ಕೋವಿಡ್ -19: ಗುಜರಾತ್‌, ದೆಹಲಿ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್‌

“ದೆಹಲಿಯಲ್ಲಿ ಕಳೆದ ಎರಡು ವಾರಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಕೋವಿಡ್‌ ರೋಗಿಗಳನ್ನು ನಿಭಾಯಿಸುವಲ್ಲಿ ಇರುವ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳಲು ನಮಗೆ ವಸ್ತುಸ್ಥಿತಿ ವರದಿ ಬೇಕು” ಎಂದು ನ್ಯಾಯಮೂರ್ತಿ ಭೂಷಣ್‌ ಸೂಚಿಸಿದರು.
COVID-19 posters
COVID-19 posters

ಗುಜರಾತ್‌ ಮತ್ತು ದೆಹಲಿಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳ ಬಗ್ಗೆ ಎಚ್ಚರಿಕೆ ನೀಡಿರುವ ಸುಪ್ರೀಂಕೋರ್ಟ್‌ ಬಿಕ್ಕಟ್ಟನ್ನು ನಿರ್ವಹಿಸಲು ಕೈಗೊಂಡ ಕ್ರಮಗಳ ಕುರಿತು ಅಲ್ಲಿನ ಸರ್ಕಾರಗಳಿಂದ ವಿವರಣೆ ಬಯಸಿದೆ. ಇದೇ ವೇಳೆ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಂ ಆರ್ ಶಾ ಮತ್ತು ಸುಭಾಷ್ ರೆಡ್ಡಿ ಅವರಿದ್ದ ತ್ರಿಸದಸ್ಯ ಪೀಠ ಮಹಾರಾಷ್ಟ್ರ ಮತ್ತು ಅಸ್ಸಾಂ ಸರ್ಕಾರಗಳಿಂದಲೂ ಇಂತದ್ದೇ ಮಾಹಿತಿ ಕೇಳಿದೆ.

ಗುಜರಾತ್‌ ಮೂಲದವರಾದ ನ್ಯಾಯಮೂರ್ತಿ ಶಾ ಅವರು, “ ಗುಜರಾತ್ ರಾಜ್ಯದಲ್ಲಿ ಏನು ನಡೆಯುತ್ತಿದೆ? ಸರ್ಕಾರದ ನೀತಿ ನಿರ್ಧಾರವೇನು? ರಾಜಕೀಯ ಸಮಾರಂಭಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ?” ಎಂದು ಪ್ರಶ್ನಿಸಿದರು. ಗುಜರಾತ್‌ ಪರ ವಕೀಲರು ತಕ್ಷಣವೇ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದರು. ದೆಹಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಸಂಜಯ್‌ ಜೈನ್‌ ಅವರು ಕೋರ್ಟ್‌ನ ಹಿಂದಿನ ನಿರ್ದೇಶನಗಳ ಅನುಸಾರ ಕೈಗೊಂಡ ಕ್ರಮಗಳ ಬಗ್ಗೆ ಎಎಪಿ ಸರ್ಕಾರ ಜುಲೈ 22ರಂದು ಮಾಹಿತಿ ಒದಗಿಸಿರುವುದಾಗಿ ಹೇಳಿದರು.

Also Read
ಕೋವಿಡ್ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ವಿನಾಯಿತಿ ಕೋರಿ ಮನವಿ; ರಾಜ್ಯ ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್‌ ನೋಟಿಸ್‌

ಆದರೂ ಪೀಠ ಕೋವಿಡ್‌ ಸಂಖ್ಯೆ ಇತ್ತೀಚೆಗೆ ಉಚ್ಛ್ರಾಯ ಸ್ಥಿತಿ ತಲುಪಿರುವುದಕ್ಕೆ ಕಾರಣಗಳೇನು ಎಂದು ಸರ್ಕಾರಗಳನ್ನು ಪ್ರಶ್ನಿಸಿತು. “ದೆಹಲಿಯಲ್ಲಿ ಕಳೆದ ಎರಡು ವಾರಗಳಿಂದ ಪರಿಸ್ಥಿತಿ ಹದಗೆಟ್ಟಿದೆ. ಕೋವಿಡ್‌ ರೋಗಿಗಳನ್ನು ನಿಭಾಯಿಸುವಲ್ಲಿ ಇರುವ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳಲು ನಮಗೆ ವಸ್ತುಸ್ಥಿತಿಯ ವರದಿ ಬೇಕು” ಎಂದು ನ್ಯಾಯಮೂರ್ತಿ ಭೂಷಣ್‌ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಜಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಬೇಡಿಕೆ ಹೆಚ್ಚುತ್ತಿದ್ದು ಎಲ್ಲಾ 115 ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಶೇ 80ರಷ್ಟು ಹಾಸಿಗೆಗಳನ್ನು ಮೀಸಲಿರಿಸಿವೆ ಎಂದು ಹೇಳಿದರು.

ಇದೇ ವೇಳೆ “ಕೇಂದ್ರ ಗೃಹಸಚಿವರು ವಿಶೇಷವಾಗಿ ದೆಹಲಿಯ ಪರಿಸ್ಥಿತಿ ಸುಧಾರಿಸಲು ಕೈಗೊಂಡ ಕ್ರಮಗಳ ಬಗ್ಗೆ ಸಾಲಿಸಿಟರ್‌ ಜನರಲ್‌ ಅಫಿಡವಿಟ್‌ ಸಲ್ಲಿಸಿದ್ದಾರೆ. ಈ ತಿಂಗಳು ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಜ್ಜಾಗಿರಬೇಕು” ಎಂದು ನ್ಯಾಯಾಲಯ ತಿಳಿಸಿದ್ದು ವಿಚಾರಣೆಯನ್ನು ಇದೇ ಶುಕ್ರವಾರಕ್ಕೆ ಮುಂದೂಡಿದೆ.

Related Stories

No stories found.
Kannada Bar & Bench
kannada.barandbench.com