ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ ದೃಢಪಟ್ಟ ರೋಗಿಗಳ ಮನೆಯ ಹೊರಗೆ ಪೋಸ್ಟರ್‌ಗಳನ್ನು ಅಂಟಿಸುವ ಅಗತ್ಯವಿಲ್ಲ. ಸಕ್ಷಮ ಪ್ರಾಧಿಕಾರ ಆದೇಶ ಹೊರಡಿಸಿದರೆ ಮಾತ್ರ ಅಂತಹ ಕ್ರಮಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಬುಧವಾರ ತೀರ್ಪು ನೀಡಿದೆ. 2005ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆಯಡಿ ತೆಗೆದುಕೊಂಡ ಈ ನಿರ್ಧಾರ ಪ್ರಶ್ನಿಸಿ ಕುಶ್ ಕಲ್ರಾ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಕೋವಿಡ್ ದೃಢಪಟ್ಟ ವ್ಯಕ್ತಿಗಳ ಮನೆಯ ಹೊರಗೆ ಪೋಸ್ಟರ್ ಹಾಕುವುದರಿಂದ ಅಂತಹ ವ್ಯಕ್ತಿಗಳ ಅಪಮಾನಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಪೀಠ ಪ್ರಕರಣದ ಈ ಹಿಂದಿನ ವಿಚಾರಣೆ ವೇಳೆ ಕೂಡ ಅಭಿಪ್ರಾಯಪಟ್ಟಿತ್ತು. ಹೀಗೆ ಪೋಸ್ಟರ್ ಅಂಟಿಸಬೇಕೆಂಬ ಯಾವುದೇ ಒತ್ತಡ ರಾಜ್ಯ ಅಧಿಕಾರಿಗಳ ಮೇಲಿಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರೂ ಅದು ಕಳವಳ ವ್ಯಕ್ತಪಡಿಸಿತ್ತು. ಕೋವಿಡ್ ಪೀಡಿತ ವ್ಯಕ್ತಿಯ ಮನೆಗಳಿಗೆ ಯಾರೂ ಎಚ್ಚರ ತಪ್ಪಿ ಪ್ರವೇಶಿಸದಂತೆ ನೋಡಿಕೊಳ್ಳಲು ಇಂತಹ ಪೋಸ್ಟರ್‌ಗಳನ್ನು ಹಾಕಲಾಗುತ್ತಿತ್ತು ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದರು.
ವಕೀಲರಾದ ಚಿನ್ಮೊಯ್ ಶರ್ಮಾ ಮತ್ತು ಪುನೀತ್ ತನೇಜಾ ಅವರ ಮೂಲಕ ಸಲ್ಲಿಸಿದ ಅರ್ಜಿಯು ಅಂತಹ ಹೆಸರುಗಳ ಬಹಿರಂಗಪಡಿಸುವಿಕೆ ನಡೆಯದಂತೆ ನೋಡಿಕೊಳ್ಳಲು ಅಗತ್ಯ ಆದೇಶಗಳನ್ನು ರವಾನಿಸಲು ರಾಜ್ಯಗಳಿಗೆ ನಿರ್ದೇಶನಗಳನ್ನು ಕೋರಿತ್ತು. ರೋಗಿಗಳ ಮನೆಗಳ ಹೊರಗೆ ಇಂತಹ ಪೋಸ್ಟರ್‌ಗಳನ್ನು ಅಂಟಿಸಲು ಅನುವು ಮಾಡಿಕೊಡುವ ರಾಜ್ಯಗಳು ಮತ್ತುಕೇಂದ್ರಾಡಳಿತ ಪ್ರದೇಶಗಳ ಕಾರ್ಯನಿರ್ವಾಹಕ ಆದೇಶಗಳನ್ನು ರದ್ದುಗೊಳಿಸಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೋರಿತ್ತು.
ಅಂತಹ ಹೆಸರುಗಳನ್ನು ವಾಟ್ಸಪ್ ಗ್ರೂಪ್ ಇತ್ಯಾದಿಗಳಲ್ಲಿ ಪ್ರಸಾರ ಮಾಡುವುದು ಗೌಪ್ಯತೆ ಕುರಿತಾದ ಮೂಲಭೂತ ಹಕ್ಕಿನ ಉಲ್ಲಂಘನೆ ಮತ್ತು ಸಂವಿಧಾನದ 21 ನೇ ಪರಿಚ್ಛೇದದ ಪ್ರಕಾರ ಘನತೆ ಮತ್ತು ಗೌರವದಿಂದ ಬದುಕುವ ಹಕ್ಕನ್ನು ಉಲ್ಲಂಘಿಸಿದೆ. ಈ ಬಗೆಯ ನಡೆಯಿಂದಾಗಿ ಕೊರೊನಾ ಕಾರಣಕ್ಕೆ ಈಗಾಗಲೇ ಮಾನಸಿಕ ಆಘಾತ ಮತ್ತು ದೌರ್ಬಲ್ಯಕ್ಕೆ ತುತ್ತಾದವರು ನೆರೆಹೊರೆಯವರು ಮತ್ತು ಸಮುದಾಯದಿಂದ ಕಳಂಕಕ್ಕೊಳಗಾಗಬೇಕಾಗುತ್ತದೆ. ಇದಲ್ಲದೆ, ಅಂತಹ ಪೋಸ್ಟರ್‌ಗಳಿಂದಾಗಿ ಕೋವಿಡ್ ಪೀಡಿತರು ಸಮುದಾಯದ ಚರ್ಚೆಯ ವಿಷಯವಾಗಲಿದ್ದು ಕ್ಷುಲ್ಲಕ ಗಾಳಿಮಾತುಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.