ಆಮ್ಲಜನಕ ಉತ್ಪಾದಕಗಳು/ ಸಾಂದ್ರಕಗಳನ್ನು ವೈಯಕ್ತಿಕ ಬಳಕೆಗೆ ಉಡುಗೊರೆಯಾಗಿ ಪರಿಗಣಿಸಿ ಅವುಗಳ ಮೇಲೆ ವಿಧಿಸಲಾಗಿರುವ ತೆರಿಗೆಗೆ ವಿನಾಯ್ತಿ ಏಕೆ ನೀಡಬಾರದು ಎಂದು ಕೇಂದ್ರ ಸರ್ಕಾರವನ್ನು ದೆಹಲಿ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ. ಆಮ್ಲಜನಕ ಸಾಧನಗಳನ್ನು ಆಮದು ಮಾಡಿಕೊಳ್ಳುವಾಗ ವಿಧಿಸಲಾಗುತ್ತಿರುವ ತೆರಿಗೆ ಕುರಿತು ನ್ಯಾಯಾಲಯ ಇದರಲ್ಲಿ ಯಾವುದೇ ಅರ್ಥ ಇಲ್ಲ. ಜನರಿಂದ ನೀವು ಎಷ್ಟು ತೆರಿಗೆ ಸಂಗ್ರಹಿಸುತ್ತೀರಿ ಎಂದು ಕಿಡಿಕಾರಿತು.
ಸಂವಿಧಾನದ "21 ನೇ ವಿಧಿಯನ್ನು ತೆರಿಗೆಗೆ ಒಳಪಡಿಸುತ್ತಿರುವ ಅಪರೂಪದ ಸಂದರ್ಭ ಇದು. ಇದೊಂದು ಕಠೋರ ಸ್ಥಿತಿ. ಸರ್ಕಾರ ಈ ಬಗ್ಗೆ ಏಕೆ ಸೂಕ್ಷ್ಮವಾಗಿ ಇರಬಾರದು" ಎಂದು ಅದು ಕೇಳಿತು. ಇದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಗುರುವಾರ ನ್ಯಾಯಾಲಯಕ್ಕೆ ಮಾಹಿತಿ ನೀಡುವುದಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ನ್ಯಾಯಾಲಯುಕ್ಕೆ ತಿಳಿಸಿದರು. ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವ ಅರ್ಜಿದಾರರು 85 ವರ್ಷದ ಕೋವಿಡ್ ರೋಗಿಯಾಗಿದ್ದು ಅವರ ಸೋದರಳಿಯ ಅಮೆರಿಕದಿಂದ ಉಡುಗೊರೆಯಾಗಿ ಆಮ್ಲಜನಕ ಸಾಧನವೊಂದನ್ನು ಕಳುಹಿಸಿಕೊಟ್ಟಿದ್ದರು. ಇದರ ಮೇಲೆ ಸರ್ಕಾರ ತೆರಿಗೆ ವಿಧಿಸಿದ್ದು ಇದು ಕಾನೂನುಬಾಹಿರ ಎಂದು ಅರ್ಜಿದಾರರು ವಾದಿಸಿದ್ದರು.
ತಮಿಳುನಾಡು ಮತ್ತು ಪುದುಚೇರಿಯಲ್ಲಿ ಕೋವಿಡ್ ನಿರ್ವಹಣೆಯ ಮೇಲ್ವಿಚಾರಣೆಗಾಗಿ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ತೂತ್ತುಕುಡಿಯ ವೇದಾಂತ ಸ್ಟರ್ಲೈಟ್ ಸ್ಥಾವರದ ಆಮ್ಲಜನಕ ಉತ್ಪಾದನೆ ಕುರಿತು ಮಾಹಿತಿ ಕೇಳಿದೆ. ಅಲ್ಲದೆ ವಿದೇಶಿ ನೆರವು ವಿಮಾನ ನಿಲ್ದಾಣದಲ್ಲಿ ಸಿಲುಕಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ. ರೆಮ್‌ಡಿಸಿವಿರ್ ಸರಬರಾಜು, ಕಾಳಸಂತೆಯಲ್ಲಿ ಮಾರಾಟ, ಕೋವಿಡ್ ಲಸಿಕೆ ನೀಡುವಿಕೆ ಇತ್ಯಾದಿ ವಿಷಯಗಳ ಪ್ರಗತಿ ಕುರಿತಂತೆಯೂ ಅದು ಪ್ರಶ್ನಿಸಿದೆ.
ಇದೇ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿ ಚುನಾವಣಾ ವಿಜಯೋತ್ಸವಗಳನ್ನು ಆಚರಿಸುವಂತಿಲ್ಲ ಎಂದಿರುವ ನ್ಯಾಯಾಲಯ ಪುದುಚೆರಿಯಲ್ಲಿ ಸಿಗರೇಟು ಸೇವನೆ ನಿರ್ಬಂಧಿಸಲು ಸಲ್ಲಿಸಲಾಗಿದ್ದ ಮನವಿಯನ್ನು ತಿರಸ್ಕರಿಸಿದೆ. ರಾಜ್ಯದಲ್ಲಿ ಹೊಸ ಸರ್ಕಾರ ಆಡಳಿತಕ್ಕೆ ಬಂದಿರುವುದರಿಂದ ಕೆಲವು ಕಾನೂನು ಅಧಿಕಾರಿಗಳ ನೇಮಕವಾಗಬೇಕಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣವನ್ನು ಸಂಕ್ಷಿಪ್ತವಾಗಿ ಆಲಿಸಿತು. ಕೆಲ ವರ್ಷಗಳ ಹಿಂದೆ ಪರಿಸರಕ್ಕೆ ಸಂಬಂಧಿಸಿದ ಅವಗಢದಿಂದಾಗಿ ವಿವಾದಕ್ಕೀಡಾಗಿದ್ದ ವೇದಾಂತ ಕಾರ್ಖಾನೆಯಲ್ಲಿ ಆಮ್ಲಜನಕ ಉತ್ಪಾದನೆಗೆ ಮಾತ್ರ ಅವಕಾಶ ನೀಡಿ ಸುಪ್ರೀಂಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡುವ ಸಂಬಂಧ ತೆಗೆದುಕೊಂಡಿದ್ದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಛತ್ತೀಸ್‌ಗಢ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ವ್ಯಕ್ತಿಗಳ ಆರ್ಥಿಕ ಸ್ಥಿತಿ ಆಧರಿಸಿ ಲಸಿಕೆ ನೀಡುವುದು ಸರಿಯಾದುದಲ್ಲ ಸಮರ್ಥನೀಯವೂ ಅಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ. ಮೂರನೇ ಹಂತದ ಕೋವಿಡ್ ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲಾಗಿತ್ತು.
ಅಶಕ್ತತೆ, ರೋಗ ಹರಡಲು ಇರುವ ಅವಕಾಶ ಮತ್ತು ಅರ್ಹ ವ್ಯಕ್ತಿಗಳ ಸಂಖ್ಯೆ ಇತ್ಯಾದಿ ಅಂಶಗಳನ್ನು ಆಧರಿಸಿ ವಿವಿಧ ಗುಂಪುಗಳಿಗೆ ನೀಡಬೇಕಿರುವ ಲಸಿಕೆ ಯೋಜನೆಯನ್ನು ಸರಿಪಡಿಸಿಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಪಿ ಆರ್ ರಾಮಚಂದ್ರ ಮೆನನ್ ಮತ್ತು ನ್ಯಾಯಮೂರ್ತಿ ಪಾರ್ಥ್ ಪ್ರತೀಮ್ ಸಾಹು ಅವರಿದ್ದ ಪೀಠ ನಿರ್ದೇಶಿಸಿದೆ. ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುದಾರರಿಗೆ ಲಸಿಕೆ ಹಂಚಿಕೆ ಮಾಡುವಾಗ ಸಮಂಜಸ ಅನುಪಾತ ಅನುಸರಿಸುವಂತೆ ಅದು ತಿಳಿಸಿದೆ.
ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದನ್ನು ತಡೆದ ಜಿಲ್ಲಾ ನ್ಯಾಯಾಧೀಶ ಶೈಲೇಶ್ ಕುಮಾರ್ ಯಾದವ್ ಅವರನ್ನು ನಿಷ್ಪಕ್ಷಪಾತ ತನಿಖೆ ನಡೆಸುವ ಸಲುವಾಗಿ ರಾಜಧಾನಿಯಿಂದ ಹೊರಗೆ ಕಳಿಸಬೇಕು ಎಂದು ತ್ರಿಪುರ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಕೋವಿಡ್ ನಿಯಮಗಳನ್ನು ಪಾಲಿಸುವ ಸಂಬಂಧ ಮದುವೆಯನ್ನು ತಡೆಯಲು ಯಾದವ್ ಮತ್ತವರ ತಂಡ ಯತ್ನಿಸಿದ್ದ ವೀಡಿಯೊ ವೈರಲ್ ಆಗಿತ್ತು.
ಮುಖ್ಯ ನ್ಯಾಯಾಧೀಶ ಅಖಿಲ್ ಖುರೇಶಿ ಮತ್ತು ನ್ಯಾಯಮೂರ್ತಿ ಎಸ್ ಜಿ ಚಟ್ಟೋಪಾಧ್ಯಾಯ ಅವರಿದ್ದ ವಿಭಾಗೀಯ ಪೀಠ ಯಾದವ್ ಅವರು ರಾಜಧಾನಿಯಲ್ಲೇ ಉಳಿದರೆ ಸಾಕ್ಷಿಗಳು ಘಟನೆಯ ಬಗ್ಗೆ ಸಾಕ್ಷ್ಯ ನುಡಿಯಲು ಸಾಧ್ಯವಾಗದು ಎಂದಿದೆ. ಅಲ್ಲದೆ ಮಾಧ್ಯಮಗಳ ಎದುರು ಯಾವುದೇ ಹೇಳಿಕೆ ನೀಡದಂತೆ ನ್ಯಾಯಾಲಯ ಅವರಿಗೆ ನಿರ್ಬಂಧ ವಿಧಿಸಿದೆ. ಪ್ರಕರಣದ ವಿಚಾರಣೆಯನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ನಿರ್ಬಂಧಿಸಬೇಕು ಎಂಬ ಅಡ್ವೊಕೇಟ್ ಜನರಲ್ ಎಸಎಸ್ ಡೇ ಅವರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದ್ದು ಮಾಧ್ಯಮ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗದು ಎಂದಿದೆ.