವಕಾಶ ಮಾಡಿ ಆದೇಶ ಮಾರ್ಪಡಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ವಿಚಾರಣೆಯನ್ನು ಏಪ್ರಿಲ್‌ 16ಕ್ಕೆ ಮುಂದೂಡಲಾಗಿದೆ.

ರಾಜ್ಯದಲ್ಲಿ ಕೋವಿಡ್‌ ಸೋಂಕಿತರು ಎದುರಿಸುತ್ತಿರುವ ಸಮಸ್ಯೆಗಳನ್ನು ಉಲ್ಲೇಖಿಸಿ ಬರೆಯಲಾಗಿದ್ದ ಎರಡು ಪತ್ರಗಳನ್ನು ಆಧರಿಸಿ ತಾನು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಕೊಳಚೆ ಪ್ರದೇಶಗಳು ಮತ್ತು ಕಿಕ್ಕಿರಿದಿರುವ ಪ್ರದೇಶಗಳಲ್ಲಿ ಸೋಂಕು ವ್ಯಾಪಿಸುವ ಸಾಧ್ಯತೆ ಇರುವುದರಿಂದ ಅಲ್ಲಿನ ಜನರಿಗೆ ತುರ್ತಾಗಿ ಲಸಿಕೆ ನೀಡುವಂತೆ ಕಳೆದ ವಾರ ಸರ್ಕಾರಕ್ಕೆ ಪೀಠ ಆದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com