[ಕೋವಿಡ್‌] ಕಾರುಗಳಲ್ಲಿ ಒಂಟಿಯಾಗಿ ಪಯಣಿಸುವವರಿಗೆ ಮಾಸ್ಕ್‌ ಕಡ್ಡಾಯವಲ್ಲ: ದೆಹಲಿ ಸರ್ಕಾರ

ಇತ್ತೀಚೆಗೆ ದೆಹಲಿ ಹೈಕೋರ್ಟ್‌ ನಾಲ್ಕುಚಕ್ರದ ವಾಹನದಲ್ಲಿ ಒಂಟಿಯಾಗಿ ಪಯಣಿಸುವವರಿಗೆ ಮಾಸ್ಕ್ ಕಡ್ಡಾಯ ಮಾಡಿರುವ ದೆಹಲಿ ಸರ್ಕಾರದ ಆದೇಶವನ್ನು "ಅಸಂಬದ್ಧ" ಎಂದಿತ್ತು.
facemask, car

facemask, car

ದೆಹಲಿ ರಾಜಧಾನಿ ವ್ಯಾಪ್ತಿಯಲ್ಲಿ ಕಾರಿನಲ್ಲಿ ಒಂಟಿಯಾಗಿ ಪಯಣಿಸುವವರಿಗೆ ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ ಎಂದು ದೆಹಲಿ ಸರ್ಕಾರ ಶುಕ್ರವಾರ ಹೇಳಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ಕಾರ್ಯದರ್ಶಿಯವರು ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೆ ಇರುವುದು ಅಪರಾಧ ಎಂದು ಕೋವಿಡ್‌ ನಿಯಮಾವಳಿ 3(h)(c)ಯಲ್ಲಿ ಹೇಳಲಾಗಿದ್ದು, ಈ ನಿಬಂಧನೆಯ ಅಡಿ ದಂಡ ವಿಧಿಸುವುದು ನಾಲ್ಕು ಚಕ್ರದ ವಾಹನದಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುವವರಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಇತ್ತೀಚೆಗೆ ದೆಹಲಿ ಹೈಕೋರ್ಟ್‌ ನಾಲ್ಕುಚಕ್ರದ ವಾಹನದಲ್ಲಿ ಒಂಟಿಯಾಗಿ ಪಯಣಿಸುವವರಿಗೆ ಮಾಸ್ಕ್ ಕಡ್ಡಾಯ ಮಾಡಿರುವ ದೆಹಲಿ ಸರ್ಕಾರದ ಆದೇಶವನ್ನು "ಅಸಂಬದ್ಧ" ಎಂದು ಕೋವಿಡ್‌ಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಾದ ಪ್ರಕರಣಗಳ ವಿಚಾರಣೆ ವೇಳೆ ಹೇಳಿತ್ತು. ಅಲ್ಲದೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಕುರಿತು ಎಲ್ಲ ಆಯಾಮಗಳಿಂದ ಪರಿಶೀಲಿಸಿ ಸೂಚನೆಗಳ ಕುರಿತಾದ ಹೊಸ ಆದೇಶವನ್ನು ಹೊರಡಿಸಬೇಕು ಎಂದಿತ್ತು.

ಆಸಕ್ತಿಕರ ಅಂಶವೆಂದರೆ, ಕಳೆದ ವರ್ಷ ಏಪ್ರಿಲ್‌ 2021ರಂದು ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಒಬ್ಬರೇ ವಾಹನದಲ್ಲಿ ಪ್ರಯಾಣಿಸುತ್ತಿದ್ದು, ಮತ್ತಾರೂ ಜೊತೆಯಲ್ಲಿ ಇಲ್ಲದೆ ಹೋದರೂ ಸಹ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶ ನೀಡಿತ್ತು.

Related Stories

No stories found.
Kannada Bar & Bench
kannada.barandbench.com