ಜನರಿಗೆ ಸತ್ಯ ಹೇಳಿ: ಲಸಿಕೆ ಲಭ್ಯತೆ ವಿಚಾರದಲ್ಲಿ ಜನತೆಗೆ ನೈಜ ಮಾಹಿತಿ ತಿಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

“ನಿಮ್ಮ ಸಚಿವರು ಮತ್ತು ಇತರರು ಜನರಿಗೆ ಸತ್ಯ ಹೇಳಬೇಕು. ಸಾರ್ವಜನಿಕರಿಗೆ ಸತ್ಯ ಹೇಳಿ, ಸಾರ್ವಜನಿಕವಾಗಿ ಅಸಮರ್ಪಕವಾದ ಹೇಳಿಕೆಗಳನ್ನು ನೀಡಬೇಡಿ” ಎಂದು ಪೀಠವು ಖಾರವಾಗಿ ನುಡಿದಿದೆ.
Karnataka High Court, Vaccination
Karnataka High Court, Vaccination

ರಾಜ್ಯದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ತೃಪ್ತಿದಾಯಕವಾಗಿ ನಡೆಯುತ್ತಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಮೊದಲ ಡೋಸ್‌ ಪಡೆದುಕೊಂಡಿರುವವರಿಗೆ ಎರಡನೇ ಡೋಸ್‌ ಲಭ್ಯವಾಗದಿರುವ ವಿಚಾರವನ್ನು ಗಮನಿಸಿದ ಪೀಠವು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತು.

ಲಭ್ಯ ಇರುವ ಲಸಿಕೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ರಾಜ್ಯ ಸರ್ಕಾರವು ಸ್ಪಷ್ಟವಾದ ನಿಲುವು ತಳೆಯಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಖಚಿತವಾಗಿ ಹೇಳಿತು.

“ಸಾರ್ವಜನಿಕರಿಗೆ ನೀವು ಸರಿಯಾದ ಮಾಹಿತಿ ಒದಗಿಸಬೇಕು. ಸತ್ಯವನ್ನು ಜನರಿಗೆ ಹೇಳಿ. ಜನರು ಲಸಿಕಾ ಕೇಂದ್ರಗಳಿಗೆ ತೆರಳಿ, ಲಸಿಕೆ ಸಿಗದೆ ವಾಪಸಾಗುತ್ತಿದ್ದಾರೆ. ಈಗ ಯಾರಿಗೆ ಲಸಿಕೆ ನೀಡಲಾಗುತ್ತದೆ ಎಂಬುದರ ಬಗ್ಗೆ ನೀವು ಆದ್ಯತೆಯನ್ನು ತಿಳಿಸಬೇಕು. ನಿಮ್ಮ ಸಚಿವರು ಮತ್ತು ಇತರರು ಜನರಿಗೆ ಸತ್ಯ ಹೇಳಬೇಕು. ಜನರಿಗೆ ಸತ್ಯ ಹೇಳಿ, ಸಾರ್ವಜನಿಕರ ಮುಂದೆ ಅಸಮಂಜಸವಾದ ಹೇಳಿಕೆಗಳನ್ನು ನೀಡಬೇಡಿ” ಎಂದು ಪೀಠ ಕಠಿಣವಾಗಿ ಹೇಳಿತು.

ಈ ಸಂಬಂಧದ ದತ್ತಾಂಶವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು ಎಂದ ಪೀಠವು “ಲಭ್ಯ ಇರುವ ಲಸಿಕೆಯ ಮಾಹಿತಿಯನ್ನು ನಿರ್ದಿಷ್ಟ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ” ಎಂದಿತು.

ರಾಜ್ಯದಲ್ಲಿ ಆರು ಕೋಟಿ ಜನರಿದ್ದು, ಕೇವಲ 22 ಲಕ್ಷ ಮಂದಿಗೆ ಎರಡೂ ಡೋಸ್‌ ಲಸಿಕೆ ಸಿಕ್ಕಿದೆ ಎಂದು ಪೀಠ ಹೇಳಿತು.

ತಾನು ಪಡೆದುಕೊಂಡ ಶೇ. 70ರಷ್ಟು ಲಸಿಕೆಯನ್ನು ಎರಡನೇ ಡೋಸ್‌ಗಾಗಿ ಮೀಸಲಿಟ್ಟುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾಗಿ ಕೇಂದ್ರ ಸರ್ಕಾರ ಹೇಳಿತು. “ಕರ್ನಾಟಕ ಏಕೆ ಎಲ್ಲಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿತು? ನಿಮ್ಮಿಂದ ಗಂಭೀರ ಲೋಪವಾಗಿದೆ. ಶೇ. 70ರಷ್ಟು ಲಸಿಕೆಯನ್ನು ಎರಡನೇ ಡೋಸ್‌ಗಾಗಿ ನೀವು ಏಕೆ ಮೀಸಲಿಟ್ಟುಕೊಳ್ಳಲಿಲ್ಲ? ನೀವು ಆ ಕೆಲಸ ಮಾಡಿದ್ದರೆ, ನಮಗೆ ಇಂದು ಈ ಸಮಸ್ಯೆ ಎದಿರಾಗುತ್ತಿರಲಿಲ್ಲ” ಎಂದು ಪೀಠವು ರಾಜ್ಯ ಸರ್ಕಾರಕ್ಕೆ ಹೇಳಿತು.

ಕೇಂದ್ರ ಸರ್ಕಾರದ ಲಸಿಕಾ ನೀತಿಯ ಬಗ್ಗೆ ಗಂಭೀರ ಟೀಕೆ ಮಾಡಿದ ನ್ಯಾಯಾಲಯವು ಲಸಿಕೆ ಕೊರತೆಯತ್ತ ಬೆರಳು ಮಾಡಿತು. ಸರಿಯಾದ ಸಮಯಕ್ಕೆ ಎರಡನೇ ಡೋಸ್‌ ಲಸಿಕೆ ಪೂರೈಸದಿದ್ದರೆ ಅದು “ಬೃಹತ್‌ ರಾಷ್ಟ್ರೀಯ ಪೋಲಾಗಲಿದೆ” ಎಂದಿತು.

ಎಷ್ಟು ಕಾಲಾವಧಿಯಲ್ಲಿ ಎರಡನೇ ಡೋಸ್‌ ಲಸಿಕೆ ನೀಡಬೇಕು ಎಂಬ ವಿಚಾರ ತಿಳಿಸುವಂತೆ ಕೇಂದ್ರಕ್ಕೆ ಪೀಠವು ಪ್ರಶ್ನಿಸಿತು. “ಕೋವ್ಯಾಕ್ಸಿನ್‌ ಎರಡನೇ ಡೋಸ್‌ ಅನ್ನು ನಾಲ್ಕು ವಾರಗಳ ಬಳಿಕ, ಕೋವಿಶೀಲ್ಡ್‌ ಎರಡನೇ ಡೋಸ್‌ ಅನ್ನು ಎಂಟು ವಾರಗಳ ಬಳಿಕ ಪಡೆದುಕೊಂಡರೆ ಏನಾಗುತ್ತದೆ? ಸರಿಯಾದ ಸಮಯಕ್ಕೆ ಎರಡನೇ ಡೋಸ್‌ ಲಸಿಕೆ ಪಡೆಯುವುದು ವ್ಯಕ್ತಿಗೆ ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ಹಕ್ಕಲ್ಲವೇ? ಎಂದು ಪೀಠ ಪ್ರಶ್ನಿಸಿತು.

ನಿಗದಿತ ಅವಧಿಯಲ್ಲಿ ಲಸಿಕೆ ಪಡೆಯುವುದು ಸೂಕ್ತ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ಹೇಳಿದರು. “ನಿಗದಿತ ಸಮಯದಲ್ಲಿ ಲಸಿಕೆ ಪಡೆಯಬೇಕು… ತಜ್ಞರ ಗುಂಪು ಈ ಸಂಬಂಧ ಅಧ್ಯಯನ ನಡೆಸುತ್ತಿದ್ದು, ಇನ್ನೆರಡು ದಿನದಲ್ಲಿ ವರದಿ ಸಲ್ಲಿಸಲಿದೆ” ಎಂದು ಭಾಟಿ ಹೇಳಿದರು.

“ಇವೆಲ್ಲಾ ನಮಗೆ ಹೇಳಲಾಗುತ್ತಿರುವ ನೆಪಗಳು. ಲಸಿಕೆಯ ಲಭ್ಯತೆ ಹಾಗೂ ಅಗತ್ಯದ ನಡುವಿನ ಅಂತರವನ್ನು ಹೇಗೆ ಕಡಿಮೆ ಮಾಡುವಿರಿ ಎಂಬುದನ್ನು ತಿಳಿಸಿ. ಹೆಚ್ಚಿನ ಜನರಿಗೆ ರೋಗ ನಿರೋಧಕ ಶಕ್ತಿ ಲಭ್ಯವಾಗುವುದು ಅವಶ್ಯತೆಯಲ್ಲವೇ” ಎಂದು ಪೀಠವು ಪ್ರಶ್ನಿಸಿತು.

ತಡವಾದರೂ ಪರವಾಗಿಲ್ಲ ಎಂದು ಯಾವಾಗಬೇಕಾದರು ಎರಡನೇ ಡೋಸ್‌ ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆಯೇ ಎಂದು ಪೀಠ ಪ್ರಶ್ನಿಸಿತು. “ಮೊದಲ ಡೋಸ್‌ ಲಸಿಕೆ ಪಡೆದ ವ್ಯಕ್ತಿ ಯಾವಾಗ ಬೇಕಾದರೂ ಎರಡನೇ ಡೋಸ್‌ ಲಸಿಕೆ ಪಡೆಯಬಹುದು ಎಂದು ನಮಗೆ ನಿಜಕ್ಕೂ ಸಲಹೆ ಮಾಡುತ್ತಿದ್ದೀರಾ? ತಡವಾದರೂ ಪರವಾಗಿಲ್ಲ ಎಂದು ಹೇಳುತ್ತಿದ್ದೀರಾ?” ಎಂದು ನ್ಯಾಯಾಲಯ ಕೇಳಿತು.

“ ಸೂಕ್ತ ಸಮಯದಲ್ಲಿ ಜನರಿಗೆ ಎರಡನೇ ಡೋಸ್‌ ಲಸಿಕೆ ನೀಡದಿದ್ದರೆ ಇಡೀ ಪ್ರಯತ್ನವು ಬೃಹತ್‌ ಪ್ರಮಾಣದಲ್ಲಿ ರಾಷ್ಟ್ರೀಯವಾಗಿ ನಿರುಪಯುಕ್ತವಾಗಲಿದೆ” ಎಂದು ಪೀಠ ಹೇಳಿತು.

“ಮೊದಲನೇ ಡೋಸ್‌ ಪಡೆದಿರುವುದು ನಷ್ಟವಾಗದಂತೆ ತಡೆಯಲು ಎಲ್ಲಾ ಪ್ರಯತ್ನವನ್ನೂ ನಾವು ಮಾಡಲಿದ್ದೇವೆ. ಎರಡನೇ ಡೋಸ್‌ ಲಸಿಕೆ ನೀಡುವುದು ನಮ್ಮ ಕರ್ತವ್ಯ” ಎಂದು ಈ ವೇಳೆ ಎಎಸ್‌ಜಿ ಪ್ರತಿಕ್ರಿಯಿಸಿದರು.

Also Read
“ಲಸಿಕೆ ಪಡೆಯಲು ಜನರನ್ನು ಒತ್ತಾಯಿಸುವುದು ಅಸಾಂವಿಧಾನಿಕ:” ಕೋವಿಡ್‌ ಲಸಿಕಾ ಪ್ರಯೋಗ ದತ್ತಾಂಶಕ್ಕೆ ಸುಪ್ರೀಂನಲ್ಲಿ ಮನವಿ

ಕೋವಿಡ್‌ ಎರಡನೇ ಡೋಸ್‌ ಲಸಿಕೆಯನ್ನು ಆದ್ಯತೆಯಾಗಿಸುವ ಕೇಂದ್ರ ಸರ್ಕಾರದ ಸಲಹೆಯನ್ನು ರಾಜ್ಯ ಸರ್ಕಾರವು ಉಲ್ಲಂಘಿಸಿದ್ದು ಏಕೆ ಎಂಬುದಕ್ಕೆ ಪ್ರತಿಕ್ರಿಯಿಸಲು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಕಾಲಾವಕಾಶ ನೀಡಿತು. “ಜಿಲ್ಲಾವಾರು ಮಟ್ಟದಲ್ಲಿ ಯಾವೆಲ್ಲಾ ಜಿಲ್ಲೆಯಲ್ಲಿ ಯಾರಿಗೆಲ್ಲಾ ಎರಡನೇ ಡೋಸ್‌ ಲಸಿಕೆ ನೀಡಬೇಕಿದೆ ಮತ್ತು ಮುಂದೆ ನೀಡಬೇಕಾಗುತ್ತದೆ ಎಂಬುದರ ಪಟ್ಟಿಯನ್ನು ರಾಜ್ಯ ಸರ್ಕಾರವು ನೀಡಿದರೆ ಅಂತರ ಕಡಿಮೆ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿದೆ” ಎಂದು ಎಎಸ್‌ಜಿ ಹೇಳಿದರು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಭರವಸೆಯ ಹಿನ್ನೆಲೆಯಲ್ಲಿ ನಾವು ಇಂದು ಕಡ್ಡಾಯ ನಿರ್ದೇಶನಗಳನ್ನು ಹೊರಡಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿತು.

Related Stories

No stories found.
Kannada Bar & Bench
kannada.barandbench.com