ಕೋವಿಡ್ ಔಷಧ ದಾಸ್ತಾನು: ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತಿತರರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್

ಜನ ಔಷಧ ಕೊರತೆಯಿಂದ ತೊಂದರೆ ಎದುರಿಸುತ್ತಿರುವಾಗ ರಾಜಕೀಯ ನಾಯಕರು ಔಷಧ ಸಂಗ್ರಹಿಸಿಟ್ಟುಕೊಳ್ಳಲು ಯಾವುದೇ ಅಧಿಕಾರವಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಕೋವಿಡ್ ಔಷಧ ದಾಸ್ತಾನು: ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತಿತರರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್

ಕೋವಿಡ್‌ ಚಿಕಿತ್ಸೆಗೆ ಬಳಸುವ ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ಹಾಗೂ ಸಂಸದರನ್ನು ದೆಹಲಿ ಹೈಕೋರ್ಟ್‌ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಜನ ಔಷಧ ಕೊರತೆಯಿಂದ ತೊಂದರೆ ಎದುರಿಸುತ್ತಿರುವ ಸಂದರ್ಭದಲ್ಲಿ ರಾಜಕೀಯ ನಾಯಕರು ಔಷಧ ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ಜಸ್ಮೀತ್‌ ಸಿಂಗ್‌ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಔಷಧಗಳನ್ನು ರಾಜಕಾರಣಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದು ವೈದ್ಯಕೀಯ ಮಾಫಿಯಾ ಮತ್ತು ರಾಜಕಾರಣಿಗಳ ನಡುವಿನ ನಂಟಿನ ಬಗ್ಗೆ ತನಿಖೆ ನಡೆಸುವಂತೆ ಕೋರಿ ಡಾ ದೀಪಕ್‌ ಸಿಂಗ್‌ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಸಾರ್ವಜನಿಕ ಹಿತಕಾಪಾಡುವುದು ರಾಜಕೀಯ ನಾಯಕರ ಉದ್ದೇಶವಾಗಿದ್ದರೆ ಅವರು ತಮ್ಮ ಬಳಿ ಇರುವ ಔಷಧಗಳನ್ನು ಆರೋಗ್ಯ ಸೇವೆಗಳ ಮಹಾನಿರ್ದೇಶಕರಿಗೆ (ಡಿಜಿಹೆಚ್ಎಸ್) ಒಪ್ಪಿಸಬೇಕು. ಅವರು ಅದನ್ನು ಸರ್ಕಾರಿ ಆಸ್ಪತ್ರೆಗಳಿಗೆ ವಿತರಿಸುತ್ತಾರೆ ಎಂದು ಪೀಠ ಹೇಳಿದೆ.

ಹಾಲಿ ಬಿಜೆಪಿ ಸಂಸದ, ಮಾಜಿ ಕ್ರಿಕೆಟ್‌ ಆಟಗಾರ ಗೌತಮ್‌ ಗಂಭೀರ್‌ ಅವರ ಬಳಿ ಔಷಧ ಸಂಗ್ರಹ ಇರುವ ಕುರಿತು ನ್ಯಾಯಾಲಯ ಅತೃಪ್ತಿ ಸೂಚಿಸಿ, ಇಂತಹ ಅಭಾವದ ವೇಳೆಯೂ ಔಷಧ ಮಾರಾಟಗಾರರ ಮೂಲಕ ಅವರು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಔಷಧ ಹೇಗೆ ಸಂಗ್ರಹಿಸಿದರು ಎಂದು ಪ್ರಶ್ನಿಸಿತು.

ಅಕ್ರಮವಾಗಿ ಸಂಗ್ರಹಿಸಿಟ್ಟ ಔಷಧಗಳನ್ನು ವಶಪಡಿಸಿಕೊಳ್ಳುವುದಾಗಿ ದೆಹಲಿ ಪೊಲೀಸರು ವಿಚಾರಣೆ ವೇಳೆ ತಿಳಿಸಿದರಾದರೂ, ನ್ಯಾಯಾಲಯವು ಈ ವೇಳೆ “ರಾಜಕೀಯ ಮುಖಂಡರು ತಮ್ಮನ್ನು ತಾವು ತಿದ್ದಿಕೊಳ್ಳಬೇಕು. ಮುಟ್ಟುಗೋಲು ಹಾಕಿಕೊಳ್ಳುವಂತೆ ನಿರ್ದೇಶಿಸುವುದಿಲ್ಲ” ಎಂದಿತು.

"ರಾಜಕೀಯ ಲಾಭಕ್ಕಾಗಿ ಔಷಧಿಗಳನ್ನು ಸಂಗ್ರಹಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ ಹಾಗೂ ನಿರೀಕ್ಷಿಸುತ್ತೇವೆ. ಅಂತಹ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ವಿತರಿಸಲೆಂದು ಡಿಜಿಎಚ್‌ಎಸ್‌ಗೆ ಒಪ್ಪಿಸಲಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಜೊತೆಗೆ ಸೂಕ್ತ ತನಿಖೆ ನಡೆಸಿ ಘಟನೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿದೆ.

ತನಿಖೆ ನಡೆಸಲು ಆರು ವಾರಗಳ ಅಗತ್ಯವಿದೆ ಎಂಬುದಾಗಿ ಪೊಲೀಸರು ತಿಳಿಸಿದಾಗ ಪೀಠ, “ಜನರಿಗೆ ಬದ್ಧರಾಗಿರುವುದು ನಿಮ್ಮ ಕರ್ತವ್ಯ, ಇದು ನೀವು ಹಿಡಿಯಬೇಕಾದ ಹಾದಿಯಲ್ಲ, ಆರು ವಾರಗಳ ಹೊತ್ತಿಗೆ, ಈ ಸಮಸ್ಯೆ ಇಲ್ಲದಂತಾಗಬೇಕು" ಎಂದು ಖಂಡತುಂಡವಾಗಿ ಹೇಳಿತು.

Related Stories

No stories found.
Kannada Bar & Bench
kannada.barandbench.com