ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶ ಏಕೆ ಸಿದ್ಧವಾಗಿಲ್ಲ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿತು.
ಕೋವಿಡ್ ವಲಸೆ ಸಮಸ್ಯೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ಕುರಿತಾದ ತೀರ್ಪನ್ನು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ ಆರ್ ಶಾ ಅವರಿದ್ದ ವಿಭಾಗೀಯ ಪೀಠವು ಕಾಯ್ದಿರಿಸಿದೆ.
ಅಸಂಘಟಿತ ವಲಯದ ದತ್ತಾಂಶ ಸಿದ್ಧಪಡಿಸಲು ರೂ. 417 ಕೋಟಿ ವೆಚ್ಚ ಮಾಡಿದ್ದರೂ ಕೇಂದ್ರ ಸರ್ಕಾರ ಮಂದಗತಿಯಲ್ಲಿ ಕೆಲಸ ನಡೆಸುತ್ತಿರುವುದಕ್ಕೆ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ. “ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶ ಕುರಿತು ನಿಮ್ಮ ಯೋಜನೆ ಏನು? 417 ಕೋಟಿ ರೂಪಾಯಿ ವೆಚ್ಚ ಮಾಡಿದರೂ ಪ್ರಮಾಣದ ಮಾದರಿ (ಮಾಡ್ಯೂಲ್) ಸೃಷ್ಟಿಸಲಾಗಿಲ್ಲ. ನಿಮಗೆ ಎಷ್ಟು ಸಮಯ ಬೇಕು? ಇನ್ನೂ ಪ್ರಕ್ರಿಯೆಯೇ ಆರಂಭವಾಗಿಲ್ಲ” ಎಂದು ಪೀಠ ಅಸಮಾಧಾನ ಹೊರಹಾಕಿತು.
ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಯೋಜನೆ ಕೈಗೆತ್ತುಕೊಂಡಿದ್ದು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ದತ್ತಾಂಶ ಸಿದ್ಧವಾಗಲಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಇದಕ್ಕೆ ಪೀಠವು, ಇದು ಪ್ರಮಾಣದ ಮಾದರಿಯಾಗಿರುವುದರಿಂದ ಕಡಿಮೆ ಸಮಯ ತೆಗೆದುಕೊಳ್ಳಲಿದೆ. ಈ ಸಂದರ್ಭದಲ್ಲಿ ರಾಜ್ಯಗಳನ್ನು ಸಂಪರ್ಕಿಸಬೇಕು ಎಂದು ತಾಕೀತು ಮಾಡಿತು.
ಮೂರು ವರ್ಷ ಕಳೆದಿದ್ದು, ಇದುವರೆಗೆ ಏನೂ ಆಗಿಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಸಬೂಬನ್ನು ತಿರಸ್ಕರಿಸುವಂತೆ ಹಿರಿಯ ವಕೀಲ ಕೋಲಿನ್ ಗೊನ್ಸಾಲ್ವೆಸ್ ಪೀಠವನ್ನು ಕೋರಿದರು. “ಕೇಂದ್ರ ಸರ್ಕಾರದ ಸಬೂಬನ್ನು ಒಪ್ಪಿಕೊಳ್ಳಬೇಡಿ. ಪ್ರತಿ ರಾಜ್ಯವೂ ರಾಜ್ಯಮಟ್ಟದ ಪೋರ್ಟಲ್ ರೂಪಿಸಿವೆ. ಅದಕ್ಕಾಗಿಯೇ ಕಾರ್ಮಿಕರು ಇದ್ದಾರೆ ಎಂದು ರಾಜ್ಯಗಳು ಹೇಳುತ್ತಿವೆ. ಆದರೆ ಅವರನ್ನು ಕೇಂದ್ರ ಸರ್ಕಾರದ ಪೋರ್ಟಲ್‌ಗೆ ಜೋಡಿಸಲು ಸಾಧ್ಯವಿಲ್ಲ” ಎಂದು ಗೊನ್ಸಾಲ್ವೆಸ್ ಹೇಳಿದರು.
ಇದೇ ವೇಳೆ ಪೀಠವು ಪಡಿತರ ಚೀಟಿ ಹೊಂದಿಲ್ಲದ ಅಸಂಘಟಿತ ವಲಯದ ಕಾರ್ಮಿಕರಿಗೆ ಸೌಲಭ್ಯ ಒದಗಿಸುವುದನ್ನು ಖಾತರಿಪಡಿಸುವುದು ನಮ್ಮ ಉದ್ದೇಶ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್‌ವರೆಗೆ ವಿಸ್ತರಿಸಲಾಗಿದ್ದು, 80 ಕೋಟಿ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಹೇಳಿದರು. ಆಗ ಪೀಠವು ಪಡಿತರ ಚೀಟಿ ಹೊಂದಿಲ್ಲದವರು ಯೋಜನೆಯ ಲಾಭ ಪಡೆಯಬಹುದೇ ಎಂಬುದನ್ನು ತಿಳಿಯಬಯಸಿತು.
ಪಡಿತರ ಚೀಟಿ ಹೊಂದಿರದ ಅಸಂಘಟಿತ ವಲಯದ ಕಾರ್ಮಿಕರಿಗೂ ಆತ್ಮನಿರ್ಭರ್ ಯೋಜನೆ ಮತ್ತು ಪಿಎಂ ಗರೀಬ್ ಕಲ್ಯಾಣ್ ಯೋಜನೆಯನ್ನು ವಿಸ್ತರಿಸಬೇಕು ಎಂದು ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ವಾದಿಸಿದರು. “ಬಹುತೇಕ ವಲಸೆ ಕಾರ್ಮಿಕರ ಬಳಿ ಪಡಿತರ ಚೀಟಿ ಇರುವುದಿಲ್ಲ. ಮೇ 13ರ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಇಂದಿಗೂ ಅದರ ದತ್ತಾಂಶವಿಲ್ಲ. ಹೀಗಾಗಿ, ಎಂಟು ಕೋಟಿ ಅಸಂಘಟಿತ ವಲಯದ ಕಾರ್ಮಿಕರಿಗೆ ಆತ್ಮನಿರ್ಭರ್ ಅಥವಾ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಲಾಭ ದೊರೆಯುವಂತೆ ಮಾಡಬೇಕು” ಎಂದರು. ವಾದ-ಪ್ರತಿವಾದ ಆಲಿಸಿದ ಪೀಠವು ತೀರ್ಪು ಕಾಯ್ದಿರಿಸಿತು.