Supreme Court of India
Supreme Court of India

ಕೋವಿಡ್ ಪೀಡಿತ ಕುಟುಂಬಗಳ ಪುನರ್ವಸತಿಗಾಗಿ ರಾಷ್ಟ್ರೀಯ ಯೋಜನೆ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಕೋವಿಡ್ ರೋಗದಿಂದಾಗಿ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕ ಮನ್ನಾ ಮಾಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ಕೋವಿಡ್‌ ಪೀಡಿತ ಕುಟುಂಬಗಳ ಪುನರ್ವಸತಿಗಾಗಿ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ರಾಷ್ಟ್ರಮಟ್ಟದ ಯೋಜನೆ ರೂಪಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಶುಕ್ರವಾರ ನೋಟಿಸ್‌ ನೀಡಿದೆ. (ಸುಧೀರ್‌ ಕಥಪಾಲಿಯಾ ಮತ್ತು ಭಾರತ ಒಕ್ಕೂಟ ಹಾಗೂ ಇನ್ನಿತರರ ನಡುವಣ ಪ್ರಕರಣ).

ಕೋವಿಡ್ ರೋಗದಿಂದಾಗಿ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕ ಮನ್ನಾ ಮಾಡುವುದು ಕೂಡ ಯೋಜನೆಯ ಭಾಗವಾಗಿರಬೇಕು ಎಂಬ ಅಂಶವನ್ನು ವಕೀಲ ರಾಜೇಶ್ ಕುಮಾರ್ ಚೌರಾಸಿಯಾ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

ಅರ್ಜಿಯ ಪ್ರಮುಖಾಂಶಗಳು

  • ತಂದೆ-ತಾಯಿಯ ಅಕಾಲಿಕ ಮರಣದಿಂದ ಮಕ್ಕಳು ಅನಾಥರಾಗುತ್ತಿರುವ ಬಗ್ಗೆ ವಿವಿಧ ವರದಿಗಳು ಬಂದಿದ್ದು ಕುಟುಂಬಗಳ ಕಷ್ಟ ನಿವಾರಿಸಲು ಮತ್ತು ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರ ತುರ್ತಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

  • ಬಹಳಷ್ಟು ಕುಟುಂಬಗಳು ಗೃಹ ಮತ್ತು ಶಿಕ್ಷಣ ಸಾಲವನ್ನೇ ನೆಚ್ಚಿಕೊಂಡಿದ್ದು, ಪೋಷಕರ ನಿಧನದ ನಂತರ ಮಕ್ಕಳ ಮೇಲೆ ಹೊರೆ ಬೀಳುತ್ತಿದೆ. ಇದರಿಂದ ಅವರ ವಿದ್ಯಾಭ್ಯಾಸ ಮತ್ತು ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು.

  • ಸಾಂಕ್ರಾಮಿಕ ರೋಗದಿಂದ 2,70,000ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಯೋಜನೆ ಜಾರಿಗೆ ತರುವುದು ಅತಿಮುಖ್ಯ.

  • ಕೋವಿಡ್ ಪೀಡಿತ ಕುಟುಂಬಗಳ ಕುಟುಂಬಗಳಿಗೆ ಪರಿಹಾರ ಒದಗಿಸಲು ಮಧ್ಯಪ್ರದೇಶ ಮತ್ತು ದೆಹಲಿ ಸರ್ಕಾರಗಳು ಗಮನಾರ್ಹ ಘೋಷಣೆಗಳನ್ನು ಮಾಡಿವೆ. ಮಧ್ಯಪ್ರದೇಶ ಸರ್ಕಾರ ರೋಗದಿಂದ ಮೃತಪಟ್ಟವರ ಕುಟುಂಬದವರಿಗೆ ಅನುಕಂಪ ಆಧಾರಿತ ಉದ್ಯೋಗ ನೀಡುವ ಜೊತೆಗೆ ₹ 5 ಲಕ್ಷ ಧನ ಸಹಾಯ ಮಾಡುತ್ತಿದೆ. ಅಂತೆಯೇ ದೆಹಲಿ ಸರ್ಕಾರ ₹ 50,000 ಪರಿಹಾರ ಧನ ಘೋಷಿಸಿದೆ. ಸಾಂಕ್ರಾಮಿಕ ರೋಗದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 25 ವರ್ಷ ತುಂಬುವವರೆಗೆ ತಿಂಗಳಿಗೆ ₹ 2500 ಸಹಾಯಧನ ನೀಡಲಾಗುತ್ತಿದೆ. ಆದರೆ ಉಳಿದ ರಾಜ್ಯಗಳ ಸಂತ್ರಸ್ತರಿಗೆ ಈ ಸೌಲಭ್ಯ ದೊರೆಯುತ್ತಿಲ್ಲ.

  • ಹೀಗಾಗಿ ರಾಷ್ಟ್ರಮಟ್ಟದ ಯೋಜನೆ ಅತ್ಯಗತ್ಯ.

  • ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಬ್ಯಾಂಕ್‌ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ನಿರ್ಬಂಧ ಹೇರಬೇಕು.

Related Stories

No stories found.
Kannada Bar & Bench
kannada.barandbench.com