ರಾಜ್ಯದಲ್ಲಿ ಲಸಿಕೆ ಆಘಾತಕಾರಿ ಎಂಬಷ್ಟು ಕಡಿಮೆ; ಕೂಡಲೇ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ದೇಶಿಸಿದ ಕರ್ನಾಟಕ ಹೈಕೋರ್ಟ್

ಪ್ರಸಕ್ತ ಸನ್ನಿವೇಶದಲ್ಲಿ ನಾಗರಿಕರು ಕೋವಿಡ್ ಮುಂಚೂಣಿ ಕಾರ್ಯಕರ್ತರ ವ್ಯಾಪ್ತಿಯಡಿ ಬಾರದಿದ್ದರೆ ಅವರಿಗೆ ಮೊದಲನೆಯ ಡೋಸ್ ಲಸಿಕೆ ಸಿಗುವುದು ಬಹುತೇಕ ಅಸಾಧ್ಯ ಎಂದ ಪೀಠ.
Karnataka High Court, Vaccination
Karnataka High Court, Vaccination
Published on

ರಾಜ್ಯದಲ್ಲಿ ಕೋವಿಡ್‌ ಲಸಿಕೆಯ ಲಭ್ಯತೆ ಆಘಾತಕಾರಿಯಾದಷ್ಟು ಕಡಿಮೆ ಇದ್ದು ಕೂಡಲೇ ಅಗತ್ಯವಿರುವಷ್ಟು ಲಸಿಕೆಗಳಿಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ ಗುರುವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಅಲ್ಲದೆ, ಕೇಂದ್ರ ಸರ್ಕಾರವು ರಾಜ್ಯದ ಮನವಿಗೆ ಮೂರು ದಿನಗಳೊಳಗೆ ಪ್ರತಿಕ್ರಿಯಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ರಾಜ್ಯದಲ್ಲಿನ ಕೋವಿಡ್‌ ನಿರ್ವಹಣೆಯಲ್ಲಿನ ಲೋಪಗಳ ಕುರಿತು ನ್ಯಾಯಾಲಯಕ್ಕೆ ಬರೆಯಲಾಗಿದ್ದ ಎರಡು ಪತ್ರಗಳನ್ನು ಆಧರಿಸಿ ಸ್ವಯಂಪ್ರೇರಣೆಯಿಂದ ಅರ್ಜಿ ದಾಖಲಿಸಿಕೊಂಡು ಹೈಕೋರ್ಟ್‌ ವಿಚಾರಣೆ ಕೈಗೊಂಡಿದೆ. ಕೋವಿಡ್‌ನಿಂದಾಗಿ ಉಂಟಾಗಿರುವ ಪ್ರಸಕ್ತ ಗಂಭೀರ ಸನ್ನಿವೇಶವನ್ನು ಪೀಠವು ಪರಿಗಣಿಸಿದೆ. ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ. ಅರವಿಂದ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಲಸಿಕೆಯ ಲಭ್ಯತೆಯ ಕುರಿತಾಗಿ ರಾಜ್ಯ ಸರ್ಕಾರವು ತನ್ನ ನೀಡಿರುವ ಮಾಹಿತಿಯನ್ನು ಪೀಠವು ಪರಿಶೀಲಿಸಿತು. ರಾಜ್ಯದಲ್ಲಿ ಇದಾಗಲೇ 1,72,00,795 ಡೋಸ್ ಕೋವಿಡ್‌‌ ಲಸಿಕೆಯನ್ನು ಹಾಕಲಾಗಿದೆ. ಕೇವಲ 7,76,671 ಲಸಿಕೆಗಳು ಮಾತ್ರ ಉಳಿದಿವೆ. ಗಮನಿಸಬೇಕಾದ ಅಂಶವೆಂದರೆ, ಇದರಲ್ಲಿ 18-44 ವಯೋಮಾನದವರೂ ಸೇರಿದ್ದಾರೆ ಎಂದಿತು.

Also Read
ಆಮ್ಲಜನಕ ಹೆಚ್ಚಳ ಕುರಿತಂತೆ ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕೇಂದ್ರದ ವಾದವೇನು?

83,28,241 ಫಲಾನುಭವಿಗಳು ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. 65 ಲಕ್ಷ ಮಂದಿಗೆ ಎರಡನೆಯ ಡೋಸ್‌ ಲಸಿಕೆ ಬೇಕಿದೆ. ಈ 65 ಲಕ್ಷ ಮೊದಲ ಡೋಸ್‌ ಲಸಿಕೆ ಪಡೆದವರಲ್ಲಿ 7 ಲಕ್ಷ ಮಂದಿ ಮಾತ್ರ ಎರಡನೆಯ ಡೋಸ್‌ ಪಡೆಯಬಹುದು ಎಂದು ನ್ಯಾಯಾಲಯ ಹೇಳಿತು.

ಮುಂದುವರೆದು, ಲಸಿಕೆಯ ಲಭ್ಯತೆಯು ಆಘಾತಕಾರಿ ಎಂಬಷ್ಟು ಕಡಿಮೆ ಇದೆ. ಲಭ್ಯ ಇರುವುದನ್ನು ಇದಾಗಲೇ ಮೊದಲ ಡೋಸ್‌ ತೆಗೆದುಕೊಂಡವರಿಗೆ ನೀಡಬೇಕಿದೆ. ತದನಂತರ ಆದ್ಯತೆಯನ್ನು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನೀಡಬೇಕು. ಈ ಸ್ಥಿತಿಯನ್ನು ಗಮನಿಸಿದರೆ, ನಾಗರಿಕರು ಮೇಲಿನ ಮುಂಚೂಣಿ ಕಾರ್ಯಕರ್ತರ ವ್ಯಾಪ್ತಿಯಡಿ ಬಾರದಿದ್ದರೆ ಅವರಿಗೆ ಮೊದಲನೆಯ ಡೋಸ್‌ ಲಸಿಕೆ ಸಿಗುವುದು ಬಹುತೇಕ ಅಸಾಧ್ಯ ಎನಿಸುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ಹಾಗಾಗಿ, ಕೂಡಲೇ ಅಗತ್ಯವಿರುವಷ್ಟು ಲಸಿಕೆಗಳಿಗಾಗಿ ರಾಜ್ಯವು ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ದೇಶಿಸುತ್ತೇವೆ. ಮನವಿಯಲ್ಲಿ ಎಲ್ಲ ವಿವರಗಳನ್ನು ರಾಜ್ಯವು ಕೇಂದ್ರಕ್ಕೆ ನೀಡಬೇಕು. ಒಂದು ವೇಳೆ ಎರಡನೆಯ ಡೋಸ್ ನೀಡದೇ ಹೋದಲ್ಲಿ ಎಷ್ಟು ಮಂದಿ ಫಲಾನುಭವಿಗಳು ಮೊದಲನೆಯ ಡೋಸ್‌ನ ಲಾಭವನ್ನು ಕಳೆದುಕೊಳ್ಳಲಿದ್ದಾರೆ ಎನ್ನುವುದನ್ನು ರಾಜ್ಯವು ಮನವಿಯಲ್ಲಿ ತಿಳಿಸಬೇಕು. ಇಂದಿನವರೆಗಿನ ಅಂಕಿಅಂಶಗಳನ್ನು ರಾಜ್ಯವು ಕೇಂದ್ರಕ್ಕೆ ನೀಡಬೇಕು. ಕೇಂದ್ರವು ಈ ಬಗ್ಗೆ ಮೂರು ದಿನಗಳೊಳಗೆ ಪ್ರತಿಕ್ರಿಯಿಸಬೇಕು ಎಂದು ಪೀಠವು ಸೂಚಿಸಿತು.

ಸದ್ಯಕ್ಕೆ ರಾಜ್ಯದಲ್ಲಿ ಮೊದಲನೆಯ ಡೋಸ್‌ ನೀಡುವ ಯಾವುದೇ ಸಾಧ್ಯತೆಗಳು ಗೋಚರಿಸುತ್ತಿಲ್ಲ. ರಾಜ್ಯದ ಮನವಿಯನ್ನು ಪರಿಗಣಿಸುವಾಗ ಈ ಸಂಕಷ್ಟ ಸನ್ನಿವೇಶವನ್ನು ಕೇಂದ್ರವು ಪರಿಗಣಿಸುತ್ತದೆ ಎಂದು ನಾವು ಭಾವಿಸುತ್ತೇವೆ ಹಾಗೂ ವಿಶ್ವಾಸವಿರಿಸುತ್ತೇವೆ ಎಂದು ಪೀಠವು ಹೇಳಿತು.

Kannada Bar & Bench
kannada.barandbench.com