ಕೋವಿಡ್ ಎರಡನೇ ಅಲೆಯು ತೀವ್ರ ಆರ್ಥಿಕ ಸಂಕಷ್ಟಗಳಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಬಡ್ಡಿರಹಿತವಾಗಿ ಸಾಲದ ಕಂತು ಪಾವತಿ ಅವಧಿ ಮುಂದೂಡಿಕೆ (ಮೊರಟೊರಿಯಂ) ಘೋಷಣೆ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅವಧಿ ಸಾಲಗಳ ಮೇಲೆ ಆರು ತಿಂಗಳ ಅವಧಿಗೆ ಮೊರಟೊರಿಯಂ ಘೋಷಿಸಲು ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚಿಸಲು ಮನವಿಯಲ್ಲಿ ಕೋರಲಾಗಿದೆ.
ವಕೀಲ ವಿಶಾಲ್ ತಿವಾರಿ ಎನ್ನುವರು ಸಲ್ಲಿಸಿರುವ ಅರ್ಜಿಯಲ್ಲಿ, ಕೋವಿಡ್ ಎರಡನೆ ಅಲೆಯು ನಿರುದ್ಯೋಗ ಹಾಗೂ ವಾಣಿಜ್ಯ ಅವಕಾಶಗಳ ನಷ್ಟಕ್ಕೆ ಕಾರಣವಾಗಿದೆ. ಆದರೆ ಕೋವಿಡ್‌ನಿಂದಾಗಿ ಅಪಾರ ಸಂಕಷ್ಟಕ್ಕೆ ಈಡಾಗಿರುವ ವಲಯಗಳು ಹಾಗೂ ವ್ಯಕ್ತಿಗಳ ನೆರವಿಗೆ ಈವರೆಗೆ ಕೇಂದ್ರ ಸರ್ಕಾರ, ಸಂಬಂಧಪಟ್ಟ ಸಚಿವಾಲಯಗಳು, ಆರ್‌ಬಿಐ ಧಾವಿಸಿಲ್ಲ. ಸಂತ್ರಸ್ತರಿಗೆ ಯಾವುದೇ ಗಂಭೀರ ಪರಿಹಾರವನ್ನು ಘೋಷಿಸಿಲ್ಲ. ಇದು ಅಳಿವು, ಉಳಿವಿನ ಪ್ರಶ್ನೆಯಾಗಿ ಕಾಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
“ಸಂಕಷ್ಟದ ಈ ಕಾಲಘಟ್ಟದಲ್ಲಿ ಪ್ರಭುತ್ವದಿಂದ ಯಾವುದೇ ನಗದು ಪರಿಹಾರ ಅಥವಾ ಪ್ಯಾಕೇಜ್‌ಗಳು ಲಭ್ಯವಾಗಿಲ್ಲ. ಜನತೆಯು ತಮ್ಮ ಇಎಂಐಗಳನ್ನು ನಿರ್ವಹಿಸಲು ಗಂಭೀರ ಒತ್ತಡ ಎದುರಿಸಿದ್ದಾರೆ. ತಮ್ಮ ಖಾತೆಗಳು ನಿಷ್ಕ್ರಿಯ ಖಾತೆಗಳಾಗಿ ಘೋಷಣೆಗೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಸಂಬಳ, ಆದಾಯವಿಲ್ಲದ ವ್ಯಕ್ತಿಗಳ ಪಾಲಿಗೆ ಇದೊಂದು ನಿರಾಶಾದಾಯಕ ಪರಿಸ್ಥಿತಿಯಾಗಿದೆ. ಆರ್‌ಬಿಐ ಮೇ 6, 2021ರಂದು ಪರಿಹಾರ ಯೋಜನೆ 2.0 ಸುತ್ತೋಲೆಯೇನೋ ಹೊರಡಿಸಿದೆ.ಆದರೆ ಅದು, ಬೇಕಾಬಿಟ್ಟಿಯಾಗಿದ್ದು, ನ್ಯಾಯಯುತವಾಗಿಲ್ಲ; ಕೇವಲ ಕಣ್ಣೊರೆಸುವ ತಂತ್ರವಾಗಿದೆ,” ಎಂದು ಅರ್ಜಿದಾರರು ಮನವಿಯಲ್ಲಿ ವಿವರಿಸಿದ್ದಾರೆ.
ಕೋವಿಡ್ ಮೊದಲನೇ ಅಲೆ ವೇಳೆ, ಆರ್‌ಬಿಐ ಸಾಲ ಪಾವತಿಯ ಮರು ಸಂರಚನೆಗೆ ಮುಂದಾಗಿತ್ತು. ಪ್ರಸಕ್ತ ಸನ್ನಿವೇಶದಲ್ಲಿಯೂ ಸಹ ಅಂತಹದ್ದೇ ತುರ್ತು ಪರಿಹಾರ ಈ ದೇಶದ ನಾಗರಿಕರಿಗೆ ಅಗತ್ಯವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಬ್ಯಾಂಕ್‌ಗಳು ಸೇರಿದಂತೆ ಯಾವುದೇ ವಿತ್ತೀಯ ಸಂಸ್ಥೆಗಳು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳ ಆಸ್ತಿಯ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಿನ ಆರು ತಿಂಗಳ ಅವಧಿಗೆ ಮುಂದಾಗದಂತೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಸಹ ಅರ್ಜಿದಾರರು ಕೋರಿದ್ದಾರೆ.