ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಸೋಂಕು ಸೃಷ್ಟಿಸಿರುವ ತಲ್ಲಣದಿಂದ ಜನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಿವಿಯಾಗುವ ಪ್ರಯತ್ನ ಮಾಡುತ್ತಿವೆ. ವಿಚಾರಣೆಗಳನ್ನು ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಿವಿ ಹಿಂಡುವ ಕೆಲಸವನ್ನು ನಿರಂತರವಾಗಿ ನಡೆಸಿವೆ. ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಪರಿಸ್ಥಿತಿಯ ಕುರಿತು ಇಂದು ಏನೇನು ಹೇಳಿವೆ ಎಂಬುದರ ಸಂಕ್ಷಿಪ್ತ ನೋಟ ಇಲ್ಲಿದೆ.
ಕೋವಿಡ್ ನಿಯಂತ್ರಣ ಕ್ರಮಗಳು ಜಾರಿಯಲ್ಲಿದ್ದಾಗಲೂ ಸಡಿಲಿಕೆ ಇರುವ ಬೆಳಿಗ್ಗೆ 7 ರಿಂದ 11 ಗಂಟೆಯ ನಂತರ ಮನೆಯಿಂದ ವಾಹನ ಅಥವಾ ಬರಿಗಾಲಿನಲ್ಲಿ ಹೊರಬರುವವರು ಆಧಾರ್ ಕಾರ್ಡ್ ಜೊತೆಯಲ್ಲಿ ಇಟ್ಟುಕೊಳ್ಳುವುದು ಕಡ್ಡಾಯ ಎಂದು ಬಾಂಬೆ ಹೈಕೋರ್ಟ್‌ನ ಔರಂಗಬಾದ್ ಪೀಠವು ಸೋಮವಾರ ಆದೇಶಿಸಿದೆ.
ಇದನ್ನು ಪಾಲಿಸುವಲ್ಲಿ ವಿಫಲವಾದವರ ವಿರುದ್ಧ ಸಂಬಂಧಿತ ಕ್ರಿಮಿನಲ್ ಅಪರಾಧಗಳ ಅಡಿ ಸಂಚಾರಿ ಪೊಲೀಸರು ದೂರು ದಾಖಲಿಸಬಹುದು ಎಂದು ನ್ಯಾಯಮೂರ್ತಿಗಳಾದ ರವೀಂದ್ರ ವಿ ಘುಗೆ ಮತ್ತು ಬಿ ಯು ದೇಬದ್ವಾರ್ ಅವರಿದ್ದ ವಿಭಾಗೀಯ ಪೀಠವು ಹೇಳಿದೆ. ವೈದ್ಯರು, ವೈದ್ಯಕೀಯ ಅಥವಾ ಪ್ಯಾರಾಮೆಡಿಕಲ್ ಸಿಬ್ಬಂದಿಯೂ ಆಧಾರ್ ಕಾರ್ಡ್ ಜೊತೆಗೆ ಕೊಂಡೊಯ್ಯಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ನಿರ್ದೇಶನಗಳು ಔರಂಗಬಾದ್ ಪೀಠದ ವ್ಯಾಪ್ತಿಗೆ ಒಳಪಡುವ ಹನ್ನೆರಡು ಜಿಲ್ಲೆಗಳಿಗೆ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಕೋವಿಡ್ ನಿಯಮ ಉಲ್ಲಂಘಿಸುವವರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಅವರ ದೂರವಾಣಿ ಸಂಖ್ಯೆಯನ್ನು ಪಡೆಯಬೇಕು ಎಂದೂ ಆದೇಶಿಸಿದೆ.
ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯಿಲ್ಲದಿದ್ದರೂ ಸಹ ಕೋವಿಡ್ ರೋಗಲಕ್ಷಣಗಳನ್ನು ತೋರಿಸುವ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವಂತೆ ನಿರ್ದೇಶನ ನೀಡುವಂತೆ ದೆಹಲಿ ಹೈಕೋರ್ಟ್ ಸೋಮವಾರ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕನಿಷ್ಠ ಆಮ್ಲಜನಕ ಮಟ್ಟಕ್ಕಿಂತ ಕಡಿಮೆ ಇರುವ ರೋಗಿಗಳ ಅನುಕೂಲಕ್ಕಾಗಿ ನಿರ್ಧಾರದ ವ್ಯಾಪಕ ಪ್ರಸರಣವನ್ನು ಖಚಿತಪಡಿಸಿಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ. ಸರ್ಕಾರದ ನಿರ್ದೇಶನಗಳನ್ನು ಸೂಕ್ಷ್ಮವಾಗಿ ಪಾಲಿಸುವಂತೆ ಆಸ್ಪತ್ರೆಗಳಿಗೆ ನ್ಯಾಯಾಲಯ ತಿಳಿಸಿದೆ. ಕೊರೊನಾ ಸೋಂಕಿನ ವರದಿ ತರದಿರುವುದರಿಂದ ಹಲವು ಆಸ್ಪತ್ರೆಗಳು ಗಂಭೀರವಾಗಿರುವ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸುತ್ತಿವೆ ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.
“ಜೀವನದ ಪ್ರಶ್ನೆ ಬಂದಾಗ ಅತ್ಯಂತ ಗಣ್ಯ ವ್ಯಕ್ತಿಗಳನ್ನು (ವಿಐಪಿ) ವಿಶೇಷವಾಗಿ ಕಾಣುವ ಸಂಸ್ಕೃತಿ ಇರಬಾರದು. ಇಲ್ಲಿ ಮೊದಲು ಬಂದವರಿಗೆ ಆದ್ಯತೆಯ ವಿಚಾರ ಮುಖ್ಯವಾಗಬೇಕು. ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು. ಪ್ರಭಾವದ ಆಧಾರದ ಮೇಲೆ ಹಾಸಿಗೆಗಳನ್ನು ನಿಗದಿಪಡಿಸಲಾಗುತ್ತಿದೆ ಎಂಬ ಹತಾಶೆ ಇದೆ” ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ತಮಿಳುನಾಡಿನಲ್ಲಿ ಕೋವಿಡ್ ನಿರ್ವಹಣೆ ಕುರಿತಾಗಿ ದಾಖಲಿಸಿಕೊಳ್ಳಲಾಗಿರುವ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರಿದ್ದ ವಿಭಾಗೀಯ ಪೀಠ ನಡೆಸಿತು. ರೆಮ್‌ಡಿಸಿವಿರ್, ಆಮ್ಲಜನಕ, ವೆಂಟಿಲೇಟರ್ ಮತ್ತು ಕೋವಿಡ್ ಲಸಿಕೆ ವಿಚಾರಗಳನ್ನು ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಕಳೆದ ವಿಚಾರಣೆಯ ಸಂದರ್ಭದಲ್ಲಿ ಪೀಠ ಹೇಳಿತ್ತು.
ಕೋವಿಡ್ ವಿಪತ್ತಿನ ಸಂದರ್ಭದಲ್ಲಿ ದೆಹಲಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಕುರಿತು ಸ್ವಯಂಪ್ರೇರಿತವಾಗಿ ಮನವಿ ದಾಖಲಿಸಿಕೊಂಡಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ರಾಷ್ಟ್ರ ರಾಜಧಾನಿಗೆ ಆಮ್ಲಜನಕ ಹೊತ್ತು ತರುವ ಟ್ಯಾಂಕರ್‌ಗಳಿಗೆ ಅಡಚಣೆ ಉಂಟು ಮಾಡದಂತೆ ಮನವಿ ಮಾಡಿದೆ.
ರಾಜಸ್ಥಾನದಲ್ಲಿ ಸ್ಥಳೀಯ ಅಧಿಕಾರಿಗಳು ದೆಹಲಿಗೆ ತೆರಳುವ ಆಮ್ಲಜನಕ ಟ್ಯಾಂಕರ್‌ಗಳನ್ನು ತಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ವಿಭಾಗೀಯ ಪೀಠಕ್ಕೆ ನೀಡಲಾಯಿತು. ಆಗ ನ್ಯಾಯಾಲಯವು “ಕೇಂದ್ರ ಮತ್ತು ಈ ನ್ಯಾಯಾಲಯವು ನೀಡಿದ ಆದೇಶವನ್ನು ರಾಜಸ್ಥಾನ ಗೌರವಿಸುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ನಿರೀಕ್ಷಿಸುತ್ತೇವೆ. ಆಮ್ಲಜನಕದ ಪೂರೈಕೆಯ ವಿಷಯದಲ್ಲಿ ಮಧ್ಯಸ್ಥಿಕೆ ನೂರಾರು ಜೀವಗಳಿಗೆ ಅಪಾಯವನ್ನುಂಟುಮಾಡುತ್ತದೆ” ಎಂದಿದೆ. ಅಂಥ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಮೇ 2ರಂದು ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಸಂದರ್ಭದಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸುವುದು ಕಂಡುಬಂದರೆ ತಕ್ಷಣವೇ ಎಣಿಕೆ ನಿಲ್ಲಿಸಲಾಗುವುದು ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ಗಂಭೀರ ಎಚ್ಚರಿಕೆ ನೀಡಿದೆ.
ಸಂಬಂಧಪಟ್ಟ ಪ್ರಾಧಿಕಾರಗಳು ಯೋಜನೆ ರೂಪಿಸುವ ಮೂಲಕ ಎರಡನೇ ಅಲೆಯ ಕೋವಿಡ್ ತಪ್ಪಿಸಿದ್ದರೆ ಸಾರ್ವಜನಿಕರಿಗೆ ಸುನಾಮಿಯ ರೀತಿಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಅಪ್ಪಳಿಸುತ್ತಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ತಮಿಳುನಾಡು ಮತ್ತು ಪುದುಚೆರಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮದ ಕುರಿತು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಪೀಠವು ಮೇಲಿನಂತೆ ಹೇಳಿದೆ.
“ಕಳೆದ ಒಂದು ವರ್ಷ ಯೋಜನೆ ರೂಪಿಸಿ ನಿರ್ಧಾರ ಕೈಗೊಳ್ಳಲು ನಿಮಗೆ ಕಾಲಾವಕಾಶವಿತ್ತು. ಕ್ರಮಕೈಗೊಂಡಿದ್ದರೆ ನಾವು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ... ಸೋಂಕಿನ ಭೀಕರ ಸುನಾಮಿಯ ಹೊಡೆತಕ್ಕೆ ಸಿಲುಕಿಸಲೆಂದೇ ನಮ್ಮನ್ನು ಹುಸಿ ಭದ್ರತೆಯ ತೆಕ್ಕೆಯಲ್ಲಿ ನಿದ್ರಿಸುವಂತೆ ಮಾಡಲಾಯಿತು” ಎಂದು ನ್ಯಾ. ಬ್ಯಾನರ್ಜಿ ಹೇಳಿದ್ದಾರೆ.