ಕೋವಿಡ್: ಮಗು ಅನಾಥವಾದರೆ 24 ಗಂಟೆ ಒಳಗೆ ತನ್ನ ಮುಂದೆ ಹಾಜರುಪಡಿಸುಂತೆ ಕೋರಿದ ಮಕ್ಕಳ ಕಲ್ಯಾಣ ಸಮಿತಿ

ನಿಗದಿತ ಕಾರ್ಯ ವಿಧಾನ ಉಲ್ಲಂಘಿಸಿ ಮಗುವನ್ನು ನೇರವಾಗಿ ದತ್ತು ಪಡೆಯುವುದು 2015ರ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯಿದೆ ಸೆಕ್ಷನ್ 80ರಡಿ ಅಪರಾಧವಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
ಕೋವಿಡ್: ಮಗು ಅನಾಥವಾದರೆ 24 ಗಂಟೆ ಒಳಗೆ ತನ್ನ ಮುಂದೆ ಹಾಜರುಪಡಿಸುಂತೆ ಕೋರಿದ ಮಕ್ಕಳ ಕಲ್ಯಾಣ ಸಮಿತಿ

ಕೋವಿಡ್‌ ಬಿಕ್ಕಟ್ಟಿನಿಂದಾಗಿ ಮಗು ಅನಾಥವಾದರೆ ಹಾಗೂ ಆ ಮಗುವಿನ ಪೋಷಣೆಗೆ ಸಂಬಂಧಿಕರು ಸಿದ್ದರಿಲ್ಲದಿದ್ದರೆ ಅಂತಹ ಮಗುವನ್ನು 24 ಗಂಟೆಗಳ ಒಳಗೆ ತನ್ನ ಮುಂದೆ ಹಾಜರುಪಡಿಸಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಕೋರಿದೆ. ಪ್ರಯಾಣಕ್ಕೆ ತೆಗೆದುಕೊಂಡ ಸಮಯವನ್ನು ಹೊರತುಪಡಿಸಿ ಇಪ್ಪತ್ನಾಲ್ಕು ಗಂಟೆಗಳ ಒಳಗಾಗಿ ಮಗುವನ್ನು ಹಾಜರುಪಡಿಸಲು ಅದು ತಿಳಿಸಿದೆ.

ನಿಗದಿತ ಕಾರ್ಯ ವಿಧಾನ ಉಲ್ಲಂಘಿಸಿ ಮಗುವನ್ನು ನೇರವಾಗಿ ದತ್ತು ಪಡೆಯುವುದು 2015ರ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯಿದೆ ಸೆಕ್ಷನ್ 80ರಡಿ ಅಪರಾಧವಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ. ಕೃತ್ಯ ಎಸಗಿದಲ್ಲಿ ಮೂರು ವರ್ಷಗಳವರೆಗಿನ ಕಾರಗೃಹ ಶಿಕ್ಷೆ ಅಥವಾ 1 ಲಕ್ಷ ರೂಪಾಯಿ ದಂಡ ಅಥವಾ ಈ ಎರಡೂ ಶಿಕ್ಷೆಗಳನ್ನು ವಿಧಿಸಬಹುದಾಗಿದೆ. ಅಂತಹ ಅಪರಾಧ ಕಂಡುಬಂದರೆ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಅಥವಾ ಪೊಲೀಸರಿಗೆ ಕರೆ ನೀಡುವಂತೆ ಸಮಿತಿಯ ಪ್ರಕಟಣೆ ತಿಳಿಸಿದೆ.

ಇದೇ ವೇಳೆ ಮಕ್ಕಳನ್ನು ದತ್ತುಪಡೆಯಬಹುದು ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಬರುವ ಸಂದೇಶಗಳ ಬಗ್ಗೆ ಜಾಗರೂಕರಾಗಿರುವಂತೆ ಸಮಿತಿ ಹೇಳಿದೆ. ಇಂತಹ ಮಾಹಿತಿ ಕಂಡುಬಂದಲ್ಲಿ ತಕ್ಷಣವೇ ಪೊಲೀಸರು ಅಥವಾ ಸಹಾಯವಾಣಿಗೆ ಕರೆ ಮಾಡಬೇಕು ಎಂದು ಕೋರಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳ ದತ್ತು ಸ್ವೀಕಾರ ಕುರಿತು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಅಕ್ರಮ ದತ್ತು ಮತ್ತು ಮಾನವ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದ ಕಾನೂನುಗಳಡಿ ಶಿಕ್ಷೆ ವಿಧಿಸಲಾಗುವುದು ಎಂದು ಅದು ಎಚ್ಚರಿಸಿದೆ.

ರಾಜ್ಯದ ಮಾಧ್ಯಮಗಳಲ್ಲಿ ಕೋವಿಡ್ ಸಮಸ್ಯೆಯಿಂದಾಗಿ ಮಕ್ಕಳು ಅನಾಥರಾಗುತ್ತಿರುವ ವರದಿಗಳು ಪ್ರಸಾರವಾಗುತ್ತಿವೆ ಎಂದಿರುವ ಸಮಿತಿ ಮಕ್ಕಳ ಮಾಹಿತಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂಬುದಾಗಿ ಬಾಲ ನ್ಯಾಯ ಕಾಯಿದೆಯನ್ನು ಉಲ್ಲೇಖಿಸಿ ವಿವರಿಸಿದೆ.

2015ರ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯಿದೆ ಮತ್ತು2016ರ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮಗಳು ಹಾಗೂ 2017ರ ದತ್ತು ಸ್ವೀಕಾರ ಅಧಿಸೂಚನೆ ಅಡಿಯಲ್ಲಿ ಮಾತ್ರ ಅನಾಥ, ಪರಿತ್ಯಕ್ತ ಅಥವಾ ಒಪ್ಪಿಸಲಾದ ಮಕ್ಕಳನ್ನು ದತ್ತು ನೀಡಲಾಗುವುದು. ಮಗುವನ್ನು ದತ್ತು ಪಡೆಯಲು ಆಸಕ್ತಿ ಇರುವವರು ಜಾಲತಾಣ www.cara.nic.in ನಲ್ಲಿ ನೊಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.

Related Stories

No stories found.
Kannada Bar & Bench
kannada.barandbench.com