ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾದ ಆಮ್ಲಜನಕವು ಅಲ್ಲಿಗೆ ತಲುಪಿದೆಯೇ ಮತ್ತು ವಿತರಣಾ ಜಾಲದ ಮೂಲಕ ಆಸ್ಪತ್ರೆಗಳಿಗೆ ಲಭ್ಯವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಲೆಕ್ಕಪರಿಶೋಧನೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ದೇಶ ಎದುರಿಸುತ್ತಿರುವ ಕೋವಿಡ್ ಬಿಕ್ಕಟ್ಟನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಸುಪ್ರೀಂ ಕೋರ್ಟ್ ರಚಿಸಿರುವ 12 ಸದಸ್ಯರ ಕಾರ್ಯಪಡೆಯು ಆಮ್ಲಜನಕದ ಲೆಕ್ಕ ಪರಿಶೋಧನೆಗಾಗಿ ರಾಜ್ಯವಾರು ಉಪಸಮಿತಿಗಳನ್ನು ರಚಿಸಿಕೊಳ್ಳುವಂತೆ ನ್ಯಾಯಾಲಯ ಹೇಳಿದೆ. ಇದೇ ವೇಳೆ, ಈ ಲೆಕ್ಕ ಪರಿಶೋಧನೆಯ ಉದ್ದೇಶ ರೋಗಿಗಳನ್ನು ಶುಶ್ರೂಷೆ ಮಾಡುವಾಗ ವೈದ್ಯರು ಉತ್ತಮ ಉದ್ದೇಶದಿಂದ ತೆಗೆದುಕೊಂಡ ನಿರ್ದಾರಗಳನ್ನು ಪ್ರಶ್ನಿಸುವುದಲ್ಲ ಎಂದು ನ್ಯಾ.ಡಿ ವೈ ಚಂದ್ರಚೂಡ್ ಹಾಗೂ ನ್ಯಾ. ಎಂ ಆರ್ ಶಾ ಅವರ ಪೀಠ ಸ್ಪಷ್ಟಪಡಿಸಿದೆ. ಬದಲಿಗೆ, ಕೇಂದ್ರದಿಂದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸರಬರಾಜಾದ ಆಮ್ಲಜನಕದ ವಿತರಣೆ ಸಮರ್ಪಕವಾಗಿ ಆಗಿದೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳುವ ಉತ್ತರದಾಯಿ ಕ್ರಮ ಇದಾಗಿದೆ ಎಂದು ಪೀಠ ಹೇಳಿದೆ.
ಕೋವಿಡ್ ಸಾಂಕ್ರಾಮಿಕತೆಯ ಈ ಸನ್ನಿವೇಶದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ವಿಮೆಯ ಸೇವೆಗಳು ಅಗತ್ಯ ಸೇವೆಗಳಾಗಿದ್ದು ಅವುಗಳ ಸಿಬ್ಬಂದಿಗಳು ಆಸ್ಪತ್ರೆ ಮತ್ತು ಕಚೇರಿಗಳ ನಡುವೆ ಮುಕ್ತವಾಗಿ ಓಡಾಡಲು ಅನುಮತಿಸಬೇಕು ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ.
ಮ್ಯಾಕ್ಸ್ ಬೂಪಾ ಆರೋಗ್ಯ ವಿಮಾ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾ. ಪ್ರತಿಭಾ ಎಂ ಸಿಂಗ್ ಅವರಿದ್ದ ಏಕ ಸದಸ್ಯ ಪೀಠವು ಈ ಆದೇಶ ಹೊರಡಿಸಿದೆ. ದೆಹಲಿ ಸರ್ಕಾರವು ತನ್ನ ಉದ್ಯೋಗಿಗಳಿಗೆ ಸಂಚಾರಕ್ಕಾಗಿ ಇ-ಪಾಸ್ ನೀಡಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಸಂಸ್ಥೆಯು ನ್ಯಾಯಾಲಯದ ಮೆಟ್ಟಿಲೇರಿತ್ತು. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆದೇಶದ ಅನ್ವಯ, ವಿಮಾ ಕಂಪೆನಿಗಳ ಉದ್ಯೋಗಿಗಳು ಲಾಕ್‌ಡೌನ್ ವೇಳೆಯೂ ಮುಕ್ತವಾಗಿ ಸಂಚರಿಸಲು ಅನುಕೂಲವಾಗುವಂತೆ ಇ-ಪಾಸ್ ಪಡೆಯಲು ಅರ್ಹವಾಗಿವೆ. ಆದರೆ, ತಮ್ಮ ಉದ್ಯೋಗಿಗಳು ಸಲ್ಲಿಸಿದ್ದ ಇ-ಪಾಸ್ ಅರ್ಜಿಗಳನ್ನು ಸರ್ಕಾರ ಯಾವುದೇ ಕಾರಣ ನೀಡದೆ ತಿರಸ್ಕರಿಸಿತ್ತು ಎಂದು ಸಂಸ್ಥೆಯು ಅರ್ಜಿಯಲ್ಲಿ ತಿಳಿಸಿತ್ತು.
ಹಿರಿಯ ನಾಗರಿಕರು, ವಿಶೇಷ ಚೇತನರು ಮತ್ತು ಸರ್ಕಾರದ ಲಸಿಕಾ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದವರಿಗೆ ಮನೆ ಬಾಗಿಲಿಗೇ ತೆರಳಿ ಲಸಿಕೆ ಹಾಕುವ ಬಗ್ಗೆ ಒರಿಸ್ಸಾ ಹೈಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ. ಅರ್ಜಿದಾರರಾದ ಸೋಹನ್ ಮಿಶ್ರಾ ಹಾಗೂ ಮತ್ತಿತರರು ಈ ವಿಚಾರವಾಗಿ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಾ. ಎಸ್ ಮುರಳೀಧರ್ ಮತ್ತು ನ್ಯಾ ಬಿ ಪಿ ರೌಟ್‌ರೇ ಅವರಿದ್ದ ಪೀಠವು ಇತ್ತೀಚೆಗೆ ನಡೆಸಿತು.
‘ಲಸಿಕೆಯ ಸಾಮರ್ಥ್ಯ ಮತ್ತು ವಿತರಣೆ’ಯ ಕುರಿತಾಗಿ ಪ್ರತಿಕ್ರಿಯಿಸುವ ವೇಳೆ ಸುಪ್ರೀಂ ಕೋರ್ಟ್ ಸಹ ಇದೇ ವಿಚಾರವಾಗಿ ಕಾಳಜಿಯನ್ನು ವ್ಯಕ್ತಪಡಿಸಿದ್ದನ್ನು ಪೀಠವು ನೆನೆಯಿತು. ಗ್ರಾಮೀಣ ಭಾಗಗಳು, ಸಾಮಾಜಿಕವಾಗಿ, ಅರ್ಥಿಕವಾಗಿ ಹಿಂದುಳಿದಿರುವ ವರ್ಗಗಳು ಲಸಿಕಾ ಕಾರ್ಯಕ್ರಮದಲ್ಲಿ ಸ್ಥಾನ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿತ್ತು. ಅಲ್ಲದೆ, ಅಂತಹ ಸಮುದಾಯದ ಮಂದಿ ಪ್ರಯಾಣಿಸುವುದನ್ನು ತಪ್ಪಿಸಲು, ಆ ಮೂಲಕ ಸೋಂಕಿನ ಸಾಧ್ಯತೆಗೆ ಈಡಾಗದಂತೆ ರಕ್ಷಿಸುವ ಉದ್ದೇಶದಿಂದ ಮನೆ ಬಾಗಿಲಿಗೇ ತಲುಪಿ ಲಸಿಕೆ ನೀಡಬಾರದೇಕೆ ಎಂದು ಸರ್ವೋಚ್ಚ ನ್ಯಾಯಾಲಯವು ಕೇಂದ್ರವನ್ನು ಪ್ರಶ್ನಿಸಿತ್ತು ಎನ್ನುವ ಅಂಶವನ್ನು ಪೀಠವು ನೆನೆಯಿತು. ಈ ವೇಳೆ ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ ಕೆ ಪರ್ಹಿ ಕೇಂದ್ರ ಸರ್ಕಾರದ ಲಸಿಕಾ ನೀತಿಯನ್ನು ತಿಳಿದು ಲಸಿಕಾ ಕೇಂದ್ರಗಳಿಗೆ ತೆರಳಲು ಸಾಧ್ಯವಾಗವರಿಗೆ ಅವರಿರುವೆಡೆಗೆಯೇ ಲಸಿಕೆ ಹಾಕಲು ಸಾಧ್ಯವೇ ಎನ್ನುವ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವುದಾಗಿ ಪೀಠಕ್ಕೆ ತಿಳಿಸಿದರು.